+91 8255-266211
info@shreeodiyoor.org

“ತುಳುನಾಡ ಸಂಸ್ಕೃತಿ ಮನಸ್ಸಿಗೆ ಖುಷಿಕೊಡುವ ಸಂಸ್ಕೃತಿ” – ಸಾಧ್ವಿ ಶ್ರೀ ಮಾತಾನಂದಮಯೀ

 

ಪುತ್ತೂರು, ಎ.2: “ತುಳುನಾಡಿನ ಪುರಾತನ ತುಳು ಸಂಸ್ಕೃತಿ ಮನಸ್ಸಿಗೆ ಬಹಳಷ್ಟು ಖುಷಿಕೊಡುವ ಸಂಸ್ಕೃತಿ, ತುಳು ಪತ್ರಿಕೆಗಳ ಮೂಲಕ ತುಳು ಭಾಷೆಯು ರಾಷ್ಟ್ರೀಯವಾಗಿ ಬೆಳೆದು, ಅದರ ಮುಖಾಂತರ ತುಳು ಭಾಷೆಯು ಹೆಸರು ಗಳಿಸಬೇಕು. ರಾಷ್ಟ್ರೀಯ ತುಳು ಪತ್ರಿಕಾ ಸಮ್ಮೇಳನದ ಮುಖಾಂತರ ತುಳುಭಾಷೆ 8ನೇ ಪರಚ್ಛೇದಕ್ಕೆ ಸೇರ್ಪಡೆಯಾಗುವ ದೊಡ್ಡ ಕನಸು ನನಸಾಗಲು ಸಹಕಾರಿಯಾಗಲಿ” ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನಗೈದರು.
ಪೂವರಿ ಪತ್ರಿಕಾ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿಯ ಸಹಯೋಗದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಸಿದ ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಾತಾನಂದಮಯೀ ಮಾತನಾಡಿ “ತುಳು ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ತುಳುನಾಡಿನ ಪ್ರತಿಯೊಬ್ಬರೂ ಆಸಕ್ತಿವಹಿಸಬೇಕು. ಸಾಹಿತ್ಯಗಳನ್ನು ಪಡೆದುಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕು” ಎಂದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಐತಪ್ಪ ನಾಯ್ಕ ಪೂವರಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿರು. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿಯ ಅಧ್ಯಕ್ಷ ಶ್ರೀ ಸವಣೂರು ಸೀತಾರಾಮ ರೈ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ನ್ಯಾಯಾವಾದಿ ಶ್ರೀ ಕುಂಬ್ರ ದುರ್ಗಾಪ್ರಸಾದ್ ರೈ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ನಡೆದ ತುಳು ಭಜನೆಯ ಕಾರ್ಯಕ್ರಮವನ್ನು ನ್ಯಾಯವಾದಿ ಮಹೇಶ್ ಕಜೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಮುಳಿಯ ಕೇಶವಪ್ರಸಾದ್ ಉಪಸ್ಥಿತರಿದ್ದರು. ಶ್ರಿಮತಿ ನಯನಾ ರೈ ನೆಲ್ಲಿಕಟ್ಟೆಯವರ ನೇತೃತ್ವದ ಒಡಿಯೂರು ವಜ್ರಮಾತಾ ಮಹಿಳಾ ಭಜನಾ ಘಟಕ ಹಾಗೂ ಶ್ರೀಮತಿ ವಸಂತಲಕ್ಷ್ಮೀ ನೇತೃತ್ವದ ರಂಗದೀಪ ತಂಡ ಪುತ್ತೂರು ಇವರಿಂದ ತುಳು ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಪೂವರಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಶ್ರೀ ಐತಪ್ಪ ನಾಯ್ಕ ಬಿಡುಗಡೆ ಮಾಡಿದರು. ತುಳುಭಾಷೆಯಲ್ಲಿ ಪ್ರಕಟಗೊಂಡಿದ್ದ ಹಲವು ಪತ್ರಿಕೆಗಳ ಪ್ರದರ್ಶನವು ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಗಳಿಗೆ ಸಾಧ್ವಿ ಮಾತಾನಂದಮಯಿ ಅವರು ಹೂ, ಅಕ್ಕಿ, ಕಾಳುಗಳನ್ನು ಹಾಕಿ ಚಾಲನೆ ನೀಡಿದರು.
ಶ್ರೀಮತಿ ಮಲ್ಲಿಕಾ ಜೆ.ರೈ ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ದೇವಕಿ ಸ್ವಾಗತಿಸಿದರು. ನಗರ ಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು ವಂದಿಸಿದರು.
ರಾಷ್ಟ್ರೀಯ ತುಳು ಪತ್ರಿಕಾ ಸಮ್ಮೇಳನದ ಸಮಾರೋಪ
“ತುಳುವಿನಲ್ಲಿ ನಮ್ಮ ಬದುಕಿನ ಸಂಸ್ಕೃತಿ ಅಡಗಿದೆ” -ಒಡಿಯೂರು ಶ್ರೀ
“ತುಳು ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ. ಅದರಲ್ಲಿ ಬದುಕಿನ ಸಂಸ್ಕೃತಿ ಅಡಗಿದೆ. ತಾಯಿ-ಮಗುವಿಗೆ ವಾತ್ಸಲ್ಯದ ಶಕ್ತಿ, ಸಂಬಂಧ ತುಳು ಸಂಸ್ಕೃತಿಯಲ್ಲಿ ಅಡಗಿದೆ. ತುಳು ಭಾಷೆ ಉಳಿದಾಗ ಮಾತ್ರ ತುಳುವರ ಸಂಸ್ಕೃತಿಯು ಉಳಿಯಲು ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪೂವರಿ ಪತ್ರಿಕಾ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿಯ ಸಹಯೋಗದೊಂದಿಗೆ ಎ.2 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
“ತುಳು ಮಾತೃಭಾಷೆ, ಅದಕ್ಕೆ ಬಹಳಷ್ಟು ಶಕ್ತಿ ಇದೆ, ಅದನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಪ್ರಾಮುಖ್ಯವಾಗಿ ನಡೆಯಬೇಕು ಎಂದು ಶ್ರೀಗಳು ತುಳುಭಾಷೆ, ಸಂಸ್ಕೃತಿ ಉಳಿಸುವಲ್ಲಿ ತಂಡದ ಮೂಲಕ ಕೆಲಸ ನಡೆಯಬೇಕು. ಊರುಗಳ ಹೆಸರಿನ ಹಿಂದೆ ಅಲ್ಲಿನ ಪುರಾತನ ಭೌಗೋಳಿಕ ಸನ್ನವೇಶ ಒಳಗೊಂಡಿರುತ್ತದೆ. ಊರುಗಳ ಹೆಸರು ಬದಲಾದರೆ ಅಲ್ಲಿನ ಸಂಸ್ಕøತಿ ಬದಲಾದಂತೆ. ಹೀಗಾಗಿ ಊರುಗಳ ಹೆಸರು ಬದಲಾವಣೆ ಮಾಡಬಾರದು” ಎಂದು ಸ್ವಾಮೀಜಿಯವರು ತಿಳಿಸಿದರು.
ಹಿರಿಯ ಸಾಹಿತಿ ನಿವೃತ್ತ ಮುಖ್ಯಗುರು ಶ್ರೀ ನಾರಾಯಣ ರೈ ಕುಕ್ಕುವಳ್ಳಿ, ಗುರುದೇವ ಬಳಗದ ಗೌರವಾಧ್ಯಕ್ಷ ಶ್ರೀ ದೇವಪ್ಪ ನೋಂಡಾ ಹಾಗೂ ವಜ್ರಮಾತಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಯನಾ ರೈ ನೆಲ್ಲಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತುಳು ಪತ್ರಿಕೆಯ ಸಂಪಾದಕರಾದ ರಾಶಿ ಜಾನಪದ ಪತ್ರಿಕೆಯ ಡಾ| ಗಣನಾಥ ಶೆಟ್ಟಿ ಎಕ್ಕಾರು, ತುಳುವರೆ ತುಡರ್ ಪತ್ರಿಕೆಯ ಶ್ರೀ ಮ. ವಿಠಲ ಪುತ್ತೂರು, ತುಳು ರಂಗಕಾರವಲ್ ಪತ್ರಿಕೆ ಶ್ರೀ ಬಿ.ಪಿ.ಶೇಣಿ, ಕೊಡಗು ತುಳುವೆರ ತುಡಿಪು ಪತ್ರಿಕೆಯ ಶ್ರೀ ಬಿ.ಎಂ.ಕೆ.ವಾಸು ರೈ, ನೇಸರ್ ಪತ್ರಿಕೆಯ ಶ್ರೀ ಜಯ ಮಣಿಯಂಪಾರೆ ಕಾಸರಗೋಡು, ಉಡಲ್ ಪತ್ರಿಕೆಯ ಶ್ರೀಮತಿ ಜಯಂತಿ ಎಸ್ ಬಂಗೇರ ಮೂಡಬಿದ್ರೆ, ಟೈಮ್ಸ್ ಆಫ್ ನಮ್ಮ ಕುಡ್ಲ ಪತ್ರಿಕೆಯ ಶ್ರೀ ಎಸ್.ಆರ್.ಬಂಡಿಮಾರ್, ಅತ್ಯಧಿಕ ತುಳು ಪತ್ರಿಕೆ ಸಂಗ್ರಹಿಸಿರುವ ಶ್ರೀ ಉಮೇಶ್ ರೈ ಎಕ್ಕಾರು ಹಾಗೂ ರಾಶಿ ಪತ್ರಿಕೆಯ ಡಾ| ಪದ್ಮನಾಭ ಎಕ್ಕಾರ್‍ರವರನ್ನು ಸನ್ಮಾನಿಸಲಾಯಿತು.
ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಶ್ರೀ ಎಸ್. ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿ ಡಾ| ರಾಜೇಶ್ ಆಳ್ವ ಬದಿಯಡ್ಕ ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top