+91 8255-266211
info@shreeodiyoor.org

ಅಭಿನಂದನಾ ಸಮಾರಂಭ

 

“ಸಮಾಜದ ಹಿತಕ್ಕಾಗಿ ಗ್ರಾಮೋತ್ಸವ ನಡೆದಿದೆ. ಲೋಕಕಲ್ಯಾಣದ ಹಿಂದೆ ಭಗವಂತನ ಸೇವೆ ಅಡಗಿದೆ. ಗ್ರಾಮೋತ್ಸವಕ್ಕಾಗಿ ಏರ್ಪಡಿಸಿದ್ದ ಸಮಾಲೋಚನೆ ಸಭೆಯಿಂದ ಅಭಿನಂದನಾ ಸಭೆಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಒಂದು ಕಾರ್ಯಕ್ರಮ ಇನ್ನೊಂದಕ್ಕೆ ಪ್ರೇರಣೆ, ಆದರ್ಶವಾಗಿರಬೇಕು. ಕಲ್ಪನೆಯಲ್ಲೇ ಉಳಿದಾಗ ವಾಸ್ತವ ಮರೆಯುವ ಸಾಧ್ಯತೆ ಹೆಚ್ಚು. ಭಗವಂತನ ಮೇಲೆ ಭಕ್ತಿ, ವಿಶ್ವಾಸ ಇಟ್ಟರೆ ಯಶಸ್ಸಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲಿ ನಡೆದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನಗೈದ ಪೂಜ್ಯ ಶ್ರೀಗಳವರು “ಎತ್ತಿನಹೊಳೆಯಂತಹ ಅವೈಜ್ಞಾನಿಕ ನದಿ ತಿರುಗಿಸುವ ಯೋಜನೆ ಮೂಲಕ ಪ್ರಕೃತಿಯನ್ನು ಕೆಣಕುವ ಕಾರ್ಯ ಸರಿಯಲ್ಲ. ಕೇರಳ ಮತ್ತು ಕೊಡಗು ಭಾಗದಲ್ಲಿ ಪ್ರಕೃತಿ ವಿಕೋಪದಿಂದಲಾಗಿ ಬಹಳಷ್ಟು ನಷ್ಟ ಸಂಭವಿಸಿದೆ. ನಮ್ಮ ಸಹಕಾರ ಅಗತ್ಯವಿರುವ ಹಿನ್ನಲೆಯಲ್ಲಿ ಗ್ರಾಮೋತ್ಸವದಲ್ಲಿ ಉಳಿಕೆಯಾದ 2 ಲಕ್ಷ ರೂಪಾಯಿಗಳನ್ನು ನೆರೆ ಪರಿಹಾರನಿಧಿಗೆ ಸಂದಾಯ ಮಾಡಲಾಗುವುದು” ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಆಶೀರ್ವಚನಗೈದು “ಸಮಿತಿಯ ಪದಾಧಿಕಾರಿಗಳ ಹಾಗೂ ಸದಸ್ಯರ ತ್ಯಾಗ ಮತ್ತು ಸೇವಾ ಮನೋಭಾವನೆಯಿಂದ ಗ್ರಾಮೋತ್ಸವ ಯಶಸ್ವಿಯಾಗಿ ಸಂಪನ್ನಗೊಳ್ಳಲು ಸಾಧ್ಯವಾಗಿದೆ. ಗ್ರಾಮೋತ್ಸವ ಆನಂದೋತ್ಸವವಾಗಿ ನಡೆದಿದೆ. ಗುರುಗಳ ಜೀವನ ಪ್ರತಿಯೊಬ್ಬರಿಗೂ ಸಂದೇಶ” ಎಂದರು.

ಒಡಿಯೂರು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ, ಸಮಿತಿಯ ಸಂಚಾಲಕ ಶ್ರೀ ತಾರಾನಾಥ ಕೊಟ್ಟಾರಿ ಮಾತನಾಡಿ “ಸಮರ್ಪಣಾಭಾವದ ಸೇವೆ ಎಲ್ಲರಿಂದ ನಡೆದಿದೆ. ಎಲ್ಲಾ ಗ್ರಾಮಗಳಲ್ಲೂ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿದೆ. ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಜಿಲ್ಲೆಯಾದ್ಯಂತ ಸಂಚಲನವನ್ನುಂಟುಮಾಡಿದೆ. ಕಳೆದ ಗ್ರಾಮೋತ್ಸವದಿಂದ ಪ್ರಸಕ್ತ ಗ್ರಾಮೋತ್ಸವದ ವರೆಗೆ ಅರ್ಹ ಫಲಾನುಭವಿಗಳಿಗೆ ಸುಮಾರು 37 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ” ಎಂದರು.

ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು ಅವರು ಮಾತನಾಡಿ “ಸೇವೆಯ ಅವಕಾಶವನ್ನು ಪ್ರತಿಯೊಬ್ಬರು ಉಪಯೋಗಿಸಿಕೊಳ್ಳಬೇಕು. ಭಕ್ತಿಯಿಂದ ಮಾಡುವ ಕಾರ್ಯ ಸಣ್ಣದಾದರೂ ಬಹಳಷ್ಟು ಪರಿಣಾಮಕಾರಿಯಾಗಿರುತ್ತದೆ” ಎಂದರು.

ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಹಿರಿಯ ಪರ್ತಕರ್ತ ಶ್ರೀ ಯಶವಂತ್ ವಿಟ್ಲ, ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀ ಬೋಳಾರ ಕರುಣಾಕರ ಶೆಟ್ಟಿ ದೋಹಾಕತಾರ್, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಗಳ ಪ್ರಮುಖರಾದ ಶ್ರೀ ಪಿ. ಲಿಂಗಪ್ಪ ಗೌಡ, ಶ್ರೀ ಆಶಾ ಭಾಸ್ಕರ ಶೆಟ್ಟಿ ಕನ್ಯಾನ, ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು, ಶ್ರೀ ಅಜಿತ್‍ನಾಥ್ ಶೆಟ್ಟಿ, ಶ್ರೀ ಎ. ಜಯಪ್ರಕಾಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಮತಿ ರೇಣುಕಾ ಎಸ್.ರೈಯವರ ಆಶಯಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಸಮಿತಿಯ ಕೋಶಾಧಿಕಾರಿ ಶ್ರೀ ಬಿ.ಕೆ. ಚಂದ್ರಶೇಖರ್ ಲೆಕ್ಕಪತ್ರ ಮಂಡಿಸಿದರು. ಕ್ರೀಡಾ ಸಮಿತಿಯ ಸಂಚಾಲಕ ಶ್ರೀ ಸದಾಶಿವ ಶೆಟ್ಟಿ ಸ್ವಾಗತಿಸಿದರು. ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ ವಂದಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸದಾಶಿವ ಅಳಿಕೆ ನಿರೂಪಿಸಿದರು.

ಸುಮಾರು 23ಮಂದಿ ಹಲವು ಬಗೆಯ ತಿನಿಸುಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸುಮಾರು 123ಕ್ಕೂ ಅಧಿಕ ತಿಂಡಿ-ತಿನಸುಗಲಿದ್ದವು. ಶ್ರೀಮತಿ ಸುಗುಣಾ ಗೋಪಾಲಕೃಷ್ಣ ಅವರು 44 ಬಗೆಯ ತಿನಿಸುಗಳು, ಶ್ರೀಮತಿ ರೇಖಾ ಅವರು 15 ಹಾಗೂ ಶ್ರೀಮತಿ ವನಮಾಲಾ ಬಿ.ಮೇಲಂಟ ಅವರು 14 ಹಾಗೂ ಶ್ರೀಮತಿ ಸರಿತಾ ಡಿ. ಶೆಟ್ಟಿ 10 ಬಗೆಯ ಆಟಿ ತಿಂಗಳ ತಿನಿಸುಗಳನ್ನು ಪ್ರದರ್ಶಿಸಿದರು. ಇವರನ್ನು ಪೂಜ್ಯ ಶ್ರೀಗಳವರು ಪುರಸ್ಕರಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top