+91 8255-266211
info@shreeodiyoor.org

ಅಂತರಾಷ್ಟ್ರೀಯ ಯೋಗ ದಿನಾಚರಣೆ

 

ಆನಂದವನ್ನು ಅನುಭವಿಸಲು ಇರುವ ಉತ್ತಮ ಮಾರ್ಗ ಎಂದರೆ ಯೋಗ. ಯೋಗದಿಂದ ನಮ್ಮಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ. ಧನಾತ್ಮಕ ಚಿಂತನೆಗಳನ್ನು ನಮ್ಮಲ್ಲಿ ಹೆಚ್ಚು ಅಳವಡಿಸಿಕೊಂಡು ಋತುಗಳಿಗನುಸಾರವಾಗಿ ಆಹಾರ ಸೇವಿಸುವುದರಿಂದ ನಾವು ಆರೋಗ್ಯವಂತರಾಗಬಹುದು. ಯೋಗವು ದೇಹ-ಮನಸ್ಸುಗಳ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಭಾರತೀಯ ಸಂಸ್ಕೃತಿಯ ಭಾಗವಾದ ಯೋಗವು ರಾಷ್ಟ್ರ ಪ್ರೇಮವನ್ನು ಹುಟ್ಟಿಸುತ್ತದೆ. ಜೀವನಮೌಲ್ಯಗಳು ವೃದ್ಧಿಸುತ್ತವೆ; ಸಾತ್ವಿಕ ಭಾವ ಬೆಳೆಯುತ್ತದೆ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ–ಸಪ್ತಾಹ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂದೇಶ ನೀಡಿದರು.ಒಂದು ವಾರ ಯೋಗ ತರಬೇತಿಯನ್ನು ನೀಡಿದ ಯೋಗ ಶಿಕ್ಷಕರಾದ ಶ್ರೀ ಆನಂದ ಶೆಟ್ಟಿಯವರನ್ನು ಪೂಜ್ಯ ಶ್ರೀಗಳವರು ಶಾಲು ಹೊದಿಸಿ ಫಲಮಂತ್ರಾಕ್ಷತೆಯಿತ್ತು ಹರಸಿದರು.

ಈ ಸುಸಂದರ್ಭ ಸಾದ್ವಿ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಂಗಳೂರು ವಲಯದ ಅಧ್ಯಕ್ಷ ಶ್ರೀ ಜಯಂತ್ ಜೆ. ಕೋಟ್ಯಾನ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಬಿ.ಕೆ ಚಂದ್ರಶೇಖರ್ ಮತ್ತು ಉಗ್ಗಪ್ಪ ಶೆಟ್ಟಿ ಕೊಂಬಿಲ ಹಾಗೂ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಗಣಪತಿ ಭಟ್ ಸೇರಾಜೆ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top