+91 8255-266211
info@shreeodiyoor.org

ಸಂಸ್ಥಾನಮ್

ಶ್ರೀ ದತ್ತಾಂಜನೇಯ ಕ್ಷೇತ್ರ, ದಕ್ಷಿಣ ಗಾಣಗಾಪುರ

ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಕಳೆಂಜಿಮಲೆಯ ಕಬಂಧ ಬಾಹುಗಳ ಮಧ್ಯೆ ಒಡಿಯೂರಿನಲ್ಲಿ 15-2-1989ರಲ್ಲಿ ಸಾತ್ವಿಕ ಶಕ್ತಿಯ ಸಾಕಾರ ರೂಪವಾಗಿ ಅಪೂರ್ವ ಸಾಧಕ ನಾರಾಯಣ ಸ್ವಾಮಿ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಓಂ ಶ್ರೀ ವೀರಾಂಜನೇಯ ಸ್ವಾಮೀ ಕ್ಷೇತ್ರ ಮುಂದೆ ಶ್ರೀ ಗುರುದೇವದತ್ತ ಸಂಸ್ಥಾನವಾಯಿತು. ಸಾಧಕರು ಶ್ರೀ ಗುರುದೇವಾನಂದ ಸ್ವಾಮೀಜಿ ಆದರು. ಮೂರು ದಶಕದ ಹಿಂದೆ ಕಲ್ಲು, ಮುಳ್ಳುಗಳ, ಗಿಡ ಗಂಟಿಗಳ ನೆಲವಾಗಿತ್ತು ಒಡಿಯೂರು. ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಅನನ್ಯ ಪಾತ್ರದಿಂದ ಸೃಷ್ಟಿಯಾದ, ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಬಹಳ ಕ್ಷಿಪ್ರಾವಧಿಯಲ್ಲಿ ಬಹುರೂಪಿಯಾಗಿ ಬೆಳೆದು ನಿಂತಿದೆ. ದಕ್ಷಿಣದ ಗಾಣಗಾಪುರವಾಗಿ ಮತೀಯ ಸಾಮರಸ್ಯದ ನೆಲೆಯಾಗಿದೆ.

ಇದು ಬರಿಯ ಶ್ರೀ ದತ್ತಾಂಜನೇಯ ದೇವಾಲಯವಷ್ಟೇ ಆಗಿ ಉನ್ನತಿ ಸಾಧಿಸಿದುದಲ್ಲ ಒಂದು ಸಾಂಸ್ಕೃತಿಕ ಕೇಂದ್ರವಾಗಿ ಜ್ಞಾನ ಸತ್ರದ ಪುಣ್ಯ ನೆಲೆಯಾಗಿ, ಗುರುತತ್ವದ ಪ್ರಚಾರದ ದತ್ತ ಪೀಠವಾಗಿ, ನೊಂದು ಬೆಂದವರ ಶಾಂತಿ ಧಾಮವಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತದ ಆಸರೆಯಾಗಿ, ತುಳು ಭಾಷಾಭಿಮಾನ ಬೆಳೆಸುವ ದೇಗುಲವಾಗಿ ಬೃಹದೆತ್ತರಕ್ಕೆ ವ್ಯಾಪಿಸಿದೆ.

ಶ್ರೀ ಸಂಸ್ಠಾನದ ಸಾಧನೆಯ ಹಿಂದೆ ಶ್ರೀಗಳ ಅದ್ಭುತ ಅಲೌಕಿಕ ಶಕ್ತಿ ಕೈಯಾಡಿಸಿದೆ. ಸಾಧನೆ, ಸಿದ್ಧಿಗಳು ಮೇಳೈಸಿದೆ. ತ್ಯಾಗ, ಸಾಹಸದ ಸಾಕ್ಷಿ ಮೈತಳೆದಿದೆ. ಸಾಮಾಜಿಕ ಚಿಂತನೆ, ಆತ್ಮ ಶಕ್ತಿಯ ಆಕರ್ಷಣೆಯ ಜತೆಗೆ ಸೇವಾ ಪರಾಯಣತೆ ಸಮನ್ವಯಗೊಂಡಿದೆ.

 

ಗರ್ಭಗುಡಿ ಗೋಪುರ

ಶ್ರೀ ಸಂಸ್ಥಾನದಲ್ಲಿ ವಿಶೇಷವಾಗಿ ನಿರ್ಮಾಣಗೊಂಡಿರುವ ಕೃಷ್ಣ ಶಿಲೆಯ ಗರ್ಭಗುಡಿ ಗೋಪುರ ಮೂವತ್ತೈದು ಅಡಿಗಳಷ್ಟು ಎತ್ತರವಾಗಿದೆ. ವಿಶೇಷವಾದ ಪದ್ಮ ಪೀಠದಿಂದ ಈ ವಿಶಿಷ್ಠ ಗೋಪುರ ಮೇಲೇರಿ ಬಂದಿದೆ.

ತಮಿಳುನಾಡಿನ ಕಾರೈಕುಡಿ ಎಂಬಲ್ಲಿ ಶಿಲಾ ಕೆತ್ತನೆಯನ್ನು ಹಲವು ಮಂದಿ ಶಿಲ್ಪ ಕಲಾ ನಿಪುಣರು ನಿರ್ವಹಿಸಿ, ಸುಮಾರು 48 ದಿನ ಶ್ರೀ ಸಂಸ್ಥಾನದಲ್ಲಿ ನೂರಾರು ಶಿಲ್ಪಿಗಳು ಗರ್ಭಗುಡಿಯ ಮುಕ್ತಾಯದ ಕೌಶಲವನ್ನು ಮಾಡಿ ಶಿಲಾಮಯ ಗರ್ಭಗುಡಿಯನ್ನು ನಿರ್ಮಿಸಿದ್ದಾರೆ. ಶಿಲಾಮಯ ಗರ್ಭಗುಡಿ ಹೊಯಿಸಳರ ವಾಸ್ತು ಶಿಲ್ಪ ಶೈಲಿಯ ವೇಸರ ಶಿಲ್ಪ ಶೈಲಿಯಲ್ಲಿದೆ. ಆಕಾರ ವೈವಿಧ್ಯದಲ್ಲಿ ಅಷ್ಟಾಸ್ರ ಪ್ರಾಸಾದವಾಗಿ ಕಂಗೊಳಿಸುತ್ತಿದೆ.

ಖ್ಯಾತ ಸ್ಥಪತಿ ದಕ್ಷಿಣಾಮೂರ್ತಿ ಅವರು ಈ ನಿರ್ಮಾಣದ ನೇತೃತ್ವ ವಹಿಸಿದ್ದರು. ಅವರು ಈ ಹಿಂದೆ ಶ್ರೀ ಸಂಸ್ಥಾನದಲ್ಲಿ ಸುತ್ತುಗೋಪುರ, ನಮಸ್ಕಾರ ಮಂಟಪದ ಕಾಮಗಾರಿಯನ್ನು ಮಾಡಿದ್ದರು. ದಕ್ಷಿಣಾಮೂರ್ತಿ ಅವರು ಶ್ರೀ ಸಂಸ್ಥಾನಕ್ಕೆ ಐದು ಅಡಿ ನಾಲ್ಕು ಇಂಚು ಎತ್ತರದ ಕೃಷ್ಣ ಶಿಲೆಯಿಂದ ರೂಪು ತಳೆದ ಆಂಜನೇಯ ವಿಗ್ರಹವನ್ನು ಕೊಡುಗೆಯನ್ನಾಗಿ ನೀಡಿದ್ದಾರೆ.

ನೂತನ ಶಿಲಾಮಯ ಗರ್ಭ ಗುಡಿಯಲ್ಲಿ ಒಂದು ಅಡಿ ಒಂದು ಇಂಚು ಎತ್ತರದ ಸ್ಪಟಿಕದ ದತ್ತಾತ್ರೇಯ ವಿಗ್ರಹವನ್ನು 21-2-2001ರಂದು ಪ್ರತಿಷ್ಠೆಗೊಳಿಸಿದಾಗಲೇ ಕೃಷ್ಣ ಶಿಲೆಯ ಆಂಜನೇಯ ವಿಗ್ರಹವನ್ನು ಪ್ರತಿಷ್ಠೆ ಮಾಡಲಾಯಿತು. ಋಷಿ ಸಂಪ್ರದಾಯ ರೀತಿಯಲ್ಲಿ ಪ್ರತಿಷ್ಠಾ ಕಾರ್ಯಕ್ರಮಗಳು ಜರಗಿದೆ. ಹನ್ನೆರಡು ವರ್ಷಗಳ ಹಿಂದೆ ಯಾವ ಮುಹೂರ್ತದಲ್ಲಿ ಶ್ರೀ ಸಂಸ್ಥಾನದಲ್ಲಿ ಪ್ರತಿಷ್ಠಾ ವಿಧಿಗಳು ನಡೆದವೋ ಅದೇ ಮುಹೂರ್ತ ಕಾಲದಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಪುನಃ ಪ್ರತಿಷ್ಠೆ ಜರಗಿದ್ದು ಗುರುಸಂಕಲ್ಪವೇ ಸರಿ. ಶ್ರೀ ಸಂಸ್ಥಾನದ ರಾಜಗೋಪುರ ಹತ್ತು ಹಲವಾರು ವೈಶಿಷ್ಟ್ಯತೆಗಳೊಂದಿಗೆ ವಿಶೇಷವಾಗಿ ಆಕರ್ಷಿಸಲ್ಪಡುತ್ತದೆ.

 

ಶ್ರೀ ಸಂಸ್ಥಾನದ ಆರಾಧನಾ ಮೂರ್ತಿ ದತ್ತಾಂಜನೇಯ ಸ್ವಾಮೀ

ಅತ್ರಿ ಮಹರ್ಷಿ – ಅನಸೂಯ ದೇವಿಯರ ಕಣ್ಮಣಿ, ದತ್ತಾತ್ರೇಯ ಪ್ರಭು ತ್ರಿಮೂರ್ತಿ ಸ್ವರೂಪ. ಗುರುದೇವ ದತ್ತಾತ್ರೇಯ ಸೃಷ್ಟಿಕರ್ತನೂ, ಪಾಲನಾ ಕರ್ತೃವೂ, ಲಯಕಾರಣಕರ್ತನೂ ಹೌದು. ಜಗನ್ನಿಯಮಕನಾದ ಗುರುದೇವನು ಭಕ್ತ ಪರಿವಾರದಲ್ಲಿ ಸದ್ಭಾವ, ಸಚ್ಚಿಂತನೆ, ಸದಾಚಾರಗಳನ್ನು ಸೃಷ್ಟಿಸುವವನು ಹಾಗೆಯೇ ಪ್ರಸನ್ನತೆ, ಧರ್ಮಾಚರಣೆ, ಆತ್ಮ ಚಿಂತನೆಯ ದೈವೀಗುಣಗಳ ಪಾಲಕನು, ಕಾಮಕ್ರೋಧಾದಿ ಅಮಂಗಳವನ್ನು ಲಯ ಮಾಡುವ ಪ್ರಭು ಪರಮೇಶ್ವರನು. ಹೀಗೆ ಗುರುದೇವದತ್ತನು ಇಲ್ಲಿ ಆರಾಧ್ಯನಾದರೆ ಜತೆಗೆ ಆಂಜನೇಯ ಸ್ವಾಮಿಯೂ, ಶ್ರೀ ವಜ್ರಮಾತಾ ದೇವಿಯೂ ಇಲ್ಲಿ ಪ್ರಧಾನ ಆರಾಧ್ಯ ದೇವರು.

ಬಲಮುರಿ ಗಣಪತಿ ವಿಘ್ನನಾಶಕನಾಗಿ ಶ್ರೀ ಸಂಸ್ಥಾನದಲ್ಲಿ ಪೂಜೆಗೊಳ್ಳುತ್ತಾನೆ. ಸುಬ್ರಹ್ಮಣ್ಯ ಸ್ವಾಮಿಯು ಇಲ್ಲಿ ಪರಿವಾರ ದೇವರುಗಳಲ್ಲಿರುವÀನು. ಶ್ರೀ ಮಹಾವಜ್ರಮಾತೆ ಪ್ರಸನ್ನರೂಪಿಯಾಗಿ ಪರ್ವ ವಿಶೇಷದಲ್ಲಿ ಸೇವೆ ಸ್ವೀಕರಿಸುವ ಜಗದ್ಧಾತ್ರಿ. ಶಕ್ತಿ ಸ್ವರೂಪಿಣಿಯಾದ ಭದ್ರಕಾಳಿ ದಕ್ಷಿಣಾಮೂರ್ತಿ, ಮೂಲರಾಮ ಪರಿವಾರ ದೇವತೆಗಳ ಜತೆಗೆ ಇಲ್ಲಿ ಆರಾಧಿಸಲಾಗುತ್ತದೆ.

ಶ್ರೀ ಸಂಸ್ಥಾನದ ನಮಸ್ಕಾರ ಮಂಟಪದ ಹೊರಗೆ ಸುತ್ತು ಗೋಪುರದ ಮಧ್ಯೆ ಅತ್ತಿ(ಔದುಂಬರ), ನೆಲ್ಲಿ (ಆಮಲಕ) ಮತ್ತು ಪಾರಿಜಾತ ವೃಕ್ಷಗಳಿವೆ. ಈ ಗಿಡಗಳನ್ನು ಯಾರೂ ನೆಟ್ಟು ಬೆಳಿಸಿದ್ದಲ್ಲ. ಅದರಷ್ಟಕ್ಕೆ ಪ್ರಾಕೃತಿಕವಾಗಿ ಹುಟ್ಟಿ ಬೆಳದದ್ದು. ದತ್ತಾಂಜನೇಯ ಸನ್ನಿಧಿಯಲ್ಲಿ ಈ ವೃಕ್ಷಗಳ ಇರುವಿಕೆಗೆ ಹೆಚ್ಚು ಮಹತ್ವವಿದೆ. ಈ ಮೂರು ವೃಕ್ಷಗಳು ಅನುಪಮ ಔಷಧೀಯ ಗುಣಗಳಿರುವ ವೃಕ್ಷಗಳು.

ಸ್ವರ್ಣ ಪ್ರಶ್ನೆಯ ಆಧಾರದಿಂದ ವಿವೇಚಿಸಿದಾಗ, ಅತ್ತಿ, ನೆಲ್ಲಿ, ಪಾರಿಜಾತ ವೃಕ್ಷಗಳಿಗೂ ಗಿಡಮೂಲಿಕೆಗಳಿಗೂ ಸಂಜೀವಿನಿ ಇದ್ದ ಚಂದ್ರದ್ರೋಣ ಗಿರಿಯ ಸಂಪರ್ಕವೇ ಕಾರಣವೆಂದು ನಿರ್ಣಯಿಸಬಹುದಾಗಿದೆ.

ಅತ್ತಿ ಮರದಲ್ಲಿ ಲಕ್ಷ್ಮೀನಾರಾಯಣ ಅಸ್ತಿತ್ವ ಇದೆ, ಹಾಗಾದರೆ ಇಲ್ಲಿ ದತ್ತನ ಸಾನಿಧ್ಯವಿದೆ. ಪಾರಿಜಾತದಲ್ಲಿ ಪ್ರಾಣದೇವರು ನೆಲೆಯಾಗಿರುವನು. ಆದುದರಿಂದ ದತ್ತನೂ ಆಂಜನೇಯನೂ ನೆಲೆಯಾಗಿರುವ ಔದುಂಬರ – ಪಾರಿಜಾತ ಜತೆ ಜತೆಯಾಗಿರುವುದರಿಂದ ದತ್ತಾಂಜನೇಯರ ದಿವ್ಯ ಸಾನಿಧ್ಯ ಪೌರಾಣಿಕ ಆಧಾರಕ್ಕೆ ನೀಡುವ ಪ್ರತ್ಯಕ್ಷ ಸಾಕ್ಷಿಯಾಗಿದೆ. ಹಾಗೆಯೇ ನೆಲ್ಲಿ ವಿಷ್ಣು ಸಾನಿಧ್ಯದ ಪ್ರತೀತ. 

 

ಭವ್ಯ ರಾಜಗೋಪುರ

ಶ್ರೀ ಸಂಸ್ಥಾನವನ್ನು ಪ್ರವೇಸಿಸುವಂತೆಯೇ 40 ಅಡಿ ಎತ್ತರದ ಭವ್ಯ ಕಲಾತ್ಮಕ ರಾಜಗೋಪುರ ರಚನೆ ನಮ್ಮನ್ನು ಸ್ವಾಗತಿಸುತ್ತದೆ. ವಿಶಾಲವಾದ ಪುರಾಣ ಇತಿಹಾಸವನ್ನು ಪರಿಚಯಿಸುವ ಚಿತ್ರಕಾವ್ಯಗಳು ನಮ್ಮ ಮನ ಸೂರೆಗೊಳ್ಳುತ್ತದೆ. ಪೂರ್ವ ಭಾಗದಲ್ಲಿ ಹನುಮದ್ ವಿಲಾಸದ ಕಥಾನಕ ಮೋಹಕವಾಗಿ ಚಿತ್ರರೂಪ  ತಳೆದಿದೆ. ದಕ್ಷಿಣ ಭಾಗದಲ್ಲಿ ಶಿವಲೀಲೆಯ ಕಥೆಗಳು ಚಿತ್ರಮಾಲಿಕೆಯಲ್ಲಿ ರಾರಾಜಿಸುತ್ತದೆ. ಪಶ್ಚಿಮ ಭಾಗದಲ್ಲಿ ಗುರು ದತ್ತಾತ್ರೇಯರ ಮಹಿಮೆಯನ್ನು ಸಾರುವ ಕಲಾಕೃತಿಗಳು ನಮ್ಮ ಗಮನ ಸೆಳೆಯುತ್ತದೆ. ಉತ್ತರ ಭಾಗದಲ್ಲಿ ಶ್ರೀಮನ್ನಾರಾಯಣನ ಮೂರ್ತಿ ಕಲಾವೈಭವಕ್ಕೆ ಸಾಕ್ಷಿಯಾಗಿದೆ. ಒಟ್ಟು 64 ಶಿಲ್ಪಗಳು 64 ಕಲೆಗಳನ್ನು ಧ್ವನಿಸುತ್ತದೆ ಎನ್ನುವುದು ಪೂಜ್ಯಶ್ರೀಗಳ ಇಂಗಿತ.

ಅಲ್ಲಲ್ಲಿ ಕಾಣುವ ಉಬ್ಬು ಚಿತ್ರಗಳು ಪುರಾಣದ ವಿವಿಧ ಕಥೆಗಳನ್ನು ಉಲ್ಲೇಖಿಸುತ್ತದೆ. ಇಲ್ಲಿಯ ಕಲಾ ನೈಪುಣ್ಯದ ವರ್ಣ ಚಿತ್ರಗಳು ಪೌರಾಣಿಕ ಲೋಕವನ್ನೇ ನಮ್ಮ ಕಣ್ಣೆದುರು ಸೃಷ್ಟಿಸುವಂತಿದೆ.

 

 

ಸುತ್ತು ಗೋಪುರ – ಯಜ್ಞ ಮಂಟಪ

ಶ್ರೀ ಸಂಸ್ಥಾನದ ಶಿಲಾಮಯ ಗರ್ಭಗುಡಿಯ ಹೊರಗೆ ಅಷ್ಟ ಪಟ್ಟಿ ಆಕಾರದಲ್ಲಿ ಆಕರ್ಷಕವಾಗಿ ಸುತ್ತು ಗೋಪುರದ ನಿರ್ಮಾಣವಾಗಿದೆ. ಇದರಲ್ಲಿ ಮನಸೂರೆಗೊಳ್ಳುವ ಬೇರೆ ಬೇರೆ ವರ್ಣ ಚಿತ್ರಗಳನ್ನು ರಚಿಸಲಾಗಿದೆ. ನೋಡುವವರಿಗೆ ಖುಷಿಕೊಡುತ್ತದೆ.

ಗರ್ಭ ಗುಡಿಯ ಎದುರಿನಲ್ಲಿ ಯಜ್ಞ ಮಂಟಪ  ನುಣುಪಾದ ಗ್ರಾನೈಟ್ ಕಲ್ಲಿನಿಂದ ನಿರ್ಮಾಣವಾಗಿದೆ. ಇಲ್ಲಿಯ ನಾಜೂಕಿನ ಕಲಾತ್ಮಕ ಕೆಲಸಗಳು ಕಣ್ಮನಗಳಿಗೆ ತಂಪು ನೀಡುತ್ತದೆ. ನಮಸ್ಕಾರ ಮಂಟಪ ಪ್ರವೇಶಿಸುವ ಬಾಗಿಲಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ವಿಶಿಷ್ಟ ಕೆತ್ತನೆಗಳು ಆಪ್ಯಾಯಮಾನವಾಗಿದೆ. ಎಲ್ಲವೂ ಪೂಜ್ಯ ಶ್ರೀಗಳ ನಿರ್ದೇಶನದಂತೆ ಕಲಾ ನೈಪುಣ್ಯ ಇಲ್ಲಿ ಸಾಕ್ಷಾತ್ಕಾರವಾಗಿದೆ.

 

ನಿತ್ಯಾನಂದ ಗುಹೆ

ಶ್ರೀ ಸಂಸ್ಥಾನದ ಇನ್ನೊಂದು ದೊಡ್ಡ ಆಕರ್ಷಣೆ ನೆಲವನ್ನು ಕೊರೆದು ಸುಂದರವಾಗಿ ನಿರ್ಮಿಸಿದ ನಿತ್ಯಾನಂದ ಗುಹೆ. ಮುನಿ ಸಮರ್ಥ ಶ್ರೀ ಶ್ರೀ ವಿವೇಕಾನಂದ ಮುನಿಗಳ ಅವರ ದಿವ್ಯ ಉಪಸ್ಥಿತಿಯಲ್ಲಿ  ಸುಬ್ರಹ್ಮಣ್ಯ ಮಠದ ಅಂದಿನ ಯತಿಗಳಾಗಿದ್ದ ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ಅವರು ಈ ಗುಹೆಯನ್ನು ಲೋಕಾರ್ಪಣೆ ಮಾಡಿದ್ದರು.

ನಿತ್ಯಾನಂದ ಗುಹೆಯಲ್ಲಿ ಏಕಾಂತದಲ್ಲಿದ್ದು, ಧ್ಯಾನ, ತಪಸ್ಸು, ಚಿಂತನೆ ಮಾಡಲು ಅನುಕೂಲವಾಗುವಂತಹ ಪ್ರಶಾಂತ ತಾಣಗಳ ನಿರ್ಮಾಣವಾಗಿದೆ. ಗಾಳಿ, ಬೆಳಕಿಗೆ ಇಲ್ಲಿ ತೊಡಕಿಲ್ಲ. ಒಬ್ಬರು ನಿರಾಯಾಸದಿಂದ ಕುಳಿತು ಧ್ಯಾನ, ತಪಾಚರಣೆ ಮಾಡಬಹುದು. ಈ ಗುಹೆಯ ತಲಭಾಗಕ್ಕೆ  ಕಿವಿಗೊಟ್ಟಾಲಿಸಿದರೆ ‘ಓಂ’ಕಾರ ಪ್ರತಿ ಧ್ವನಿಸುತ್ತದೆ. ಗುಹೆಯೊಳಗೆ ಸೆಖೆÉ ಚಳಿಯ ಅನುಭವ ಇಲ್ಲ. ಏಕಾಗ್ರತೆಯ ಅಧ್ಯಯನಕ್ಕೂ ಇದು ಅನುಕೂಲಕರವಾಗಿದೆ. 

ಜನವರಿ 28, 2007ರಲ್ಲಿ ನಿತ್ಯಾನಂದ ಗುಹೆಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ, ಮಹಾಗಣಪತಿ ಮತ್ತು ವಜ್ರಮಾತೆಯ ಬಿಂಬಗಳನ್ನು ಪ್ರತಿಷ್ಠೆ ಮಾಡಲಾಯಿತು. ಬಿಂಬ ಪ್ರತಿಷ್ಠಿತವಾದ ಶ್ರೀ ಸಂಸ್ಥಾನದ ವಿಸ್ಕøತ ಗುಹಾಲಯವನ್ನು ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ಶ್ರೀಪಾದರು ಉದ್ಘಾಟಿಸಿದರು.

ಗುಹೆಯ ಒಂದು ಕವಲಿನಲ್ಲಿ ಪುಟ್ಟ ಜಲಾಶಯವಿದೆ. ಆಗ್ನೇಯ ಭಾಗದಲ್ಲಿ ಕಂಗೊಳಿಸುವ ‘ಹನುಮಗಂಗೆ’, ನೈರುತ್ಯ ಭಾಗದಲ್ಲಿ ‘ಗುಪ್ತಗಂಗೆ’ ಈಶಾನ್ಯದಲ್ಲಿರುವ ತೀರ್ಥಭಾವಿಗಳು ಶ್ರೀಗಳ ದಿವ್ಯ ಚಿಂತನಾ ದೃಷ್ಟಿಯಿಂದ ಸಾಕಾರಗೊಂಡಿದೆ. ನಮಸ್ಕಾರ ಮಂಟಪದ ಅತ್ತಿ ಮರದ ಅಡಿಭಾಗದವರೇಗೂ ಮೂರು ಕವಲುಗಳಾಗಿ ಈ ಗುಹೆಯ ನಿರ್ಮಾಣ ಕಾರ್ಯ ಜರಗಿದೆ. ಸುಮಾರು ನಾಲ್ಕು ಅಡಿ ಎತ್ತರ ಎರಡುವರೆ ಅಡಿ ಅಗಲದ ಸ್ಥಳಾವಕಾಶ ವಿರಿಸಿ ಏಕಾಂತ ಧ್ಯಾನ, ಪಠಣ, ಅಧ್ಯಯನಕ್ಕೆ ಒಬ್ಬೊಬ್ಬರು ಕುಳಿತು ಕೊಳ್ಳುವಂತೆ ಗುಹೆಯ ಕವಲು ಮಾರ್ಗಗಳಲ್ಲಿ ಸುರಂಗ ಧ್ಯಾನ ಪೀಠಗಳನ್ನು ಕೊರೆಯಲಾಗಿದೆ. ಆದರೆ ಸಾರ್ವಜನಿಕರು ಬಹು ಮಂದಿ ಏಕಕಾಲಕ್ಕೆ ಇದರೊಳಗೆ ಪ್ರವೇಶಿಸುವಂತಿಲ್ಲ. ಪೂರ್ವಾನುಮತಿ ಪಡೆದು ಗುಹೆಯ ದರ್ಶನ ಮಾಡಬಹುದು.

ಆರಾಧನಾ ಕ್ಷೇತ್ರವೊಂದು ಪ್ರೇಕ್ಷಣೀಯ ತಾಣವಾಗಿ ಹೇಗೆ ರೂಪುಗೊಳ್ಳುತ್ತಿದೆ ಎನ್ನುವುದಕ್ಕೆ ಶ್ರೀ ಸಂಸ್ಥಾನದಲ್ಲಿ ನಿರ್ಮಾಣಗೊಂಡ ವಿವಿಧ ವಿಶಿಷ್ಟ ರಚನೆಗಳು ಸಾಕ್ಷಿ.

 

ಶ್ರೀ ಗುರುದೇವದತ್ತ ಪೀಠ

ಶ್ರೀ ಸಂಸ್ಥಾನದಲ್ಲಿ ವೃತ್ತಾಕಾರದಲ್ಲಿ ಎರಡು ಅಂತಸ್ತಿನ ಸುಂದರ ದತ್ತ ಪೀಠವನ್ನು ನಿರ್ಮಿಸಲಾಗಿದೆ. ಇದು ತುಳು ನಾಡಿನ ‘ಶ್ರೀ ಗುರುದೇವದತ್ತ ಪೀಠ’. ಪೂಜ್ಯ ಶ್ರೀಗಳು ಇಲ್ಲಿ ಗುರುವಾರ, ಶನಿವಾರ ಮತ್ತು ಭಾನುವಾರ ಭಕ್ತ ಜನರನ್ನು ಭೇಟಿ ಮಾಡುವರು. ಅವರ ಬದುಕಿನ ಸಮಸ್ಯೆಗಳನ್ನು ಆಲಿಸುವರು. ಪರಿಹಾರಗಳನ್ನು ಸೂಚಿಸುವರು. ಶಕ್ತ್ಯಾನುಸಾರ ಬಾಧಾ ನಿವೃತ್ತಿ ದೇವತಾರಾಧನೆಯ ಸೇವೆಗಳಿಗೆ ಶ್ರೀ ಸಂಸ್ಥಾನದಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

ಪೂಜ್ಯ ಸ್ವಾಮೀಜಿ ಅವರ ದೃಷ್ಟಿಯಲ್ಲಿ ಯತಿಗಳು ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು. ‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’ ಎನ್ನುವ ಪೂಜ್ಯ ಶ್ರೀಗಳು ಸಾಮಾಜಿಕ ಸ್ಪಂದನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

ನಮ್ಮ ಸಮಾಜದಲ್ಲಿ ಗುರು ಪೀಠದ ಸ್ಥಾನ ವಿಶಿಷ್ಟವಾದುದು. ಶಿಷ್ಯ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಧರ್ಮ ಜಾಗೃತಿ ಮೂಡಿಸುವ ಪವಿತ್ರ ಕಾರ್ಯ ಗುರು ಪೀಠದಿಂದ ನಡೆಯುತ್ತಿದೆ. ಗುರುಪೀಠ ಮತ್ತು ಶಿಷ್ಯ ಸಮುದಾಯ ಒಂದಕ್ಕೊಂದು ಪೂರಕ. ಗುರುಪೀಠವನ್ನು ವಿಧಾಯಕವೆಂದು ಉಲ್ಲೆಖಿಸಿದರೆ ಶಿಷ್ಯ ಸಮುದಾಯ ವಿಧೇಯವೆನ್ನಬಹುದು. ಗುರುಪೀಠ ಹಾಗೂ ಶಿಷ್ಯ ಸಮುದಾಯದೊಳಗಣ ಸಂಬಂಧ ನಿಕಟ ಹಾಗೂ ಆತ್ಮೀಯವಾದಷ್ಟು ಸ್ವಸ್ಥ ಸಮಾಜದ ನಿರ್ಮಾಣದ ಕನಸು ನನಸಾಗುವುದು ಸುಗಮ ಸಾಧ್ಯ.

ಶ್ರೀ ಗುರುದೇವದತ್ತ ಪೀಠದ ಸನಿಹದಲ್ಲೇ ನಾಗಬಿಂಬವನ್ನು ಪ್ರತಿಷ್ಠೆ ಮಾಡಲಾಗಿದೆ. ಶ್ರೀ ಸಂಸ್ಥಾನದಲ್ಲಿ ನಾಗರಪಂಚಮಿ, ಆಶ್ಲೇಷ ಬಲಿ ಉತ್ಸವಗಳು, ನಾಗದೋಷಕ್ಕೆ ಸಂಬಂಧಿಸಿದ ಪ್ರಾಯಶ್ಚಿತ ವಿಧಿಗಳು, ಚರ್ಮರೋಗ ನಿವಾರಣೆ, ಸಂತಾನ ಪ್ರಾಪ್ತಿಯ ಕುರಿತಾದ ಸೇವೆಗಳು ಜರಗುತ್ತದೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top