+91 8255-266211
info@shreeodiyoor.org

ತುಳುನಾಡ್ದ ಜಾತ್ರೆ

“ಸಮಾಜದಲ್ಲಿ ಶಾಂತಿ ನೆಲೆಸಲು ಸಾಮರಸ್ಯದ ಅಗತ್ಯವಿದೆ. ಮನುಷ್ಯ-ಮನುಷ್ಯರ ನಡುವಿನ ಪ್ರೀತಿ ಇದ್ದಲ್ಲಿ ಭಗವಂತನನ್ನು ಪ್ರೀತಿಸುವುದಕ್ಕೆ ಸಾಧ್ಯ. ಮಾನವೀಯ ಮೌಲ್ಯಗಳು ನಮ್ಮೊಳಗೆ ತುಂಬಿದಾಗ ದಾನವ ಗುಣ ಮಾಯವಾಗಿ ಮಾಧವನೇ ಕಾಣಿಸುತ್ತಾನೆ. ಜಾತ್ರೆ-ಉತ್ಸವಗಳು ಎಂದರೆ ಸೇವೆಗೊಂದು ಅವಕಾಶ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವಕರನ್ನು ಜಾಗೃತಿಗೊಳಿಸುವ ಸದುದ್ದೇಶದಿಂದ ತುಳುನಾಡ್ದ ಜಾತ್ರೆ-ಒಡಿಯೂರು ರಥೋತ್ಸವವನ್ನು ಆಯೋಜಿಸಲಾಗಿದೆ. ತುಳುನಾಡ್ದ ಜಾತ್ರೆಯ ಉದ್ದೇಶವೇ ತುಳು ಭಾಷೆಯ ಉಳಿವು. ಭಾಷೆ-ಸಂಸ್ಕೃತಿ ಒಂದಕ್ಕೊಂದು ಸಂಬಂಧಪಟ್ಟದ್ದು, ಧರ್ಮವನ್ನು ಬಿಟ್ಟು ಇವೆರಡೂ ಇರುವುದಕ್ಕೆ ಸಾಧ್ಯವಿಲ್ಲ. ಬದುಕಿನ ರಥ ಸಾಗಬೇಕಾದರೆ ಸಂಸ್ಕೃತಿ-ಸಂಸ್ಕಾರದ ಅಗತ್ಯತೆ ಇದೆ. 2500 ವರ್ಷಗಳ ಇತಿಹಾಸವಿರುವ ತುಳುಭಾಷೆಗೆ ಸರಿಯಾದ ಸ್ಥಾನಮಾನ ಸಿಗದಿರುವುದು ದುಃಖಕರ ವಿಚಾರವಾಗಿದೆ. ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂಬ ಉದ್ದೇಶ ನಮ್ಮದ್ದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2018 ರ ಅಂಗವಾಗಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ 2018ರ ದಿನದರ್ಶಿಕೆ-ದಿನಚರಿಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಕವಿ, ಸಾಹಿತಿ ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ. ವಸಂತ ಕುಮಾರ ಪೆರ್ಲ ಇವರು ಮಾತನಾಡಿ ಒಡಿಯೂರು ಶ್ರೀ ಸಂಸ್ಥಾನದಲ್ಲಿ ನಡೆಯುತ್ತಿರುವ ತುಳು ಸಮ್ಮೇಳನ ಹಾಗೂ ಒಡಿಯೂರು ರಥೋತ್ಸವ ಶ್ರೀ ಸಂಸ್ಥಾನದ ಎರಡು ಕಣ್ಣುಗಳಿದ್ದಂತೆ. ತುಳು ಸಂಸ್ಕೃತಿ ಉಳಿದಿರುವುದು ಕೃಷಿಯಿಂದಾಗಿ ಇಂದಿನ ದಿನಗಳಲ್ಲಿ ಕೃಷಿ ಯಾರಿಗೂ ಬೇಡವಾಗಿದೆ. ವಾಣಿಜ್ಯ ಬೆಳೆಯಿಂದಾಗಿ ಕೃಷಿ ವಿನಾಶದಂಚಿನಲ್ಲಿದೆ” ಎಂದರು.

ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಆರ್. ಶೆಟ್ಟಿ, ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಮುಗುಳಿ ತಿರುಮಲೇಶ್ವರ ಭಟ್, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರಿನ ಅಧ್ಯಕ್ಷ ಶ್ರೀ ಎ. ಅಶೋಕ್ ಕುಮಾರ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಶ್ರೀಮತಿ ವಿಜಯಾ ಶೆಟ್ಟಿ ಸಾಲೆತ್ತೂರು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ, ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಪನ್ಮೂಲ ವ್ಯಕ್ತಿ ಶ್ರೀ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ತಾಲೂಕು ವಿಸ್ತರಣಾಧಿಕಾರಿ ಶ್ರೀ ಸುರೇಶ್ ಶೆಟ್ಟಿ ಮೊಗರೊಡಿ ವಂದಿಸಿದರು. ಕು| ದೀಕ್ಷಿತಾ ಆಶಯಗೀತೆ ಹಾಡಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top