+91 8255-266211
info@shreeodiyoor.org

ಅಧ್ಯಾತ್ಮಿಕತೆ ದೇಶದ ಅಂತಃಸತ್ವವಾಗಿದ್ದು, ಧರ್ಮ ತಿರುಳಾಗಿದೆ

“ಅಧ್ಯಾತ್ಮಿಕತೆ ದೇಶದ ಅಂತಃಸತ್ವವಾಗಿದ್ದು, ಧರ್ಮ ತಿರುಳಾಗಿದೆ”
ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ತುಳುನಾಡ ಜಾತ್ರೆ
ಶ್ರೀ ಒಡಿಯೂರು ರಥೋತ್ಸವದ ಧರ್ಮಸಭೆಯಲ್ಲಿ
ಪೂಜ್ಯ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ
ಫೆ.19: “ಜ್ಞಾನ ಶಾಶ್ವತವಾಗಿ ಉಳಿಯುತ್ತದೆ. ಮಾನ ಹೋದರೆ ಮತ್ತೆ ಬರಲಾರದು. ಜ್ಞಾನ ಮತ್ತು ಮಾನಗಳ ಬಗ್ಗೆ ಎಚ್ಚರದಿಂದಿರಬೇಕು. ಪಂಚೇAದ್ರಿಯಗಳನ್ನು ನಿಯಂತ್ರಿಸಿಕೊಳ್ಳಬೇಕು. ನಮ್ಮ ಬದುಕಿನ ತೇರನ್ನು ನಾವೇ ಎಳೆಯಬೇಕಾಗಿದೆ. ಆತ್ಮಶಕ್ತಿಯೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ದಾನದಿಂದ ಸಂಪತ್ತಿನ ಮೌಲ್ಯ ವರ್ಧನೆಯಾಗುತ್ತದೆ. ಅಧ್ಯಾತ್ಮಿಕತೆ ದೇಶದ ಅಂತಃಸತ್ವವಾಗಿದ್ದು, ಧರ್ಮ ತಿರುಳಾಗಿದೆ. ದೇವಾತ್ಮಕ್ಕೆ ಪಾಪ-ಪುಣ್ಯಗಳ ಲೇಪವಿಲ್ಲ. ಹಾಗಾಗಿ ಜೀವ-ದೇವನನ್ನೇ ಸೇರಬೇಕು” ಎಂದು ಪೂಜ್ಯ ಸ್ವಾಮೀಜಿಯವರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದ ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವದ ಧರ್ಮಸಭೆಯಲ್ಲಿ ಅನುಗ್ರಹ ಸಂದೇಶ ನೀಡಿದರು.ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಬಾಹ್ಯ ಸುಖಭೋಗಗಳಿಗೆ ಕಡಿವಾಣ ಹಾಕಿ ಅಧ್ಯಾತ್ಮದ ಒಲವನ್ನು ಹೊಂದಬೇಕು. ನಿಸ್ವಾರ್ಥ ಸೇವೆ, ಸತ್ಕಾರ್ಯದಲ್ಲಿ ತೊಡಗಬೇಕು” ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ಶ್ರೀ ನಳಿನ್‌ಕುಮಾರ್ ಕಟೀಲು ಮಾತನಾಡಿ “ಪೂಜ್ಯ ಶ್ರೀಗಳ ಆಶೀರ್ವಾದದಿಂದ ನಾನು ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಶ್ರೀ ಸಂಸ್ಥಾನದಿಂದ ಸ್ವಸಹಾಯ ಸಂಘದ ಮೂಲಕ ಹಳ್ಳಿ ಹಳ್ಳಿಯಲ್ಲಿ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯ ನಡೆಯುತ್ತಿದೆ” ಎಂದರು.ಶ್ರೀ ಒಡಿಯೂರು ರಥೋತ್ಸವ ಸಮಿತಿ ಅಧ್ಯಕ್ಷ, ಬರೋಡಾದ ಉದ್ಯಮಿ ಶ್ರೀ ಶಶಿಧರ ಬಿ. ಶೆಟ್ಟಿಯವರು ಮಾತನಾಡಿ “ಒಳ್ಳೆಯ ಕಾರ್ಯಕ್ರಮದಲ್ಲಿ ನಾವಿಂದು ಒಟ್ಟಾಗಿದ್ದೇವೆ. ಎರಡು ಜಿಲ್ಲೆಯಲ್ಲಿ ಅತೀ ದೂರು ಸಂಚರಿಸುವ ರಥೋತ್ಸವ ಇದಾಗಿದೆ. ಸಮಾಜದ ಬಡಬಗ್ಗರನ್ನು ಮೇಲಕ್ಕೆತ್ತುವ ಕೆಲಸ ಸಂಸ್ಥಾನದಿಂದ ಆಗುತ್ತಿದೆ. ಧಾರ್ಮಿಕ ಕ್ಷೇತ್ರಗಳು ನಮ್ಮ ಬೆಳವಣಿಗೆಗಳ ಜೊತೆಗೆ ಸಮಾಜವನ್ನು ಬೆಳೆಸುವ ಕೆಲಸವಾಗಬೇಕು” ಎಂದರು.ವಿವೇಕಾನಂದ ವಿದ್ಯಾವರ್ಧಕ ಸಂಘ ನಿರ್ದೇಶಕ ಶ್ರೀ ಬಲರಾಮ ಆಚಾರ್ಯ ಜಿ. ಎಲ್. ಇವರು ಮಾತನಾಡಿ “ತುಳುನಾಡಿನ ಭಾವನಾತ್ಮಕ ಕಾರ್ಯ ಒಡಿಯೂರು ರಥೋತ್ಸವದ ಮೂಲಕ ಸಾಕಾರವಾಗಿದೆ. ತುಳುವಿನ ಉಳಿವಿಗೆ ಪೂಜ್ಯ ಶ್ರೀಗಳ ಕೊಡುಗೆ ಅಪಾರವಾದುದು. ಧರ್ಮಾಚರಣೆಯ ಜೊತೆಗೆ ಶ್ರೀಗಳ ಸಮಾಜ ಸೇವೆ ಅಭಿನಂದನೀಯ. ಧಾರ್ಮಿಕ ನಿರ್ದೇಶನ ನೀಡುವ ಇಂತಹ ವ್ಯಕ್ತಿತ್ವ ಅಪರೂಪ” ಎಂದರು.ಪುಣೆಯ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ, ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಮಹಾರಾಷ್ಟ್ರ ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀ ವಿರಾರ್ ಶಂಕರ ಬಿ. ಶೆಟ್ಟಿ, ಗಣಿ ಉದ್ಯಮಿ ಶ್ರೀ ರವೀಂದ್ರನಾಥ ಆಳ್ವ ಮಲಾರುಬೀಡು, ಮುಂಬಯಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಮೊಕ್ತೇಸರ ಪ್ರದೀಪ್ ಶೆಟ್ಟಿ ಕೊಳಕೆಬೈಲ್, ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಲ| ಎ. ಸುರೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕನ್ಯಾನ – ಕರೋಪಾಡಿ ಗ್ರಾಮದ ಅಯೋಧ್ಯಾ ಶ್ರೀರಾಮ ಜನ್ಮಭೂಮಿಯ ಕರಸೇವಕರನ್ನು ಗೌರವಿಸಲಾಯಿತು. ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿದವರಿಗೆ ಸ್ಮರಣಿಕೆ ನೀಡಿ ಪೂಜ್ಯ ಶ್ರೀಗಳವರು ಆಶೀರ್ವದಿಸಿದರು.ಕು| ನಿತ್ಯಶ್ರೀ ಎಸ್.ರೈ, ಕು| ನವ್ಯಶ್ರೀ ಎಸ್.ರೈ ಆಶಯಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಸ್ವಾಗತಿಸಿದರು. ಶ್ರೀ ಸದಾಶಿವ ಶೆಟ್ಟಿ ವಂದಿಸಿದರು. ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.ವೇ.ಮೂ. ಚಂದ್ರಶೇಖರ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಬೆಳಗ್ಗೆ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಮಹಾಸಂತರ್ಪಣೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ‘ಸುಂದರಕಾಂಡ’ ವಾಚನ- ಪ್ರವಚನ ನಡೆಯಿತು. ಸಾಯಂಕಾಲ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ, ಉರ್ವ ಚಿಲಿಂಬಿ ಆಶ್ರಿತ ಸಾಯಿಶಕ್ತಿ ಕಲಾ ಬಳಗ ಅರ್ಪಣೆ ಮಾಡುವ ಕದ್ರಿ ನವನೀತ ಶೆಟ್ಟಿ ರಚಿಸಿ, ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನದ ಅದ್ದೂರಿ ತುಳು ಪೌರಾಣಿಕ ನಾಟಕ ‘ಬೊಳ್ಳಿಮಲೆತ ಶಿವಶಕ್ತಿಲು’ ಪ್ರದರ್ಶನಗೊಂಡಿತು.
ರಾತ್ರಿ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಶ್ರೀಸಂಸ್ಥಾನದಿಂದ ಗ್ರಾಮ ದೇವಸ್ಥಾನ (ಮಿತ್ತನಡ್ಕ)ಕ್ಕೆ ತೆರಳಿ, ಕನ್ಯಾನ ಪೇಟೆ ಸವಾರಿಯಾಗಿ ಸದ್ಗುರು ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ಹಿಂದಿರುಗಿತು.ವಿಶೇಷ ಆಕರ್ಷಣೆ: ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಕನ್ಯಾನ ಸದ್ಗುರು ನಿತ್ಯಾನಂದ ಮಂದಿರದ ಬಳಿಯಿಂದ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಶ್ರೀದೇವಿ ಮಹಾತ್ಮ್ಯೆ’ ಯಕ್ಷಗಾನ ಬಯಲಾಟ ನಡೆಯಿತು. ಮಿತ್ತನಡ್ಕ ಮಲರಾಯಿ ದೈವಸ್ಥಾನದ ಬಳಿ ಹಿಂದೂ ಸೇವಾ ಸಮಿತಿ ಮಿತ್ತನಡ್ಕ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಒಂಟೆ, ಕುದುರೆ, ಚೆಂಡೆಮೇಳ, ಸಿಡಿಮದ್ದು ಪ್ರದರ್ಶನ, ಬೊಂಬೆಕುಣಿತ, ಆಕರ್ಷಕ ಟ್ಯಾಬ್ಲೊಗಳು ಒಡಿಯೂರು ಶ್ರೀ ಗುರುದೇವ ಐಟಿಐ ವಿದ್ಯಾರ್ಥಿಗಳ ಹುಲಿವೇಷ, ಶ್ರೀ ಮೂಕಾಂಬಿಕಾ ಕೃಪಾ ಮುಖ್ಯಪ್ರಾಣ ವ್ಯಾಯಾಮ ಶಾಲೆ ಬೆರಿಪದವು ಇವರ ತಾಲೀಮು ಪ್ರದರ್ಶನ ಸಹಸ್ರ ಸಂಖ್ಯೆಯಲ್ಲಿ ನೆರೆದ ಭಕ್ತರ ಕಣ್ಮನ ಸೆಳೆಯಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top