+91 8255-266211
info@shreeodiyoor.org

ಶ್ರೀ ಲಲಿತಾ ಪಂಚಮಿ ಮಹೋತ್ಸವ

ಶಾಂತಿ ಸಮಾಧಾನ ಅಂತರ್ಯದಲ್ಲಿ ನೆಲೆಯಾಗಬೇಕು. ಆಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಸಮಷ್ಟಿಯಿಂದ ಸಾಧನೆ ಸಾಧ್ಯವಾಗುತ್ತದೆ. ಧರ್ಮ-ಸಂಸ್ಕೃತಿಯನ್ನು ವಿರೂಪಗೊಳಿಸಲಾಗುತ್ತಿದೆ. ದೇವರ ಬಗ್ಗೆ ಹಗುರವಾಗಿ ಮಾತನಾಡುವವರ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ. ಯುವಕರು ಬದುಕಿನಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತಾವು ಬೆಳೆಸಿಕೊಂಡಾಗ ಯಶಸ್ಸು ತಾನಾಗಿಯೇ ಒಲಿಯುತ್ತದೆ. ಮನೋರಂಜನೆಗೆ ಅಂಟಿಕೊಳ್ಳದೆ ತತ್ತ್ವಜ್ಞಾನವನ್ನು ಮೈಗೂಡಿಕೊಳ್ಳಬೇಕಾಗಿದೆ. ಸ್ವ-ಪರಿವರ್ತನೆ ಆದಾಗಲೇ ಸ್ವಚ್ಛ ಭಾರತಕ್ಕೆ ಅರ್ಥ ಬುರುವುದು. ಬದುಕು ಕೌಶಲ್ಯದೊಂದಿಗೆ ಬೆಳೆದಾಗ ಕಲೆಯ ಸ್ವರೂಪವನ್ನು ಪಡೆಯುತ್ತದೆ. ರಾಷ್ಟ್ರ ನಿರ್ಮಾಣದ ಪರಿಕಲ್ಪನೆ ಯುವಕರಲ್ಲಿ ಇರಬೇಕಾಗಿದೆ. ಪರಿಶ್ರಮ ಇಲ್ಲದಿದ್ದರೆ ಸಾಧಕರಾಗಲು ಅಸಾಧ್ಯ. ಪರಶುರಾಮ ಸೃಷ್ಟಿಯ ಕರಾವಳಿಗೆ ಪ್ರಾಕೃತಿಕ ವಿಕೋಪದ ಯಾವುದೇ ಭಯ ಬೇಡ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ಲಲಿತಾ ಪಂಚಮಿ ಮಹೋತ್ಸವದ ಶುಭಸಂದರ್ಭ ಶ್ರೀ ಸಂಸ್ಥಾನದ ಪುಷ್ಕರಿಣಿಗೆ ಭೂಮಿಪೂಜೆ ನೆರವೇರಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಆಶಿರ್ವಚನ ನೀಡಿ ಧಾರ್ಮಿಕ ಉತ್ಸವಗಳ ಹಿಂದಿರುವ ಉದ್ದೇಶಗಳನ್ನು ಆಚರಣೆಯ ಮೂಲಕ ತಿಳಿದುಕೊಳ್ಳಬಹುದಾಗಿದೆ. ಜೀವನದಲ್ಲಿ ಏರಿಳಿತಗಳಿರುವುದು ಸಹಜ. ದೇವಿಯ ಉಪಾಸನೆ ಮಾಡಿದಾಗ ದೌರ್ಭಾಗ್ಯವನ್ನು ಸೌಭಾಗ್ಯವಾಗಿಸಬಹುದು. ಅನಿಷ್ಟಗಳನ್ನು ತೊಲಗಿಸಲು ಮಹಾಶಕ್ತಿಯ ಆರಾಧನೆ ಅಗತ್ಯ. ಕಲೆ ಹಾಗೂ ಕಲಾವಿದರಿಗೆ ನಿರಂತರವಾಗಿ ಗೌರವ ಸಿಗುವಂತಾಗಬೇಕಾಗಿದೆ ಎಂದು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶ್ರೀ ಗೋಪಿನಾಥ ಶೆಟ್ಟಿಯವರು ಮಾತನಾಡಿ ಮಠ-ಮಂದಿರಗಳು ನಡೆಸುವ ಲೋಕಕಲ್ಯಾಣ ಕಾರ್ಯದಿಂದ ಸಮಾಜ ಸುಭಿಕ್ಷದಿಂದ ಉಳಿದುಕೊಂಡಿದೆ. ಸಮಾಜವನ್ನು ಒಟ್ಟುಗೂಡಿಸಿಕೊಂಡು ಮುನ್ನಡೆಸುವ ಅಗತ್ಯವಿದೆ. ನಾವು ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಕನ್ಯಾನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ವಿಜಯಶಂಕರ ಆಳ್ವ ಮಿತ್ತಳಿಕೆ, ಮಣಿಹಳ್ಳ ಮಾರುತಿ ಸಾ-ಮಿಲ್‌ನ ಮ್ಹಾಲಕ ಶ್ರೀ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್ ಶ್ರೀ ಶರತ್ ಜಿ. ಭಟ್ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.

ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಕುಂಬ್ಳೆ ಶ್ರೀಧರ ರಾವ್, ನಿವೃತ್ತ ಚಿತ್ರಕಲಾ ಸಹಾಯಕ ನಿರ್ದೇಶಕ ಶ್ರೀ ಜಿ.ಆರ್. ಉಪಾಧ್ಯಾಯ, ಸಾಹಿತಿ, ಸಂಘಟಕಿ ’ಅಮೃತ ಪ್ರಕಾಶ’ ಮಾಸಿಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಶ್ರೀ ಮಾಲತಿ ಶೆಟ್ಟಿ ಮಾಣೂರು, ಅಂತರಾಷ್ಟ್ರೀಯ ದಾಖಲೆ ಪ್ರಶಸ್ತಿ ವಿಜೇತ ಶ್ರೀ ರಾಜೇಶ ಪ್ರಭು, ಸಮಾಜ ಸೇವಕ ಶ್ರೀ ಜನಾರ್ದನ ಮಂಗಳೂರು ಇವರಿಗೆ ’ಶ್ರೀ ಗುರುದೇವಾನುಗ್ರಹ’ ಪುರಸ್ಕಾರ ನೀಡಿ ಪೂಜ್ಯ ಶ್ರೀಗಳವರು ಹರಸಿದರು. ಬಾಲ ಕಲಾವಿದೆ ಕು| ಸನ್ನಿಧಿ ಟಿ. ರೈ ಪೆರ್ಲ ಇವರಿಗೆ ’ಪ್ರತಿಭಾ ಪುರಸ್ಕಾರ’ ನೀಡಿ ಆಶೀರ್ವಾದವಿತ್ತರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರನಾಥ ಕೊಟ್ಟಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಒಡಿಯೂರು, ಸದಸ್ಯೆ ಶ್ರೀಮತಿ ನಾಗವೇಣಿ ಟಿ. ಶೆಟ್ಟಿ, ಗ್ರಾಮವಿಕಾಸ ಯೋಜನೆಯ ಸೇವಾದೀಕ್ಷಿತೆ ಕು| ವೀಕ್ಷಾ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಕು| ಚೈತ್ರಾ ಸನ್ಮಾನ ಪತ್ರ ಹಾಗೂ ಸನ್ಮಾನಿತರ ಸಾಧನೆಯ ವಿವಿರಗಳನ್ನು ವಾಚಿಸಿದರು. ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕು ಮೇಲ್ವಿಚಾರಕ ಶ್ರೀ ಸದಾಶಿವ ಅಳಿಕೆ ವಂದನಾರ್ಪಣೆಗೈದರು. ಒಡಿಯೂರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಪ್ರಾರ್ಥನಾಗೀತೆ ಹಾಡಿದರು. ಶಿಕ್ಷಕಿ ಕು| ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ಚಂಡಿಕಾ ಮಹಾಯಾಗ ಸಂಪನ್ನಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ಣ ಶ್ರೀ ದತ್ತಾತ್ರೇಯ ಭಜನಾ ಮತ್ತು ಯಕ್ಷಗಾನ ಮಂಡಳಿ ಇದರ ವಿದ್ಯಾರ್ಥಿಗಳಿಂದ ’ಏಕಾದಶೀ ದೇವಿ ಮಹಾತ್ಮ್ಯೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ರಾತ್ರಿ ಸಾಮೂಹಿಕ ಶ್ರೀ ಸ್ವಯಂವರ ಪಾರ್ವತಿ ಪೂಜೆ, ಅಷ್ಟಾವದಾನ ಸೇವೆ, ರಂಗಪೂಜೆ, ಭದ್ರಕಾಳಿಗೆ ವಿಶೇಷ ಪೂಜೆ ನೆರವೇರಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top