+91 8255-266211
info@shreeodiyoor.org

ಹನುಮೋತ್ಸವ

 

ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ರಾಮಾಯಣ, ಮಹಾಭಾರತದ ವಿಚಾರಗಳು ಪಠ್ಯ ಪುಸ್ತಕಗಳಲ್ಲಿ ನಿರಂತರ ಸಿಗುವಂತಾಗಬೇಕು. ಶ್ರೀರಾಮ ಲೋಕ ಶಿಕ್ಷಣಕ್ಕೆ ನಿದರ್ಶನವಾದರೆ, ಶ್ರೀಕೃಷ್ಣ ಲೋಕೋತ್ತರ ಶಿಕ್ಷಣ ಬೋಧಿಸಿದ ಗುರು. ಹನುಮ ಕ್ರಿಯಾಶೀಲತೆಗೆ ಇನ್ನೊಂದು ಹೆಸರು. ಜೀವ ದೇವರ ಸಂಬಂಧದ ಬೆಸುಗೆಗೆ ಹನುಮನೇ ಉದಾಹರಣೆ. ರಾಮಾಯಣವನ್ನು ಅಧ್ಯಯನ ಮಾಡಿದರೆ ಭಾರತ ದರ್ಶನವಾಗುತ್ತದೆ. ಅಂತರಂಗ ಪರಿಶುದ್ಧವಾಗಿದ್ದಾಗ ಮಾತ್ರ ಸತ್ಕಾರ್ಯ ನಡೆಯುತ್ತದೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ರಾಮಭಕ್ತರ ಅಪೇಕ್ಷೆ. ಶೀಘ್ರ ಈ ಕಾರ್ಯ ಪೂರ್ಣಗೊಳ್ಳಲಿ. ಅದು ಭಕ್ತರ ಹೃದಯಮಂದಿರವಾಗಲಿ. ಬದುಕು ಹೇಗಿರಬೇಕೆಂಬುದನ್ನು ಭಜನೆ ತಿಳಿಸುತ್ತದೆ. ಬದುಕಿಗೂ ನೀತಿಸಂಹಿತೆ ಇರಲಿ. ಆ ಮೂಲ ರಾಷ್ಟ್ರಹಿತ-ರಾಷ್ಟ್ರೋದ್ಧಾರದ ಪರಿಕಲ್ಪನೆ ಸುಲಭ ಸಾಧ್ಯವಾಗಿಸಬಹುದು. ಭಗವನ್ನಾಮ ಸಂಕೀರ್ತನಾ ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಧನ್ಯರು ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀಮದ್ರಾಮಾಯಣ ಮಹಾಯಜ್ಞ-ಶ್ರೀಹನುಮೋತ್ಸವದ ಸಂದರ್ಭ ನೆರೆದ ಭಕ್ತಸ್ತೋಮವನ್ನು ಉದ್ದೇಶಿಸಿ ಧರ್ಮಸಂದೇಶ ನೀಡಿದರು.

ಉಪಸ್ಥಿತರಿದ್ದ ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತ್ಯಾಗ ಮತ್ತು ಸೇವೆಗೆ ಮತ್ತೊಂದು ಹೆಸರಾಗಿರುವ ಹನುಮಂತನ ಜೀವನಾದರ್ಶಗಳು ಪ್ರತಿಯೊಬ್ಬರ ಬದುಕಿಗೂ ಮಾರ್ಗದರ್ಶಕವೆನಿಸಿದೆ. ಒಡಿಯೂರು ಶ್ರೀ ಸಂಸ್ಥಾನದಲ್ಲಿ ಭಕ್ತಿ ಭಾವುಕತೆಯೊಂದಿಗೆ ಸಾಮಾಜಿಕ ಸೇವೆಗಳು ನಿತ್ಯ ನಿರಂತರವಾಗಿ ನಡೆಯುತ್ತಿದ್ದು, ಗ್ರಾಮ ಗ್ರಾಮಗಳಲ್ಲಿ ಪರಿವರ್ತನೆಯಾಗಿದೆ. ಆನಂದ ಪ್ರಾಪ್ತಿಗಾಗಿ ಭಗವನ್ನಾಮ ಸಂಕೀರ್ತನಾ ಪಾದಯಾತ್ರೆಯನ್ನು ಆಯೋಜಿಸಿ ಒಡಿಯೂರು ಶ್ರೀಗಳವರು ಹನುಮೋತ್ಸವವನ್ನು ಅರ್ಥಪೂರ್ಣವಾಗಿಸಿದರು ಎಂದು ಆಶೀರ್ವಚನಗೈದರು.

ಕನ್ಯಾನ ಬಾಳೆಕೋಡಿ ಶ್ರೀ ಕಾಶಿ ಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಿ ರಾಮತತ್ತ್ವ, ರಾಮನಿಷ್ಠೆ, ರಾಮ ನಡೆ ನಮ್ಮೆಲ್ಲರ ಜೀವನದ ನಡೆಯಾಗಬೇಕು. ಧರ್ಮತತ್ತ್ವ, ರಾಜತತ್ತ್ವ ಶ್ರೀರಾಮನ ಬದುಕಿನ ಆದರ್ಶವಾಗಿದೆ. ಸೀಮೆ ದೇವಸ್ಥಾನ ಹಾಗೂ ಶ್ರೀ ಒಡಿಯೂರು ಸಂಸ್ಥಾನದ ಗುರುಬಂಧುಗಳ ಮೂಲಕ ನಡೆದ ಭಗವನ್ನಾಮ ಸಂಕೀರ್ತನಾ ಪಾದಯಾತ್ರೆ ಯಶಸ್ವಿಯಾಗಿ ಸಂಪನ್ನವಾಗಿದೆ ಎಂದರು.

ಭಗವನ್ನಾಮ ಸಂಕೀರ್ತನಾ ಪಾದಯಾತ್ರೆ ಸಮಿತಿಯ ಪ್ರಧಾನ ಸಂಚಾಲಕ ಶ್ರೀ ಕೃಷ್ಣಯ್ಯ ಕೆ. ಅರಮನೆ ವಿಟ್ಲ, ಸಹಸಂಚಾಲಕ ಶ್ರೀ ದಿನೇಶ್ ಶೆಟ್ಟಿ ಪಟ್ಲಗುತ್ತು, ಶ್ರೀ ಶೀನಪ್ಪ ಮಂಗಲಪದವು, ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುಣೆ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸಂತೋಷ್ ಭಂಡಾರಿ ವಂದಿಸಿದರು.

ಪ್ರಾತಃಕಾಲ ಶ್ರೀರಾಮನವಮಿಯಿಂದ ಆರಂಭಗೊಂಡ ಭಗವನ್ನಾಮ ಸಂಕೀರ್ತನಾ ಸಪ್ತಾಹವು ಸಮಾಪನಗೊಂಡಿತು. ಬೆಳಗ್ಗೆ ಘಂಟೆ 7.00ದಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಭಗವನ್ನಾಮ ಸಂಕೀರ್ತನಾ ಪಾದಯಾತ್ರೆಗೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಗಳವರು ಚಾಳನೆ ನೀಡಿದರು. ಮಾಣಿಲ ಶ್ರೀಗಳು ಹಾಗೂ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ವಿಟ್ಲದಲ್ಲಿ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್, ವಿಟ್ಲ ಪರಿಸರದ ಸಂಘ-ಸಂಸ್ಥೆಗಳು, ಕಾಶಿಮಠದಲ್ಲಿ ಕಾಶಿ ಯುವಕ ಮಂಡಲ ಹಾಗೂ ಯುವತಿ ಮಂಡಲ, ಉಕ್ಕುಡದಲ್ಲಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ಆನೆಪದವಿನಲ್ಲಿ ಶ್ರೀ ಮಹಮ್ಮಾಯಿ ಭಜನಾ ಮಂದಿರ, ಬೈರಿಕಟ್ಟೆಯಲ್ಲಿ ಶ್ರೀ ಅಶ್ವತ್ಥನಾರಾಯಣ ಭಜನಾ ಮಂದಿರ, ಜೆಡ್ಡು ಶ್ರೀ ಧನ್ವಂತರೀ ಸೇವಾ ಟ್ರಸ್ಟ್ ಪಾದಯಾತ್ರೆಯನ್ನು ಸ್ವಾಗತಿಸಿದರು.

ಕನ್ಯಾನದಲ್ಲಿ ಶ್ರೀ ಭಾರತ ಸೇವಾಶ್ರಮ, ಶ್ರೀ ರಾಘವೇಂದ್ರ ಭಜನಾ ಮಂಡಳಿ, ಬಂಡಿತ್ತಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಕುಟ್ಟಿತ್ತಡ್ಕ ಶ್ರೀ ಸಾಯಿಧಾಮ ಬಂಡಿತ್ತಡ್ಕ, ಒಡಿಯೂರಿನಲ್ಲಿ ಶ್ರೀ ಗುರುದೇವ ಸೇವಾ ಬಳಗ ಹಾಗೂ ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಯಾತ್ರೆಯನ್ನು ಸ್ವಾಗತಿಸಿದರು. ವಿವಿಧ ಭಜನಾ ಮಂಡಳಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಸಹಕರಿಸಿದರು.

ಸಭಾಕಾರ್ಯಕ್ರಮದ ಬಳಿಕ ಶ್ರೀಮದ್ರಾಮಾಯಣ ಮಹಾಯಜ್ಞದ ಪೂರ್ಣಾಹುತಿ ಸಂಪನ್ನಗೊಂಡಿತು. ಆರಾಧ್ಯದೇವರಿಗೆ ಮಹಾಪೂಜೆ, ಮಹಾಮಂಗಳಾರತಿ, ಮಹಾಸಂತರ್ಪಣೆ ಜರಗಿತು. ಅಪರಾಹ್ಣ ಅನಂತಶಯನ ಬಂಟ ಯಕ್ಷಕಲಾ ಮಂಡಳಿ, ಕಾರ್ಕಳ ಇವರಿಂದ ಮಾಯಕೊದ ಬಿನ್ನೆದಿ ತುಳು ಯಕ್ಷಗಾನ ತಾಳಮದ್ದಳೆ ನಡೆಯಿತು. ರಾತ್ರಿ ವಿಶೇಷ ಬೆಳ್ಳಿರಥೋತ್ಸವ-ಉಯ್ಯಾಲೆ ಸೇವೆ ಸಂಪನ್ನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top