+91 8255-266211
info@shreeodiyoor.org

ಮಾತೃಪೂಜನ- ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

ಮಾತೆ ಎನ್ನುವುದೊಂದು ಶಕ್ತಿ. ಹತ್ತಿಯ ಚೂರುಗಳ ತ್ಯಾಗದಿಂದ ದೀಪ ಬೆಳಗುವಂತೆ ತಾಯಂದಿರು ಶ್ರಮವಹಿಸಿದಾಗ ಮಗುವಿನ ಬೆಳವಣಿಗೆಗೆ ಸಹಕಾರಿ. ಮಕ್ಕಳು ಅರಳಬೇಕಾದರೆ ಸದಾ ಪ್ರೋತ್ಸಾಹ ಅಗತ್ಯ. ಇದಕ್ಕೆ ತಾಯಂದಿರಿಗೆಲ್ಲ ಸಮರ್ಥ ಶಿವಾಜಿಯ ಮಾತೆ ಜೀಜಾಬಾಯಿಯೇ ಆದರ್ಶ. ವಿಶ್ವ ಮಾನವ ಧರ್ಮವನ್ನು ತಿಳಿಸುವ ಪ್ರಯತ್ನ ಶಿಕ್ಷಣದಿಂದಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಬದುಕು ಶಿಕ್ಷಣಕ್ಕೆ ಒತ್ತು ನೀಡಬೇಕು. ಒಳ್ಳೆಯತನವನ್ನು ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ನಾವೆಲ್ಲರೂ ವಿಶಾಲ ಮನೋಭಾವನೆಯನ್ನು ಹೊಂದಿರಬೇಕು. ಮನುಜಮತವು ವಿಶ್ವಪಥದಲ್ಲಿ ಸಾಗುವಂತೆ ಮಾಡುವುದೇ ಮಾತೃಪೂಜನಾ ಕಾರ್ಯಕ್ರಮದ ಗುರಿ. ಅಂತರಂಗ ಶುದ್ಧವಾಗಿರಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಭವ್ಯರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಬೇಕು. ಉತ್ತಮ ವಿಚಾರಗಳನ್ನು ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ್ದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ-ಮಾತೃಪೂಜನ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.

ದೀಪೋಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ತಾಯಿ ತ್ಯಾಗಮಯಿ. ಕಲಿಯುಗದಲ್ಲಿ ಭಗವಂತ ತಂದೆ-ತಾಯಿಯರ ರೂಪದಲ್ಲಿ ಕಾಣಿಸುತ್ತಿದ್ದಾನೆ. ಮಾತೃಪೂಜನ ಕಾರ್ಯಕ್ರಮದ ಮೂಲಕ ಜಗನ್ಮಾತೆಗೆ ಇಂದು ಗೌರವ ಸಲ್ಲಿಸಿದಂತಾಗಿದೆ. ಶ್ರೀ ಶಂಕರಾಚಾರ್ಯ ಭಗವತ್ಪಾದರು ಹೇಳಿದಂತೆ ಕುಪುತ್ರೋ ಜಾತೇತ ಕ್ವಚಿದಪಿ ಕುಮಾತಾ ನ ಭವತಿ. ಸದೃಢಳಾದ ಮಹಿಳೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಆಶೀರ್ವಚನಗೈದರು.

ಪುರೋಹಿತರಾದ ಶ್ರೀ ಶುಕ್ಲಶ್ಯಾಮ ಭಟ್ ಮಾತೃಪೂಜನ ಕಾರ್ಯಕ್ರಮ ವಿಧಿ-ವಿಧಾನಗಳನ್ನು ತಿಳಿಸಿಕೊಟ್ಟರು. ಮಕ್ಕಳು ದೀಪ ಉರಿಸುವ ಮೂಲಕ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಿ, ಭಜನೆ, ಗೀತೆ ಹಾಡುವ ಮೂಲಕ ಸಂಭ್ರಮಿಸಿದರು.

ವೇದಿಕೆಯಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಶಾಲಾ ಸಂಚಾಲಕರಾದ ಶ್ರೀ ಸೇರಾಜೆ ಗಣಪತಿ ಭಟ್, ಮುಖ್ಯೋಪಾಧ್ಯಾಯರಾದ ಶ್ರೀ ಜಯಪ್ರಕಾಶ್ ಶೆಟ್ಟಿ ಎ. ಉಪಸ್ಥಿತರಿದ್ದರು.
ಶ್ರೀ ಗುರುದೇವ ಗುರುಕುಲದ ಮಾತಾಜಿ ಶ್ರೀಮತಿ ಸಾಯೀಶ್ವರೀ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕನ್ಯಾನ ಗುರುಕುಲದ ಮಾತಾಜಿ ಶ್ರೀಮತಿ ಸಂಧ್ಯಾ ವಿ. ವಂದಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನವಿತಾ ಬಿ. ಮತ್ತು ಎಲ್ಲಾ ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top