+91 8255-266211
info@shreeodiyoor.org

ಶ್ರೀ ದತ್ತಜಯಂತ್ಯುತ್ಸವ

ಭಗವಂತನ ಅನುಸಂಧಾನಕ್ಕೆ ಹೃದಯ ಭಾಷೆ ಅವಶ್ಯಕ. ಭಾಷೆ ನಮ್ಮನ್ನು ಹತ್ತಿರವಾಗಿಸುತ್ತದೆ. ತುಳು ಭಾಷೆ 8ನೇ ಪರಿಚ್ಛೇಧಕ್ಕೆ ಸೇರುವ ನಿಟ್ಟಿನಲ್ಲಿ ಪ್ರಯತ್ನ ನಿರಂತರ ನಡೆಯಬೇಕು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಉತ್ತಮ ಸಂಸ್ಕಾರ ಬೆಳೆಯಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯಕ. ಸೇವೆಯಲ್ಲಿ ಅಂತಸ್ತು ಇರಬಾರದು. ಅರ್ಪಣಾಭಾವದಿಂದ ಗೈದ ಗುರುಸೇವೆಯಿಂದ ಜೀವನ ಸಾರ್ಥಕ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತಮಹಾಯಾಗ ಸಪ್ತಾಹ ಸಮಾಪ್ತಿಯ ಸುಸಂದರ್ಭ ಜರಗಿದ ಧರ್ಮಸಭೆಯಲ್ಲಿ ಶ್ರೀ ಸಂಸ್ಥಾನದ ಉತ್ಸವಗಳ ವಿವರಗಳನ್ನೊಳಗೊಂಡ 2018ರ ದಿನದರ್ಶಿಕೆ(ಕ್ಯಾಲೆಂಡರ)ಯನ್ನು ಬಿಡುಗಡೆಗೊಳಿಸಿ ಸಂದೇಶ ನೀಡಿದರು.

ಪೆರ್ಲ ಶ್ರೀಮತಿ ರಾಜಶ್ರೀ ತಾರಾನಾಥ ರೈಯವರ ಚವಳೊ ಕೃತಿಯನ್ನು ಪೂಜ್ಯ ಶ್ರೀಗಳವರು ಬಿಡುಗಡೆಗೊಳಿಸಿದರು.

ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಿಶೇಷ ಆಹ್ವಾನಿತ ಅತಿಥಿಗಳಾಗಿ ಬೆಂಗಳೂರು ಪರ್ಮನೆಂಟ್ ಲೋಕ ಅದಾಲತ್‌ನ ಸದಸ್ಯ ಶ್ರೀ ಬಾಲಕೃಷ್ಣ ಶೆಟ್ಟಿ, ನವಿಮುಂಬೈ ಫಾರ್ಮಾಸಿಟಿಕಲ್ ಡಿಸ್ಟ್ರಿಬ್ಯೂಟರ್ ಶ್ರೀ ಎನ್.ಡಿ. ಶೆಣೈ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಶ್ರೀ ಚಂದ್ರಹಾಸ ರೈ ಡಿ., ಕರ್ನಾಟಕ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ಚಂದ್ರಹಾಸ ರೈ, ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ಸಂಚಾಲಕ ಶ್ರೀ ಕರುಣಾಕರ ಶೆಟ್ಟಿ ಬೋಳಾರ ಇವರುಗಳು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನ (ರಿ.) ಕೊಡಮಾಡುವ ಪ್ರಸಕ್ತ ವರ್ಷದ ಪ್ರಶಸ್ತಿಯನ್ನು ಶ್ರೀ ಅರುವ ಕೊರಗಪ್ಪ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು.

ಒಡಿಯೂರು ಶ್ರೀಗ್ರಾಮವಿಕಾಸ ಯೋಜನೆ ಮೂಲಕ ಅಂಗವಿಕಲರಿಗೆ, ಅನಾರೋಗ್ಯ ಪೀಡಿತರಿಗೆ, ಎರಡು ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ, ಮನೆ ದುರಸ್ತಿಗೆ ಧನಸಹಾಯ ನೀಡಲಾಯಿತು. ಪುಣಚ ಗ್ರಾಮ ಪಂಚಾಯತ್‌ನ ಶೌಚಾಲಯ ನಿರ್ಮಾಣಕ್ಕೆ, ಗೇರುಕಟ್ಟೆ ದಲಿತ ಸಂಘರ್ಷ ಸಮಿತಿಗೆ, ನೆಲ್ಯಾಡಿ ಸರಕಾರಿ ಶಾಲೆಗೆ ಶೌಚಾಲಯ ನಿರ್ಮಾಣಕ್ಕೆ, ಸಾಲೆತ್ತೂರು ನವಚೇತನ ಯುವಕಮಂಡಲದ ಭಜನಾ ಮಂದಿರ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ವಿತರಿಸಲಾಯಿತು.

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಪ್ರಾರ್ಥನಾಗೀತೆ ಹಾಡಿದರು. ಮುಖ್ಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ ನಿರೂಪಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ ಫಲಾನುಭವಿಗಳ ಪಟ್ಟಿ ವಾಚಿಸಿದರು. ಶ್ರೀ ಮಾತೇಶ್ ಭಂಡಾರಿ ವಂದನಾರ್ಪಣೆಗೈದರು.

ಬೆಳಿಗ್ಗೆ ಶ್ರೀ ದತ್ತಮಾಲಾಧಾರಿಗಳು ನಾಮಸಂಕೀರ್ತನಾ ಯಾತ್ರೆಯಲ್ಲಿ ಸನ್ನಿಧಿಗೆ ಬಂದು ಶ್ರೀಗುರುಪಾದುಕೆಗೆ ಪುಷ್ಪಾರ್ಚನೆಗೈದರು.

ವೇದ ಪಾರಾಯಣ, ಶ್ರೀ ಗುರುಚರಿತ್ರೆ ಪ್ರವಚನ ಸಪ್ತಾಹ ಸಮಾಪ್ತಿಯಾಯಿತು. ಮಧ್ಯಾಹ್ನ ಶ್ರೀ ದತ್ತ ಮಹಾಯಾಗ ಸಪ್ತಾಹದ ಪೂರ್ಣಾಹುತಿ, ಶ್ರೀ ದತ್ತಾಂಜನೇಯ ದೇವರಿಗೆ ಕಲ್ಪೋಕ್ತ ಪೂಜೆ, ಮಹಾಪೂಜೆ, ಪೂಜ್ಯ ಶ್ರೀಗಳವರಿಂದ ಮಧುಕರೀ, ಮಂತ್ರಾಕ್ಷತೆ ಸಂಪನ್ನಗೊಂಡಿತು. ಅಪರಾಹ್ಣ ಶ್ರೀಕೃಷ್ಣ ಪರಂಧಾಮ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು. ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ, ಉಯ್ಯಾಲೆಸೇವೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮ್ಯೆ ಯಕ್ಷಗಾನ ಪ್ರದರ್ಶನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top