+91 8255-266211
info@shreeodiyoor.org

ಆಧ್ಯಾತ್ಮಿಕ

ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ

ಶ್ರೀ ಸಂಸ್ಥಾನದ ಪ್ರತಿಷ್ಠಾ ಮುಹೂರ್ತವನ್ನು ಪ್ರತಿವರ್ಷ ವಾರ್ಷಿಕೋತ್ಸವಾಗಿ ಆಚರಿಸಲಾಗುತ್ತಿದ್ದು, 2001ರಿಂದ ಒಡಿಯೂರು ರಥೋತ್ಸವವಾಗಿದೆ. ಒಡಿಯೂರು ರಥೋತ್ಸವ 2014 ರಿಂದ ತುಳುನಾಡ ಜಾತ್ರೆಯಾಗಿ ಸಂಭ್ರಮದ ಪರ್ವ ವಾಗಿದೆ. ಇದೊಂದು ಕಣ್ಣಿಗೆ ಹಬ್ಬವಾಗಿ ಈ ನಾಡಿನ ಅಪೂರ್ವ ಉತ್ಸವವಾಗಿ ದಾಖಲಾಗಿದೆ. ಸುಮಾರು 12 ಕಿ.ಮೀ. ಕ್ರಮಿಸುವ ಶ್ರೀ ದತ್ತಗುರು, ಪ್ರಾಣದೇವರ ಒಡಿಯೂರು ರಥೋತ್ಸವ ಜನಮನವನ್ನು ಆಕರ್ಷಿಸುವ ಹಬ್ಬವಾಗಿದೆ. ನವರತ್ನಖಚಿತವಾದ ಶ್ರೀ ದತ್ತಗುರು ಸ್ವರ್ಣಪಾದುಕೆಗಳನ್ನು ಮತ್ತು ಅಭಯ ಹಸ್ತದ ಭವ್ಯವಾದ ಪ್ರಾಣದೇವರ ಉತ್ಸವಮೂರ್ತಿಯನ್ನು ವೇದಘೋಷ, ಪಂಚ ವಾದ್ಯಗಳ ನಿನಾದದೊಂದಿಗೆ ರಥದಲ್ಲಿ ರಿಸಲಾಗುತ್ತದೆ. ಪೂಜ್ಯ ಶ್ರೀಗಳು ವೈದಿಕರೊಂದಿಗೆ ರಥಾರೂಢರಾಗುತ್ತಿದ್ದಂತೆಯೇ ಶ್ರೀ ಸಂಸ್ಥಾನ ದಿಂದ ಆಕರ್ಷಕ ವರ್ಣರಂಜಿತ ಸಾಂಸ್ಕೃತಿಕ ವೈಭವದೊಂದಿಗೆ ಹೊರಡುವ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥ ಮಿತ್ತನಡ್ಕ ಗ್ರಾಮ ದೈವಸ್ಥಾನಕ್ಕೆ ಹೋಗಿ ಅಲ್ಲಿಂದ ಕನ್ಯಾನ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ಸಂಪ್ರದಾಯದಂತೆ ಪೂಜೆಯ ಬಳಿಕ ಕನ್ಯಾನ ಪೇಟೆ ಸವಾರಿ ಮುಗಿಸಿ ಶ್ರೀ ಸಂಸ್ಥಾನಕ್ಕೆ ಹಿಂತಿರುಗುವುದು.

ಸಹಸ್ರ ಸಹಸ್ರ ಜನ ಭಜನೆ ಹಾಡುತ್ತಾ ನಾಮ ಸಂರ್ಕೀರ್ತನೆ ಮಾಡುತ್ತಾ ತೇರನ್ನು ಎಳೆಯುವುದು. ರಥದ ದಾರಿ ಮಧ್ಯೆ ಭಕ್ತ ಜನರು ಆರತಿ, ಹಣ್ಣುಕಾಯಿ ಒಪ್ಪಿಸಿ, ಭಾವಪರವಶರಾಗಿ ರಥೋತ್ಸವವನ್ನು ಕಣ್ತುಂಬ ಕಂಡು ಆನಂದಿಸುತ್ತಿರುವ ದೃಶ್ಯಗಳು ರೋಚಕವಾಗಿರುತ್ತದೆ. ಶಿಸ್ತು ಸಂಯಮದಿಂದ ಭಾಗವಹಿಸುವ ಭಜಕರ ಸಹಕಾರ ಸುದೀರ್ಘ ರಥೋತ್ಸವಕ್ಕೆ ಹೊಸ ಮೆರಗು ನೀಡುತ್ತದೆ.

“ಉತ್ಸವಗಳು ಬರಿಯ ಆಚರಣೆಗಳಾಗಿ ಸದ್ದು ಗದ್ದಲದಲ್ಲಿ ಮುಗಿದು ಹೋಗಬಾರದು. ಅವು ಆತ್ಮ ನಿರೀಕ್ಷಣೆಗೆ ಅವಕಾಶ ಮಾಡಿಕೊಡುವಂತಾದರೆ ಅದು ಸಾರ್ಥಕ. ಜೀವನೋತ್ಸವವನ್ನು ತುಂಬುವ ಉತ್ಸವಗಳು ಅಂತರಂಗದ ಶುದ್ಧಿಗೆ ಚೇತೋಹಾರಿಯಾಗಿರಬೇಕು. ಪರಸ್ಪರ ಸಹಕಾರ, ಸಾಮರಸ್ಯ, ನೋವು ನಲಿವುಗಳ ವಿನಿಮಯ ಮತ್ತು ಸಾಮೂಹಿಕ ಆರಾಧನಾ ಮನೋಭಾವವನ್ನು ಉದ್ಧೀಪನಗೊಳಿಸುತ್ತದೆ. ಒಕ್ಕೊರೊಲ ಪ್ರಾರ್ಥನೆಗೆ ವಿಶೇಷ ಶಕ್ತಿಯಿದೆ. ಆದರೆ ಭಗವಂತನಲ್ಲಿ ನಿರ್ವಂಚನೆಯಿಂದ ಪ್ರಾರ್ಥಿಸುವ ಭಕ್ತಿ ಶ್ರದ್ಧೆಯಿಂದ ನಿವೇದಿಸುವ ಶುದ್ಧಾಂತರಂಗ ನಮ್ಮದಾಗಬೇಕು” ಎಂಬುದು ಉತ್ಸವಗಳ ಬಗ್ಗೆ ಪೂಜ್ಯ ಶ್ರೀಗಳ ಸ್ಪಷ್ಟ ನಿಲುವು.

 

ಶ್ರೀ ಗುರುದೇವಾನಂದ ಜನ್ಮದಿನೋತ್ಸವ – ಗ್ರಾಮೋತ್ಸವ

ಶ್ರೀ ಸಂಸ್ಥಾನದ ನಿರ್ಮಾತೃಗಳೂ, ಜೀವಾತ್ಮ ಶಕ್ತಿಯೂ ಆಗಿರುವ ಪೂಜ್ಯಶ್ರೀಗಳ ಜನ್ಮದಿನಾಚರಣೆಯನ್ನು ಶ್ರೀ ಸಂಸ್ಥಾನದ ಸಹಸಂಸ್ಥೆಗಳ ವತಿಯಿಂದ ಪೂಜ್ಯ ಶ್ರೀಗಳವರ ಸಂಕಲ್ಪದಂತೆ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಗ್ರಾಮೋತ್ಸವವಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.

 

 

 

 

 

 

 

 

 

 

 

ಉತ್ಸವಗಳು
ಹನುಮ ಜಯಂತಿ :

ಶ್ರೀರಾಮ ನವಮಿಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭಗೊಂಡು ಶ್ರೀ ಸಂಸ್ಥಾನದ ಆರಾಧ್ಯಮೂರ್ತಿ ಹನುಮ ಜಯಂತಿಯಂದು ಸಮಾಪನಗೊಳ್ಳುವುದು. ಶ್ರೀಮದ್ರಾಮಾಯಣ ಯಜ್ಞ, ಧಾರ್ಮಿಕ ಗೋಷ್ಠಿ, ವಿಶೇಷ ವೈದಿಕ ಕಾರ್ಯಕ್ರಮಗಳೊಂದಿಗೆ ಹನುಮ ಜಯಂತಿ ಸಂಪನ್ನಗೊಳ್ಳುವುದು.

ನಾಗರಪಂಚಮಿ :

ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಸಾನಿಧ್ಯವಿರುವ ಶ್ರೀ ಸಂಸ್ಥಾನದಲ್ಲಿ ನಾಗರಪಂಚಮಿಯಂದು ಸಾರ್ವಜನಿಕ ಆಶ್ಲೇಷ ಬಲಿ ಪೂಜೆ ಜರಗುವುದು. ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ಸೇವೆ ಆರಾಧನೆಗಳು ಈ ಸಂದರ್ಭದಲ್ಲಿ ಶ್ರೀ ಸುಬ್ರಾಯ ದೇವರಿಗೆ ಸಲ್ಲಿಸುವುದು ವಿಶೇಷವಾಗಿದೆ.

 

ಲಲಿತಾಪಂಚಮಿ :

ನವರಾತ್ರಿಯ ಪರ್ವಕಾಲದಲ್ಲಿ ಪ್ರಸನ್ನಾತ್ಮಿಕೆಯಾದ ಶ್ರೀ ಲಲಿತಾಂಬಿಕೆ ಆರಾಧನೋತ್ಸವವಾಗಿ ಶ್ರೀ ಸಂಸ್ಥಾನದಲ್ಲಿ ಲಲಿತಾ ಪಂಚಮಿಯನ್ನು ಆಚರಿಸಲಾಗುತ್ತಿದೆ. ಶ್ರೀ ದೇವಿಗೆ ಪ್ರಿಯವಾದ ಶ್ರೀ ಚಂಡಿಕಾಯಾಗ, ಶ್ರೀ ಲಲಿತಾಸಹಸ್ರನಾಮ ಪಠನ, ಸಪ್ತಶತಿ ಪಾರಾಯಣ, ಅಷ್ಟಾವಧಾನ ಸೇವೆ ಮೊದಲಾದ ಉಪಾಸನೆಗಳು ಜರಗುವುದು.

ನವರಾತ್ರಿಯಲ್ಲಿ ಶ್ರೀ ಶಾರದಾದೇವಿಯ ಆರಾಧನೆ, ಸಾಮೂಹಿಕ ವಿದ್ಯಾರಂಭ, ಶ್ರೀ ಸರಸ್ವತಿ ಹವನ ಪೂಜ್ಯಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಜರಗುವುದು.


 

ದತ್ತ ಜಯಂತಿ :

ದತ್ತಜಯಂತಿ ಉತ್ಸವವು ಒಂದು ವಾರಗಳ ದತ್ತಮಹಾಯಾಗದೊಂದಿಗೆ ಜರಗುವುದು. ಗುರುಚರಿತ್ರೆ ಪಾರಾಯಣ, ‘ಸಪ್ತಾಹ ವಿಧಿ’ಯಂತೆ ದತ್ತಾರಾಧನೆ, ದತ್ತಮಾಲಾಧಾರಣೆ ನಡೆಯುವುದು. ಪೌರ್ಣಮಿಯ ದಿನ ಶ್ರೀ ದತ್ತ ಮಹಾಯಾಗ ಪೂರ್ಣಾಹುತಿಯಾದ ಬಳಿಕ ಪೂಜ್ಯ ಶ್ರೀಗಳವರಿಂದ ಮಧುಕರೀ ಸೇವೆ ಜರಗುವುದು.

 

ತೀರ್ಥಕ್ಷೇತ್ರ ಸಂಚಾರ

ಪೂಜ್ಯ ಸ್ವಾಮೀಜಿಯವರು ಪ್ರತಿ ವರ್ಷ ಎರಡು ಬಾರಿ ತೀರ್ಥ ಕ್ಷೇತ್ರ ಸಂಚಾರವನ್ನು ಶಿಷ್ಯವರ್ಗದವರೊಂದಿಗೆ ಕೈಗೊಳ್ಳುವರು. ಶ್ರೀ ಗುರುದೇವ ಸೇವಾ ಬಳಗದ ಸದಸ್ಯರು ಪೂಜ್ಯಶ್ರೀಗಳೊಂದಿಗೆ ತೀರ್ಥಾಟನೆಗೆ ಹೋಗುತ್ತಾರೆ. 

ಸಾಧು-ಸಂತರ, ಋಷಿಮುನಿಗಳ, ಯತಿವರ್ಯರ ಪುಣ್ಯ ಪಾದಸ್ಪರ್ಶದಿಂದ ತೀರ್ಥಗಳು ಪುನೀತವಾಗುತ್ತವೆಯಂತೆ. ಪೂಜ್ಯಶ್ರೀಗಳು ಹೇಳುವಂತೆ ‘ಲೋಕಸಂಚಾರ, ತೀರ್ಥಕ್ಷೇತ್ರ ಸಂಚಾರದಿಂದ ಅನುಭವ ಪಕ್ವವಾಗುತ್ತದೆ. ಸ್ವಾನುಭವದಿಂದ ಗಳಿಸಿದ ಜ್ಞಾನವೇ ಸುಜ್ಞಾನ’.

 

 

 

 

 

 

 

 

 

 

 

 

 

 
 

ಹನುಮಗಿರಿ ಆರೋಗ್ಯಧಾಮ, ಆಧ್ಯಾತ್ಮ ಭವನ

ಶ್ರೀ ಸಂಸ್ಥಾನದಲ್ಲಿ ವಿದ್ಯಾದಾನ, ಅನ್ನದಾನ, ಅಭಯದಾನದೊಂದಿಗೆ ಆರೋಗ್ಯದಾನದ ರಚನಾತ್ಮಕ ಕೆಲಸ ಕಾರ್ಯಗಳು ಸದ್ದುಗದ್ದಲವಿಲ್ಲದೆ ನಡೆಯುತ್ತದೆ. ನೇತ್ರ್ರ ತಪಾಸಣಾ ಶಿಬಿರ, ಹೃದಯ ಸಂಬಂಧಿ ಕಾಯಿಲೆ ಪರೀಕ್ಷೆ, ರಕ್ತದಾನ ಶಿಬಿರ ಹೀಗೆ ಹಲವು ಆರೋಗ್ಯ ಕಾಪಾಡುವ ಸೇವೆ ಇಲ್ಲಿ ಜರಗುತ್ತದೆ. ಸ್ವತಃ ಪೂಜ್ಯಶ್ರೀಗಳು ವಿವಿಧ ವ್ಯಾದಿಗಳಿಗೆ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡುವರು. ಹಲವರು ಸ್ವಾಮೀಜಿಯವರ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.

ಅಪೂರ್ವ ಔಷಧೀಯ ಗಿಡಗಳನ್ನು ಬೆಳೆಸಿ ಸಂರಕ್ಷಿಸುವ ಹನುಮಗಿರಿ ಆರೋಗ್ಯಧಾಮ ಮತ್ತು ಆಧ್ಯಾತ್ಮ ಪ್ರೇಮಿಗಳಿಗೆ ವಿಶ್ರಾಂತ ಬದುಕನ್ನು ಸುಖಕರಗೊಳಿಸುವ ಆಧ್ಯಾತ್ಮ ಭವನ ನಿರ್ಮಾಣದ ಎರಡು ಯೋಜನೆಗಳ ಬಗ್ಗೆ ಪೂಜ್ಯ ಶ್ರೀಗಳು ಯೋಚಿಸಿದ್ದಾರೆ. ಈ ಯೋಜನೆಗೆ ಹಲವು ಸೇವಾ ಸಂಸ್ಥೆಗಳು ಟ್ರಸ್ಟ್‍ಗಳು, ವಿದ್ಯಾಸಂಸ್ಥೆಗಳು ಪ್ರೋತ್ಸಾಹದ ಸಹಕಾರ ನೀಡಲು ಮುಂದೆ ಬಂದಿದೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top