+91 8255-266211
info@shreeodiyoor.org

ಮುಂಬೈ ಘಟಕದ 18ನೇ ವಾರ್ಷಿಕೋತ್ಸವ

“ಭಾಷೆಯ ಹಿಂದೆ ಸಂಸ್ಕೃತಿ-ಸಂಸ್ಕಾರ ಅಡಗಿದೆ. ನಮ್ಮಲ್ಲಿ ಸಂಸ್ಕಾರಗಳು ಜಾಗೃತಗೊಳ್ಳಬೇಕಾದರೆ ಸಮರ್ಪಣಾ ಭಾವ ಇರಬೇಕು. ಮಾತೃಭಾಷೆಯಲ್ಲಿಯೇ ಮನೆಯಲ್ಲಿ ವ್ಯವಹರಿಸಿದಾಗ ಮಕ್ಕಳಲ್ಲಿ ಭಾಷಾಭಿಮಾನದೊಂದಿಗೆ ಸಂಸ್ಕೃತಿ-ಸಂಸ್ಕಾರಗಳ ಅರಿವು ಬೆಳೆಯುತ್ತದೆ. ದಾನ, ಧರ್ಮದ ಮುಖಾಂತರ ಮನಃಶಾಂತಿ ದೊರೆಯುತ್ತದೆ. ನಾವು ಗಳಿಸುವ ಸ್ವಲ್ಪಾಂಶವನ್ನು ನಿರ್ಗತಿಕರ ಕಲ್ಯಾಣಕ್ಕಾಗಿ ನೀಡಿದಾಗ ಬದುಕು ಪಾವನವಾಗುತ್ತದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪ್ರಭಾವ ಅಧಿಕವಾಗಿದ್ದು, 18ನೇ ವಾರ್ಷಿಕೋತ್ಸವ ಈ ಸುಸಂದರ್ಭ ಯುವ ಬಳಗವು ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಧರ್ಮಪ್ರಜ್ಞೆಯನ್ನು ಮಕ್ಕಳಿಗೆ ಎಳವೆಯಲ್ಲಿಯೇ ಮೂಡಿಸುವಲ್ಲಿ ಬಳಗ ಮುಂದಾಗಿರುವುದು ಅಭಿಮಾನದ ಸಂಗತಿಯಾಗಿದೆ. ಬದುಕು ಸುಂದರವಾಗಲು ಬದಲಾವಣೆಯ ಅಗತ್ಯವಿದೆ. ಈ ದೃಷ್ಟಿಯಲ್ಲಿ ಯುವವಿಭಾಗವವು ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲಲಿ. ಬಳಗ ಹಾಗೂ ಮಹಿಳಾ ವಿಕಾಸ ಕೇಂದ್ರವು ಶ್ರೀ ಸಂಸ್ಥಾನದ ಪೋಷಣೆಯಲ್ಲಿ ಬಹಳಷ್ಟು ತೊಡಗಿಸಿಕೊಂಡಿದೆ. ಇಲ್ಲಿನ ತುಳು-ಕನ್ನಡಿಗರು ಅಭಿವೃದ್ಧಿಗೆ ಸಹಕಾರವನ್ನು ನೀಡಿರುವುದು ಶ್ಲಾಘನೀಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮುಂಬೈನ ಕುರ್ಲಾದ ಬಂಟರ ಭವನದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ, ಮಹಾರಾಷ್ಟ್ರ ಘಟಕದ ೧೮ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಅವರು ಈ ಸುಸಂದರ್ಭ ’ಒಡಿಯೂರು ಶ್ರೀ ಯುವ ಸೇವಾ ಬಳಗ’ಕ್ಕೆ ಚಾಲನೆ ನೀಡಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶಯಗೀತೆ ಹಾಡಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯುವಸಂಸದ ಡಾ. ಶ್ರೀಕಾಂತ್ ಶಿಂಧೆ ಮಾತನಾಡಿ “ಸ್ವಾಮೀಜಿಯವರ ಸಾಮಾಜಿಕ, ಧಾರ್ಮಿಕ ಸೇವಾಕಾರ್ಯಗಳನ್ನು ಕಂಡು ಬಹಳ ಸಂತೋಷವಾಗುತ್ತಿದೆ. ಹಿರಿಯರ ಉತ್ತಮ ಮಾರ್ಗದರ್ಶನದೊಂದಿಗೆ ಯುವಪೀಳಿಗೆ ಮುಂದುವರಿದರೆ ಪ್ರಗತಿ ಸಾಧ್ಯ” ಎಂದರು. ಮುಂಬೈ ಬಂಟರ ಸಂಘದ ಅಧ್ಯಕ್ಷ ಶ್ರೀ ಪ್ರಭಾಕರ ಎಲ್. ಶೆಟ್ಟಿ ಮಾತನಾಡಿ “ಸ್ವಾಮೀಜಿಯವರ ಮಾರ್ಗದರ್ಶನದಿಂದ ಭಕ್ತಿಯ ಜೊತೆಗೆ ಜ್ಞಾನಾರ್ಜನೆಯು ಹೆಚ್ಚುತ್ತದೆ. ಯುವಪೀಳಿಗೆಯನ್ನು ಇಂತಹ ಕಾರ್ಯಕ್ರಮಗಳಿಗೆ ಬರುವಂತೆ ಪ್ರೇರೇಪಿಸುವುದು ಪಾಲಕರ ಕರ್ತವ್ಯ “ಎಂದರು.

ಭವಾನಿ ಶಿಪ್ಪಿಂಗ್ ಕಂಪನಿಯ ಸಿ.ಎಂ.ಡಿ. ಶ್ರೀ ಕೆ.ಡಿ. ಶೆಟ್ಟಿಯವರು ಮಾತನಾಡಿ “ನಾನೋರ್ವ ಬಳಗದ ಶಾಶ್ವತ ಸದಸ್ಯ. ಸ್ವಾಮೀಜಿಯವರ ಆಶೀರ್ವಾದದಲ್ಲಿ ಪ್ರಾರಂಭವಾಗುವ ಯಾವುದೇ ಕಾರ್ಯವು ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಬಳಗವು ಯುವವಿಭಾಗಕ್ಕೆ ಚಾಲನೆ ನೀಡಿ ಜವಾಬ್ದಾರಿಯನ್ನು ಹೆಚ್ಚಿಸಿರುವುದು ಉತ್ತಮವಾದುದಾಗಿದೆ” ಎಂದರು.

“ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ನಮ್ಮನ್ನು ಹೆಚ್ಚಾಗಿ ಸೆಳೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಪೂಜ್ಯ ಶ್ರೀಗಳವರಿಂದ ಧರ್ಮದ ಪ್ರಚಾರ ನಡೆಯುತ್ತಿರುವುದು ದೇಶದ ಪ್ರಗತಿ ನಾಂದಿಯಾಗಿದೆ” ಎಂದು ಬಂಟರ ಸಂಘ, ನವಿಮುಂಬೈನ ಕಾರ್ಯಾಧ್ಯಕ್ಷ ಶ್ರೀ ಖಾಂದೇಶ್ ಭಾಸ್ಕರ ಶೆಟ್ಟಿ ನುಡಿದರು.

“ಗುರುವಿನಿಂದ ಅಜ್ಞಾನ ದೂರವಾಗುತ್ತದೆ. ಮನುಷ್ಯ ಎಷ್ಟೇ ದೊಡ್ಡವನಾಗಲಿ ನಯ, ವಿನಯವನ್ನು ಗುರುವಿನಿಂದ ಕಲಿಯಬೇಕು. ಯುವವಿಭಾಗವನ್ನು ಪ್ರಾರಂಭಿಸಿ ಬಳಗವು ಉತ್ತಮ ಕೆಲಸವನ್ನು ಮಾಡಿದೆ. ಒಡಿಯೂರಿನ ಜನಪರ ಕಾರ್ಯಗಳಿಗೆ ಎಲ್ಲರ ಸಹಕಾರವಿರಲಿ” ಎಂದು ಬಂಟ ಸಂಘದ ಮಹಿಳಾ ವಿಭಾಗದ ಕಾರ‍್ಯಾಧ್ಯಕ್ಷೆ ಶ್ರೀಮತಿ ಲತಾ ಜೆ. ಶೆಟ್ಟಿ ಶುಭಹಾರೈಸಿದರು.

ಉದ್ಯಮಿ ಶ್ರೀ ಜಯಂತ್ ಶೆಟ್ಟಿ ಮಲಾಡ್ ಮತ್ತು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುಣೆ ಘಟಕದ ಅಧ್ಯಕ್ಷ ಶ್ರೀ ಸದಾನಂದ ಶೆಟ್ಟಿ ಶುಭಹಾರೈಸಿದರು. ವೇದಿಕೆಯಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ಬಳಗದ ಉಪಾಧ್ಯಕ್ಷ ಶ್ರೀ ಬೋಳ್ನಾಡುಗುತ್ತು ಚಂದ್ರಹಾಸ ಎಂ. ರೈ ಉಪಸ್ಥಿತರಿದ್ದರು. ಉದ್ಯಮಿ ಶ್ರೀ ಸತೀಶ್ ಶೆಟ್ಟಿ ದಂಪತಿ ಶ್ರೀ ಗುರುಪಾದುಕಾಪೂಜೆ ನೆರವೇರಿಸಿದರು.

ಬಳಗದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕು| ಕವಿತಾ ಪ್ರಕಾಶ್ ಶೆಟ್ಟಿ ಪೂಜ್ಯ ಶ್ರೀಗಳವರ ಬಗ್ಗೆ ರಚಿಸಿದ ಕವಿತೆಯನ್ನು ಪ್ರಸ್ತುತಪಡಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಆರಂಭದಲ್ಲಿ ಶ್ರೀ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ’ಗೀತಾ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಸಂಪನ್ನಗೊಂಡಿತು.

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top