+91 8255-266211
info@shreeodiyoor.org

ಸಹಕಾರ ತತ್ತ್ವ ಅನುಷ್ಠಾನದಿಂದ ದೇಶ ಸುಭಿಕ್ಷ

“ಸಹಕಾರ ತತ್ತ್ವ ಅನುಷ್ಠಾನದಿಂದ ದೇಶ ಸುಭಿಕ್ಷ” 
– ಸೌಹಾರ್ದ ಸಹಕಾರಿಗಳ 10ದಿನಗಳ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ
“ಬದುಕು ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ. ಅಸಾಧ್ಯವಾದುದನ್ನು ಸಾಧ್ಯವಾಗಿಸುವುದಕ್ಕೆ ಇಂತಹ ಶಿಬಿರಗಳ ಅವಶ್ಯಕತೆ ಇದೆ.  ಭಾರತ ದೇಶದ ಜೀವಾಳವೇ ಅಧ್ಯಾತ್ಮ. ಜೇನಿನಂತೆ ಎಲ್ಲರೊಳಗೆ ಬೆಸೆಯುವವರು ನಾವಾಗಬೇಕು. ಸಹಕಾರದ ಮೂಲತತ್ತ್ವವೇ ಏಕತೆ. ಸಹಕಾರಿ ತತ್ತ್ವ ಅನುಷ್ಠಾನವಾದರೆ ದೇಶ ಸುಭಿಕ್ಷವಾಗಬಹುದು. ನಾವೆಲ್ಲರೂ ಪರೋಪಕಾರಿಗಳಾಬೇಕು. ಪ್ರಕೃತಿಯಲ್ಲಿ ಸಹಕಾರಿ ತತ್ತ್ವದ ಪಾಠ ಅಡಕವಾಗಿದೆ. ರಾಷ್ಟ್ರ ವಿಕಾಸಕ್ಕೆ ವ್ಯಕ್ತಿತ್ವ ವಿಕಸನ ಶಿಬಿರ ಪೂರಕವಾಗಿದೆ. ಸಮಾಜಮುಖಿಯಾಗಿ ಸಮಾಜಹಿತಕ್ಕಾಗಿ ಬದುಕುವ ಸಂಕಲ್ಪ ನಮ್ಮದಾಗಲಿ” ಎಂದು  ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಆಶೀರ್ವಚನಗೈದರು.ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ವ್ಯಕ್ತಿ ವಿಕಾಸವಾದರೆ ಮಾತ್ರ ಗ್ರಾಮ ವಿಕಾಸವಾಗಬಹುದು. ಗ್ರಾಮವಿಕಾಸದಿಂದಲೇ ರಾಷ್ಟ್ರವಿಕಾಸವಾಗುವುದು. ಈ ನಿಟ್ಟಿನಲ್ಲಿ ಶಿಬಿರಗಳ ಆಯೋಜನೆ ಪೂರಕವಾಗಿದೆ” ಎಂದರು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇವರು ಸೌಹಾರ್ದ ಸಹಕಾರಿಗಳ ಸಿಬ್ಬಂದಿಯವರಿಗಾಗಿ ಆಯೋಜಿಸಿದ 22ನೇ ತಂಡದ ಹತ್ತು ದಿನಗಳ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರಾದ ಶ್ರೀ ಜಿ. ನಂಜನಗೌಡ ಅವರು ಮಾತನಾಡಿ “ಸ್ವಾಯತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣದ ವೃತ್ತಿಪರ ಪಾರದರ್ಶಕ ಹಾಗೂ ಉತ್ತರದಾಯಿತ್ವದ ಧ್ಯೇಯೋದ್ದೇಶದೊಂದಿಗೆ ಆರಂಭಿಸಿದ ಈ ಸೌಹಾರ್ದ ಸಹಕಾರಿಯು ಸಮಾಜದ ಜನರ ಕಟ್ಟೆಕಡೆಯ ವ್ಯಕ್ತಿಗೂ ಆರ್ಥಿಕ ಸಹಕಾರ ತಲಪಬೇಕೆನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸಿಬ್ಬಂದಿಗಳ ಕಾರ್ಯಕ್ಷಮತೆ, ಪ್ರಾಮಾಣಿಕತೆ, ದಿಟ್ಟ ನಿರ್ಧಾರವು ಸಹಕಾರಿಯ ಉಳಿವಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಒಂದು ದಿಶೆಯಲ್ಲಿ ಇಂತಹ ಶಿಬಿರಗಳಿಂದ ನಿಮಗೆ

ವಿಶ್ವವಿದ್ಯಾನಿಲಯವು ಪ್ರಾಮಾಣೀಕೃತ ಪ್ರಮಾಣಪತ್ರವು ಲಭಿಸಲಿದೆ” ಎಂದರು.ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ಮಾನ್ಯ ನಿರ್ದೆಶಕರಾದ ಶ್ರೀಮತಿ ಭಾರತಿ ಜಿ. ಭಟ್ ಇವರು ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ನಿರ್ದೇಶಕರಾದ ಶ್ರೀ ಮಂಜುನಾಥ, ಪುತ್ತೂರು ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀ ಎಸ್.ಆರ್. ಸತೀಶ್ಚಂದ್ರ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀ ಎ. ಸುರೇಶ್ ರೈ, ಮಾನ್ಯ ನಿವೃತ್ತ ಅಪರ ನಿಬಂಧಕರಾದ ಶ್ರೀ ಹೆಚ್.ಎಸ್. ನಾಗರಾಜ ಬೆಂಗಳೂರು ಅವರು ಉಪಸ್ಥಿತರಿದ್ದರು.ಸಂಯುಕ್ತ ಸಹಕಾರಿಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರಣಗೌಡ ಜಿ.ಪಾಟೀಲ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ವ್ಯವಸ್ಥಾಪಕರಾದ ಶ್ರೀ ಗುರುಪ್ರಸಾದ್ ಬಂಗೇರ  ಸ್ವಾಗತಿಸಿ, ತರಬೇತಿ ವ್ಯವಸ್ಥಾಪಕರಾದ ಶ್ರೀ ವಿ.ಜೆ. ಕಾರ್ಕೂನ್ ನಿರೂಪಿಸಿದರು.ಮೈಸೂರು ಪ್ರಾಂತಿಯ ವ್ಯವಸ್ಥಾಪಕರು, ತರಬೇತಿ ವ್ಯವಸ್ಥಾಪಕರು, ಕೇಂದ್ರ ಕಚೇರಿಯ ಅಧಿಕಾರಿಯವರು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು. 10 ದಿನಗಳ ವ್ಯಕ್ತಿತ್ವ ವಿಕಸನ ತರಬೇತಿಗೆ ಒಟ್ಟು 15 ಜಿಲ್ಲೆಗಳಿಂದ, 34 ಸೌಹಾರ್ದ ಸಹಕಾರಿಗಳಿಂದ 15 ಜನ ಮಹಿಳೆಯರು ಮತ್ತು 39 ಜನ ಪುರುಷರು ಸೇರಿ ಒಟ್ಟು 54 ಶಿಬಿರಾರ್ಥಿಗಳು ಭಾಗವಹಿಸಿರುವರು.
 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top