+91 8255-266211
info@shreeodiyoor.org

ಶೈಕ್ಷಣಿಕ

ಶ್ರೀ ಗುರುದೇವ ವಿದ್ಯಾಪೀಠ, ಒಡಿಯೂರು

ಮಕ್ಕಳಿಗೆ ಸಂಸ್ಕಾರಯುಕ್ತ ಮೌಲ್ಯಯುತ ಶಿಕ್ಷಣ ನೀಡುವ ಉದಾತ್ತ ಧ್ಯೇಯದೊಂದಿಗೆ ಪೂಜ್ಯ ಒಡಿಯೂರು ಶ್ರೀಗಳು – 2001ನೇ ಇಸವಿ ಜೂನ್ ತಿಂಗಳ 11ನೇ ತಾರೀಕಿನಂದು ಶ್ರೀ ಗುರುದೇವ ವಿದ್ಯಾಪೀಠವನ್ನು ಹುಟ್ಟು ಹಾಕಿದರು. ಶ್ರೀ ಸಂಸ್ಥಾನದ ದ್ವಾರದ ಸಮೀಪವೇ ಇರುವ ಕಟ್ಟಡವೊಂದರಲ್ಲಿ ಶ್ರೀ ಗುರುದೇವ ಕನ್ನಡ ಮಾಧ್ಯಮ ಪ್ರೌಢಶಾಲೆಯು 8ನೇ ತರಗತಿಯು 26 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಪ್ರಾರಂಭವಾಯಿತು. ಶಾಲೆಗೆ ಅನುಭವಸ್ಥರೂ, ಸಮರ್ಥರೂ ಆದ ಶ್ರೀ ಕೃಷ್ಣ ಭಟ್ಟ, ಅಮೈ ಇವರನ್ನು ಮುಖ್ಯ ಶಿಕ್ಷಕರಾಗಿ ಪೂಜ್ಯ ಶ್ರೀಗಳು ನೇಮಿಸಿದರು. ಹಿರಿಯರೂ ನಿವೃತ್ತ ಮುಖ್ಯ ಶಿಕ್ಷಕರೂ ಆದ ಶ್ರೀ ಜನಾರ್ದನ ಶೆಟ್ಟರು ಮಾರ್ಗದರ್ಶಕರೂ, ಕಛೇರಿ ನಿರ್ವಾಹಕರೂ ಆಗಿ ಒದಗಿ ಬಂದರು. ಇವರಿಬ್ಬರಿಗೆ ಸಹಾಯಕರಾಗಿ 5 ಮಂದಿ ಅರ್ಹ ಸಹಶಿಕ್ಷಕರನ್ನು ನೇಮಿಸಲಾಯಿತು. ಹೀಗೆ ತೀರಾ ಗ್ರಾಮೀಣ ಪ್ರದೇಶವೂ, ಗಡಿನಾಡ ಪ್ರದೇಶವೂ ಆಗಿರುವ ಕರೋಪಾಡಿ ಗ್ರಾಮದ ಒಡಿಯೂರಿನಲ್ಲಿ ಪೂಜ್ಯ ಶ್ರೀಗಳ ಕನಸೊಂದು ಸಾಕಾರಗೊಂಡಿತು.

 

ಬೆಳವಣಿಗೆ

 ಹೀಗೆ 2001ರಲ್ಲಿ ಆರಂಭವಾದ ಶ್ರೀ ಗುರುದೇವ ವಿದ್ಯಾಪೀಠವು 2002ರ ಆಗಸ್ಟ್ ತಿಂಗಳಲ್ಲಿ ತನ್ನದೇ ಆದ ವಿನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಅಲ್ಲಿ ನೆಲೆ ನಿಂತಿತು. 2004 ರ ಏಪ್ರಿಲ್ ನಲ್ಲಿ ವಿದ್ಯಾಪೀಠದ ಮೊದಲ ಬ್ಯಾಚ್ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಬರೆದು, 26 ರಲ್ಲಿ 25 ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುವ ಮೂಲಕ ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿಯನ್ನು ಹಾಡಿತು.

ತದನಂತರ, 2006ನೇ ಇಸವಿ ಜೂನ್ ತಿಂಗಳಲ್ಲಿ ಶ್ರೀ ಗುರುದೇವ ಗುರುಕುಲ (ಪೂರ್ವ ಪ್ರಾಥಮಿಕ) ಹಾಗೂ ಶ್ರೀ ಗುರುದೇವ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಗಳು ಜತೆ ಜತೆಯಲ್ಲಿ ಆರಂಭಗೊಂಡವು.

ವಿದ್ಯಾರ್ಥಿಗಳ ಹಾಗೂ ಅವರ ಹೆತ್ತವರ ಆಶಯದಂತೆ, 2011ನೇ ಇಸವಿ ಜೂನ್ ತಿಂಗಳಲ್ಲಿ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯು 6ನೇ ತರಗತಿಯೊಂದಿಗೆ ಪ್ರಾರಂಭವಾಯಿತು. ಆಂಗ್ಲ ಮಾಧ್ಯಮದ 10ನೇ ತರಗತಿಯ ವಿದ್ಯಾರ್ಥಿಗಳ ಪ್ರಥಮ ತಂಡ ಮುಂದಿನ 2017ರ ಎಸ್.ಎಸ್.ಎಲ್.ಸಿ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿದೆ.

ಪ್ರಸ್ತುತ ಈ ಎಲ್ಲ ಸಂಸ್ಥೆಗಳಲ್ಲಿ 320ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

 

ಅಪೂರ್ವವಾದ ಮೂಲಭೂತ ಸೌಲಭ್ಯಗಳು

ವಿದ್ಯಾಪೀಠವು ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಈ ಎಲ್ಲ ಶಾಲೆಗಳಿಗೆ ಒದಗಿಸಿದೆ. ಗಾಳಿ – ಬೆಳಕು ಸಾಕಷ್ಟು ಇರುವ ವಿಶಾಲವಾದ ತರಗತಿ ಕೊಠಡಿಗಳು, ಗ್ರಂಥಾಲಯ, ಆಟದ ಮೈದಾನ, ಶುದ್ಧವಾದ ಕುಡಿಯುವ ನೀರು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಸಾಕಷ್ಟು ಶೌಚಾಲಯಗಳು, ವಿಜ್ಞಾನ ಪ್ರಯೋಗ ಶಾಲೆ, ಕಂಪ್ಯೂಟರ್ ಲ್ಯಾಬ್, ಪ್ರೇಯರ್ ಹಾಲ್, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಮವಸ್ತ್ರ ಮತ್ತು ಅಧ್ಯಾಪಕರಿಗೆ ಹಾಗೂ ಕಛೇರಿಗಾಗಿ ಪ್ರತ್ಯೇಕ ಕೊಠಡಿಗಳು ಮುಂತಾದ ಎಲ್ಲಾ ಅಗತ್ಯಗಳನ್ನು ಒದಗಿಸಲಾಯಿತು. ಮಕ್ಕಳಿಗೆ, ಅಧ್ಯಾಪಕರಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಪ್ರಾರಂಭದಿಂದಲೇ ಉಚಿತವಾಗಿ ಕೊಡಮಾಡಲಾಗಿದೆ. ಸರಕಾರದಿಂದ ಈ ವಿದ್ಯಾಸಂಸ್ಥೆಗೆ ಯಾವುದೇ ಅನುದಾನವಿಲ್ಲ. ಎಲ್ಲ ಖರ್ಚುವೆಚ್ಚಗಳನ್ನು ವಿದ್ಯಾಪೀಠವೇ ಭರಿಸುತ್ತಿದೆ.

 

ಹಿರಿಮೆ-ಗರಿಮೆಗಳು

2004 ರಿಂದ ಮೊದಲ್ಗೊಂಡು ಇಂದಿನವರೆಗೆ ಎಸ್.ಎಸ್.ಎಲ್.ಸಿ. ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾಪೀಠದ ವಿದ್ಯಾರ್ಥಿಗಳ ಸಾಧನೆ ನಾವು ಹೆಮ್ಮೆ ಪಡುವಂತೆ ಮಾಡಿದೆ. 4 ಬಾರಿ ಶೇಕಡಾ 100 ರ ಫಲಿತಾಂಶವನ್ನು ಪಡೆದದ್ದಲ್ಲದೆ, ಶೇ.93.5 ಕ್ಕಿಂತ ಕಡಿಮೆ ಫಲಿತಾಂಶವು ಈವರೆಗೆ ದಾಖಲಾಗಿಲ್ಲ. ಮೇಲಾಗಿ ಶೇ.70ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ.

ಪಠ್ಯೇತರ ಚಟುವಟಿಕೆಗಳಲ್ಲೂ ನಮ್ಮ ವಿದ್ಯಾರ್ಥಿಗಳೂ ಪ್ರಶಂಸನೀಯ ಸಾಧನೆಗಳನ್ನು ತೋರುವಲ್ಲಿ ನಮ್ಮ ಶಾಲಾ ಅಧ್ಯಾಪಕರ ತಂಡ ಯಶಸ್ವಿಯಾಗಿದೆ.

ಪ್ರತಿವರ್ಷ ಶರದೃತುವಿನಲ್ಲಿ ಶ್ರೀ ಸಂಸ್ಥಾನದಲ್ಲಿ ಏರ್ಪಡಿಸುವ ‘ಶರದೃತು ಸಂಸ್ಕಾರ ಶಿಬಿರ’ವು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಸಹಾಯವಾಗಿ, ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ವ್ಯಕ್ತಿತ್ವ ನಿರ್ಮಾಣದ ಕಾರ್ಯವನ್ನು ಮಾಡುತ್ತಾ ಬಂದಿದೆ. ಊರ ಪರವೂರ ಹತ್ತು ಹಲವು ಮಂದಿ ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಬರಮಾಡಿಕೊಂಡು, ಶಿಬಿರಾರ್ಥಿಗಳಿಂದ ಯಾವುದೇ ಶುಲ್ಕವನ್ನು ಪಡೆಯದೇ, ಅವರಲ್ಲಿ ಸದ್ವಿಚಾರಗಳನ್ನು ತುಂಬುವ ಕಾರ್ಯ ಶ್ರೀ ಸಂಸ್ಥಾನದಲ್ಲಿ ಗುರುಸಂಕಲ್ಪದಂತೆ ನಿರಂತರವಾಗಿ ನಡೆಯುತ್ತಾ ಬಂದಿದೆ.

 

ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ಸಮನ್ವಯ

ಪ್ರಾಚೀನ ಭಾರತೀಯ ಸಂಸ್ಕøತಿಯನ್ನು ಕಾಪಿಟ್ಟುಕೊಳ್ಳುವುದರ ಜೊತೆಜೊತೆಗೆ, ಇಂದಿನ ಜಾಗತೀಕರಣದ ಹಾಗೂ ಡಿಜಿಟಲೀಕರಣದ ಯುಗಕ್ಕೆ ಹೊಂದಿಕೊಳ್ಳುವಂತ ವಿಜ್ಞಾನದ ಆಧುನಿಕ ಆವಿಷ್ಕಾರಗಳನ್ನು ಮೈಗೂಡಿಸಿಕೊಂಡು, ದೃಶ್ಯ -ಶ್ರಾವ್ಯ ಎರಡನ್ನು ಒಳಗೊಂಡ ಸೆಟಲೈಟ್ ಬೇಸ್‍ಡ್ ಸ್ಮಾರ್ಟ್ ಕ್ಲಾಸುಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ನಡೆಸಲಾಗುತ್ತಿದೆ. ದೂರದಿಂದ ಬರುವ ವಿದ್ಯಾರ್ಥಿಗಳಿಗಾಗಿ ಶಾಲಾ ವಾಹನದ ವ್ಯವಸ್ಥೆ ಇರುತ್ತದೆ.

ಹಿರಿಯ ಅನುಭವಿ ಶಿಕ್ಷಕರೊಂದಿಗೆ, ಉತ್ಸಾಹಿ ಯುವ ಶಿಕ್ಷಕರನ್ನು ಕೂಡಿಸಿಕೊಂಡು ಹಳೆಬೇರು – ಹೊಸ ಚಿಗುರು ಎಂಬಂತೆ ನಿರೂಪಿಸಲಾಗಿದೆ. ಸ್ಥಳೀಯ ವಿದ್ಯಾರ್ಥಿಗಳೊಂದಿಗೆ, ಗಡಿಯ ಆಚೆಗಿನ ಕೇರಳದ ಗಡಿನಾಡ ವಿದ್ಯಾರ್ಥಿಗಳೂ ಸೇರಿಕೊಂಡಿದ್ದಾರೆ. ಭಾರತದ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಒಂದು ಭಾಷಾ ಪಾಠವಾಗಿ ಕಲಿಸಲಾಗುತ್ತದೆ. ಭಗವದ್ಗೀತಾ ಪಠಣ, ಭಜನೆ, ಶಾಲಾ ಪ್ರಾರ್ಥನೆ, ನಾಡಗೀತೆ ಹಾಗೂ ರಾಷ್ಟ್ರಗೀತೆಯೊಂದಿಗೆ ಪ್ರತಿನಿತ್ಯದ ತರಗತಿಗಳು ಆರಂಭವಾಗುವುದಲ್ಲದೆ, ಪೂಜ್ಯ ಮಾತಾನಂದಮಯಿ ಇವರಿಂದ ನೀತಿಬೋಧೆ ತರಗತಿಗಳಿದ್ದು, ಅವುಗಳಲ್ಲಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ.

ಹೀಗೆ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯೊಂದಿಗೆ ನೈತಿಕ ಶಿಕ್ಷಣ ಹಾಗೂ ಜೀವನ ಶಿಕ್ಷಣವನ್ನು ಒಳಗೊಂಡ ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಮೂಲಕ ಒಂದು ಸದೃಢ ರಾಷ್ಟ್ರನಿರ್ಮಾಣಕ್ಕೆ ಪೂರಕವಾಗುವ ಸತ್ಪ್ರಜೆಗಳನ್ನು ತಯಾರು ಮಾಡುವ ಕಾಯಕವು ಶ್ರೀ ಗುರುಗಳ ಸಂಕಲ್ಪದಂತೆ ಶ್ರೀ ಗುರುದೇವ ವಿದ್ಯಾಪೀಠದಲ್ಲಿ ನಿರಂತರವಾಗಿ ನಡೆಯುತ್ತಿದೆ.

 

ಒಡಿಯೂರು ಶ್ರೀ ಗುರುದೇವ ಐಟಿಐ (ಪ್ರೈ)

ಕನ್ಯಾನ ಮತ್ತು ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗೆ ಸಕಲ ಸೌಕರ್ಯಗಳನ್ನೊಳಗೊಂಡ ಉತ್ತಮ ತಾಂತ್ರಿಕ ತರಬೇತಿ ನೀಡುವ ಉದ್ದೇಶದಿಂದ ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಒಡಿಯೂರು ಇದರ ವತಿಯಿಂದ ಉದ್ಯೋಗ ಖಾತ್ರಿಯ ಒಡಿಯೂರು ಶ್ರೀ ಗುರುದೇವ ಐಟಿಐ (ಪ್ರೈ) ಅನ್ನು ಕನ್ಯಾನದಲ್ಲಿ ಫೆ. 12, 2012ರಂದು ಪ್ರಾರಂಭಿಸಲಾಯಿತು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ವಿ. ಸದಾನಂದ ಗೌಡ ಅವರು ಐಟಿಐ ಅನ್ನು ಉದ್ಘಾಟಿಸಿದರು. 

ಒಡಿಯೂರು ಐಟಿಐಯಲ್ಲಿ ಡ್ರಾಪ್ಟ್ಸ್‍ಮೆನ್ ಸಿವಿಲ್, ಇಲೆಕ್ಟ್ರೀಷಿಯನ್ ಮತ್ತು ಮೆಕಾನಿಕ್ಸ್ ರೆಫ್ರೀಜರೇಷನ್ ಮತ್ತು ಎರ್‍ಕಂಡೀಷನಿಂಗ್ ಎಂಬ ಎರಡು ವರ್ಷದ ವೃತ್ತಿಗಳ ತರಬೇತಿ ನೀಡಲಾಗುವುದು.  ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತು ನವದೆಹಲಿ (ಓಅಗಿಖಿ) ಇದರ ಸಂಯೋಜನೆ ಮತ್ತು ಮಾನ್ಯತೆಯನ್ನು ಈ ಐಟಿಐ ಪಡೆದಿದೆ.

ಅತ್ಯಾಧುನಿಕ ಸಲಕರಣೆಗಳನ್ನೊಳಗೊಂಡ ಪ್ರಯೋಗಾಲಯ, ಗ್ರಂಥಾಲಯ, ಸುಸಜ್ಜಿತ ಕಟ್ಟಡ, ನುರಿತ ಅಧ್ಯಾಪಕರ ತಂಡದೊಂದಿಗೆ ತರಬೇತಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಆಂಗ್ಲ ಭಾಷಾ ತರಬೇತಿ ಕೊಡಲಾಗುವುದು.

ಪ್ರಸಿದ್ದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈಗಾರಿಕಾ ಸಂಸ್ಥೆಗಳ ಜತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಶೇ. 100 ಉದ್ಯೋಗ ಖಾತ್ರಿಯಾಗಿದೆ.

(ಸಂಪರ್ಕಿಸಿ : +91-8255-266 800. +91-9449 486 584)

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top