ವ್ಯಕ್ತಿ ವಿಕಾಸವಾಗದೆ ರಾಷ್ಟ್ರ ವಿಕಾಸವಾಗುವುದಿಲ್ಲ. ನಾವು ಭಾರತ ದೇಶದ ರಥವನ್ನು ಓಡಿಸುವವರಾಗಬೇಕು. ಬಾರತ ಎಂದರೆ ಬೆಳಕಿನಿಂದ ಕೂಡಿದ್ದು ಎಂದರ್ಥ. ನಾವೆಲ್ಲರೂ ಭಾರತದ ರಥದ ಸಾರಥಿಯಾಗಬೇಕು. ಆಧ್ಯಾತ್ಮದ ಬೆಳಕು ನಮ್ಮಲ್ಲಿ ಬೆಳಗಬೇಕು. ಬದುಕು ಬೆಳಗಬೇಕಾದರೆ ಸಂಸ್ಕಾರ ಬೇಕು. ವಿಶ್ವ ಎನ್ನುವುದು ವಿಶ್ವ ವಿದ್ಯಾಲಯವಿದ್ದಂತೆ, ನಾವು ನಿರಂತರವಾಗಿ ಕಲಿಯುವಂತವರಾಗಬೇಕು. ನಮ್ಮ ವಿಕಾಸವನ್ನು ನಾವೇ ಮಾಡಿಕೊಳ್ಳಬೇಕು. ನಾವು ಯಾರೆಂಬ ಅರಿವು ನಮಗಿರಬೇಕು. ಎಂಬುದಾಗಿ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಸಂಪನ್ನಗೊಂಡ ಬಾಲವಿಕಾಸ ಸಮಾವೇಶದ ಉದ್ಘಾಟನೆಯನ್ನು ದೀಪೋಜ್ವಲನದ ಮುಖೇನ ನೆರವೇರಿಸಿದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವದಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕರಾದ ಟಿ.ತಾರಾನಾಥ ಕೊಟ್ಟಾರಿ, ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಶ್ರೀ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ವಲಯದ ಮೇಲ್ವಿಚಾರಕರಾದ ಸದಾಶಿವ ಅಳಿಕೆ ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಳಿಕೆ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿನಿಯಾದ ರಕ್ಷಿತಾ ಸ್ವಾಗತಿಸಿ, ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ದೀಪಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಕುಡ್ಪಲ್ತಡ್ಕ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿನಿ ಶಿಲ್ಪಾ ವಂದಿಸಿದರು. ಈ ಸಂದರ್ಭ ಶಿಬಿರಾರ್ಥಿಗಳಿಂದ ಪತಿಭಾ ಪ್ರದರ್ಶನ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಾಲವಿಕಾಸ ಕೇಂದ್ರದ ಭಗಿನಿಯರು, ಗೌರವ ಶಿಕ್ಷಕಿಯರು ಹಾಗೂ ಶ್ರೀ ಗುರುದೇವ ವಿದ್ಯಾಪೀಠದ ಸಿಬ್ಬಂದಿಗಳು ಸಹಕರಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪುತ್ತೂರು, ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕಿನ ಮೇಲ್ವಿಚಾರಕರು ಹಾಗೂ ಸಂಪನ್ಮೂಲ ವ್ಯಕ್ತಿಯಾದ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.