+91 8255-266211
info@shreeodiyoor.org

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯ

“ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯ”
 
ಶರದೃತು ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭದಲ್ಲಿ – ಒಡಿಯೂರು ಶ್ರೀ ಆಶೀರ್ವಚನ
ಅ.10: “ಮಾನವೀಯತೆಯ ಕೊಂಡಿ ಬಲವಾಗಿಸುವ ಕಾರ್ಯ ಸಂಸ್ಕಾರದಿಂದ ಸಾಧ್ಯ. ವ್ಯಕ್ತಿ ವ್ಯಕ್ತಿಯ ನಡುವೆ ಅಂತರವಿರದಂತೆ ಸಂಘಟಿತರಾಗಿರಲು ಮಾನವೀಯತೆ ಮೇಳೈಸಬೇಕು. ನಮ್ಮಲ್ಲಿ ಆತ್ಮೀಯ ಭಾವ ತುಂಬಿಕೊಳ್ಳಲು ಮನಸ್ಸಿನ ವಿಕಾಸ ಆಗಬೇಕು. ಮನಸ್ಸಿನಲ್ಲಿ ಏಕಾಗ್ರತೆ ಇದ್ದಾಗ ಆರೋಗ್ಯವು ಸ್ಥಿರವಾಗಿರುತ್ತದೆ. ಚಲಿಸುವ ದೇಹಕ್ಕೆ ಆರೋಗ್ಯ ಚೆನ್ನಾಗಿರಬೇಕಾದರೆ ಮನಸ್ಸಿಗೆ ದೃಢತೆ ಬೇಕು. ಸಂತೋಷ ಮತ್ತು ಆನಂದ ನಮ್ಮ ಎರಡು ಕಣ್ಣುಳಿದ್ದಂತೆ. ನೋಡುವುದು ಮತ್ತು ಕಾಣುವುದು ಎರಡು ಪದಗಳು ಬೇರೆ ಬೇರೆ ಅರ್ಥವನ್ನು ಕೊಡುತ್ತವೆ. ನೋಡುವುದು ಹೊರಗಣ್ಣಿನಿಂದ, ಕಾಣುವುದು ಅಂತರಂಗದಿಂದ. ಅಂತರಂಗದ ಕಣ್ಣು ಅರಳಿದರೆ ಆನಂದ. ಅಂತರಂಗದ ಕಣ್ಣು ಅರಳಲು ಅಧ್ಯಾತ್ಮಿಕತೆ ಅವಶ್ಯ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯ. ಬದುಕಿ ಬದುಕ ಬಿಡುವ ಕಾರ್ಯ ಸಂಸ್ಕಾರದಿಂದಾಗುವುದು. ಇದಕ್ಕೆ ಪೂರಕವಾಗಿ ಶಿಬಿರವನ್ನು ಆಯೋಜಿಸಲಾಗಿದೆ. ವ್ಯಕ್ತಿ ವಿಕಾಸವಾದಾಗಲೇ ದೇಶ ವಿಕಾಸವಾಗುವುದು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಜರಗಿದ ಶರದೃತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ನಮ್ಮ ಸದ್ಗುಣಗಳನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಸುಸಂಸ್ಕೃತ ಪ್ರಜೆಗಳಾಗಿ ಹೊರಹೊಮ್ಮಲು ಇಂತಹ ಶಿಬಿರಗಳು ಪೂರಕ. ಮುಂದೆ ಗುರಿ, ಹಿಂದೆ ಗುರು ಸಿಕ್ಕಾಗ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ” ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಗಿರಿ ಕಲ್ಲಡ್ಕ, ಶ್ರೀ ತಾರಾನಾಥ ಕೈರಂಗಳ, ಮೈತ್ರೇಯಿ ಗುರುಕುಲದ ಭಗಿನಿ ಪದ್ಮ ಎಸ್. ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್. ರೈ, ವಿದ್ಯಾರ್ಥಿ ಸಂಘದ ನಾಯಕಿ ಕು| ಕೃಪಾ ಮತ್ತು ವಿದ್ಯಾರ್ಥಿನಿ ಕು| ದಿವಿಜ್ಞಾ ಪೆರುವಾಯಿ ಉಪಸ್ಥಿತರಿದ್ದರು.ಮೂರು ದಿನಗಳ ಶಿಬಿರದಲ್ಲಿ ಯೋಗ ತರಬೇತಿಯನ್ನು ಮೂರ್ಕಜೆ ಮೈತ್ರೇಯಿ ಗುರುಕುಲದ ಭಗಿನಿಯರು, ಚಿತ್ರಕಲೆ- ಶ್ರೀ ಪ್ರಕಾಶ್ ಕುಂಬಳೆ, ರಂಗಕಲೆ – ಶ್ರೀ ಶಿವಗಿರಿ ಕಲ್ಲಡ್ಕ, ಕರಕುಶಲದ ತರಬೇತಿ ಶ್ರೀ ತಾರಾನಾಥ ಕೈರಂಗಳ, ಅಗ್ನಿ ಆಕಸ್ಮಿಕ ಬಗ್ಗೆ ಜಾಗರೂಕರಾಗಲು ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿಗಳು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶೃಂಗೇರಿಯಲ್ಲಿ ನಡೆದ ಗೀತ ಜ್ಞಾನಯಜ್ಞ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಕು| ಸಾನ್ವಿ ಸಿ.ಎಚ್. ಹಾಗೂ ಜಿಲ್ಲಾ ಮಟ್ಟದ ಕರಾಠೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ 5ನೇ ತರಗತಿಯ ವಿದ್ಯಾರ್ಥಿ ತೇಜಸ್ ಇವರನ್ನು ಪೂಜ್ಯ ಶ್ರೀಗಳವರು ಶಾಲು ಹಾಕಿ ಫಲಮಂತ್ರಾಕ್ಷತೆ ಇತ್ತು ಹರಸಿದರು. 10ನೇ ತರಗತಿಯ ಕು| ಸಾನಿಧ್ಯ ಸ್ವಾಗತಿಸಿ, 8ನೇ ತರಗತಿಯ ರಕ್ಷಿತ್ ಶೆಟ್ಟಿ ವಂದಿಸಿದರು. 9ನೇ ತರಗತಿಯ ಕು| ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದ ಬಳಿಕ ನಿರ್ಮಾಪಕ ಶ್ರೀ ದಯಾನಂದ ರೈ ಮತ್ತು ತಂಡ ಶಿಬಿರಾರ್ಥಿಗಳಿಗೆ ‘ಪೆನ್ಸಿಲ್ ಬಾಕ್ಸ್’ ಚಲನಚಿತ್ರವನ್ನು  ವೀಕ್ಷಿಸಲು ವ್ಯವಸ್ಥೆ ಮಾಡಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top