+91 8255-266211
info@shreeodiyoor.org

ರಾಕ್ಷಸೀ ಮನೋಭಾವ ದೂರವಾಗಿ ನಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಯಲಿ

“ರಾಕ್ಷಸೀ ಮನೋಭಾವ ದೂರವಾಗಿ ನಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಯಲಿ”

ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ಲಲಿತಾ ಪಂಚಮಿ ಮಹೋತ್ಸವದ ಧರ್ಮಸಭೆಯಲ್ಲಿ ಸಾಧಕರಿಗೆ ಕಲಾಸಿರಿ ಪ್ರಶಸ್ತಿ ಪ್ರಧಾನ ಮಾಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ನವರಾತ್ರಿಯ ಪರ್ವಕಾಲದ ಸಂಭ್ರಮದಲ್ಲಿ ನಾವಿದ್ದೇವೆ. ನಾವೆಲ್ಲರೂ ವಿಜಯಿಗಳಾಗಬೇಕು. ಭಾರತ, ಭಾರತೀಯತೆ ನಾಶವಾಗದೆ ಇರುವಂತದ್ದು. ನವರಾತ್ರಿ ಸಂದರ್ಭದಲ್ಲಿ ನಮ್ಮ ಅಂತರಂಗದ ರಾಕ್ಷಸೀ ಪ್ರವೃತ್ತಿಯನ್ನು ದೂರೀಕರಿಸಿಕೊಳ್ಳಬೇಕು. ಕಲಾವಿದರನ್ನು ಗೌರವಿಸುವ ಕೆಲಸ ನಿರಂತರವಾಗಿ ಆಗುತ್ತಿದೆ. ನಮ್ಮಲ್ಲಿ ಮಾನವೀಯ ಮೌಲ್ಯ ಬೆಳೆಸುವ ಕೆಲಸವಾಗಬೇಕು. ಮಾನವೀಯತೆಯ ಪಾಠ ಮನೆಯಿಂದಲೇ ಆರಂಭವಾಗಬೇಕು. ಸ್ಪರ್ಧಾತ್ಮಕ ಬದುಕು ಸುಲಭವಲ್ಲ. ಅಧ್ಯಾತ್ಮಿಕತೆಯಿಂದ ಬದುಕುವ ಪ್ರಯತ್ನ ಎಲ್ಲರಿಂದ ಆಗಬೇಕಿದೆ. ಬದುಕು ಒಂದು ಕಲೆಯಾಗಬೇಕು. ಜೀವನ ಒಂದು ನಾಟಕ. ಸೂತ್ರದಾರನನ್ನು ಮರೆತಾಗ ನಾವು ಸೋಲುತ್ತೇವೆ. ಭಗವಂತನ ಮರೆತಾಗ ಅಂತರಂಗ-ಬಹಿರಂಗ ಗಟ್ಟಿಯಾಗಲು ಸಾಧ್ಯವಿಲ್ಲ. ತಾಯಿ ಭಾಷೆಯಿಂದ ಬದುಕು ಕಟ್ಟುವ ಕೆಲಸವಾಗುತ್ತಿದೆ. ಕಲಾವಿದರಿಂದ ಕಲೆ ಉಳಿಯಲು ಸಾಧ್ಯ. ನಡೆ ನುಡಿ ಜೊತೆಯಾದಾಗ ಜೀವನ ಪಾವನವಾಗಲು ಸಾಧ್ಯ. ಭಾರತ ದೇಶದ ಮೌಲ್ಯಗಳು ಆಧ್ಯಾತ್ಮಿಕತೆಯಿಂದ ಹೆಚ್ಚಾಗಿದೆ. ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಕೆಲಸವಾಗಬೇಕು. ಸನಾತನ ಸಂಸ್ಕೃತಿ, ಧರ್ಮದ ಬಗ್ಗೆ ಅವಹೇಳನ ನಡೆಯುತ್ತಿದ್ದು, ಅದನ್ನು ಖಂಡಿಸುವ ಕೆಲಸವಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅ. 19ರಂದು ನಡೆದ ಶ್ರೀ ಲಲಿತಾ ಪಂಚಮಿ ಮಹೋತ್ಸವದ ಧರ್ಮಸಭೆಯಲ್ಲಿ ಸಾಧಕರಿಗೆ ಕಲಾಸಿರಿ ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀರವರು ಆಶೀರ್ವಚನ ನೀಡಿ “ಕ್ಷೇತ್ರದಲ್ಲಿ ನಡೆಯುವ ಪಂಚಪರ್ವಗಳಲ್ಲಿ ಶ್ರೀ ಲಲಿತ ಪಂಚಮಿ ಉತ್ಸವವು ಒಂದು. ಪೂಜ್ಯ ಶ್ರೀಗಳವರ ಅನುಗ್ರಹದಿಂದ ಕ್ಷೇತ್ರದಲ್ಲಿ ಸನ್ಮಾನ ಸ್ವೀಕರಿಸಿದ ವ್ಯಕ್ತಿಗಳು ಅತೀ ದೊಡ್ಡ ಸ್ಥಾನಕ್ಕೇರಿದ ಇತಿಹಾಸವಿದೆ. ಕಲೆ ಮತ್ತು ಕಲಾವಿದ ಎಂದರೆ ತಾಯಿ ಮಗುವಿನ ಸಂಬಂಧವದು. ಸಮಾಜದ ಅಶಾಂತಿ ದೂರವಾಗಲು ಶಕ್ತಿಯ ಉಪಾಸನೆಯ ಅಗತ್ಯವಿದೆ. ನಮ್ಮ ಆಚರಣೆ, ಪರಂಪರೆಯನ್ನು ಬೆಳೆಸುವ ಮೂಲಕ ಧರ್ಮದ ರಕ್ಷಣೆ ಸಾಧ್ಯ” ಎಂದರು.
ಯಕ್ಷಗಾನ ನಾಟ್ಯಾಚಾರ್ಯ ಸಬ್ಬಣಕೋಡಿ ಶ್ರೀ ರಾಮ ಭಟ್ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ “ಒಡಿಯೂರು ಶ್ರೀಗಳು ಜಗದ್ಗುರುಗಳೆನಿಸಿಕೊಂಡವರು. ಯೋಗ್ಯರನ್ನು ಆರಿಸಿ ಪ್ರಶಸ್ತಿ ನೀಡುತ್ತಿರುವ ಶ್ರೀಗಳ ಕೆಲಸ ತುಂಬಾ ಸಂತಸ ತಂದಿದೆ. ಶ್ರೀಗಳ ಮಂತ್ರಾಕ್ಷತೆಯ ಫಲವಾಗಿ ನಾನಿಂದು ಈ ಹಂತಕ್ಕೆ ತಲುಪಿದ್ದೇನೆ. ಪ್ರಶಸ್ತಿ ಸ್ವೀಕರಿಸಿದ ನಾವು ಸದಾ ಕ್ಷೇತ್ರಕ್ಕೆ ಆಭಾರಿಯಾಗಿದ್ದೇವೆ ಎಂದರು.
ಖ್ಯಾತ ರಂಗನಟ, ನಿರ್ದೇಶಕ ರಮೇಶ್ ಮಾಸ್ತರ್ (ರಮಾ)ಬಿ.ಸಿ.ರೋಡ್‌ರವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ “ನಮಗೆ ಈ ಪ್ರಶಸ್ತಿ ಲಭಿಸಿರುವುದು ನಮ್ಮ ಸೌಭಾಗ್ಯ. ಈ ಪ್ರಶಸ್ತಿಯನ್ನು ನಾನು ತುಳುನಾಡಿನ ಎಲ್ಲಾ ಕಲಾವಿದರಿಗೆ ಅರ್ಪಣೆ ಮಾಡುತ್ತೇನೆ. ಹಿರಿಯರ ಮೂಲಕ ನಮಗೆ ಬಂದ ಸೌಭಾಗ್ಯವಿದು. ನಮ್ಮ ಹೃದಯ ಉಕ್ಕಿ ಬರುತ್ತಿರುವ ಸನ್ನಿವೇಶವಿದು. ನಮ್ಮ ನಡೆ ಮತ್ತು ನುಡಿ ಉತ್ತಮವಾಗಿರಬೇಕು. ಇದೊಂದು ಪ್ರೋತ್ಸಾಹದಾಯಕವಾಗಿದೆ” ಎಂದರು.
ಮುಂಬೈಯ ಉದ್ಯಮಿ ವಾಮಯ್ಯ ಶೆಟ್ಟಿ ಚೆಂಬೂರು, ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಸ್ವೀಕರಿಸಿದ ಮೃದಂಗ ಮತ್ತು ತಬಲಾ ವಾದಕಿ ಶ್ರೀಮತಿ ಅನಿತಾ ಪ್ರಭು ಬಿ.ಸಿ.ರೋಡ್, ರಂಗ ನಟ ಹಾಗೂ ಉದ್ಯಾವರ ಮಾಡದ ಅಣ್ಣದೈವ ಪಾತ್ರಿ ಶ್ರೀ ಪುರುಷೋತ್ತಮ ಯಾನೆ ರಾಜ ಬೆಳ್ಚಪ್ಪಾಡ, ಛಾಯಾಗ್ರಾಹಕ ಶ್ರೀ ಟಿ. ಹರೀಶ್ ರಾವ್ ಬಂಟ್ವಾಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ರೇಣುಕಾ ಎಸ್. ರೈ ಪ್ರಾರ್ಥನಾಗೀತೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಶ್ರೀ ಯಶೋದರ ಸಾಲ್ಯಾನ್, ಶ್ರೀ ಜಯಂತ ಆಜೇರು, ಶ್ರೀಮತಿ ಅನಿತಾ, ಶ್ರೀ ಟಿ. ಸುಬ್ರಹ್ಮಣ್ಯ ಒಡಿಯೂರು, ಶ್ರೀಮತಿ ಲೀಲ ಪಾದೆಕಲ್ಲು ಸನ್ಮಾನ ಪತ್ರ ವಾಚಿಸಿದರು. ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿ, ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬೆಳಿಗ್ಗೆ ಗಂಟೆ 9.00ರಿಂದ ಗಣಪತಿ ಹವನ, ಶ್ರೀ ಚಂಡಿಕಾಯಾಗ ಆರಂಭಗೊಂಡಿತು. ಮಧ್ಯಾಹ್ನ ಶ್ರೀಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ ಬಳಿಕ ಮಹಾಸಂತರ್ಪಣೆ ನಡೆಯಿತು. ಗಂಟೆ 2.30ರಿಂದ ಸರಯೂ ಬಾಲ ಯಕ್ಷ ವೃಂದ ಕೋಡಿಕಲ್ ಇವರಿಂದ ವರ್ಕಾಡಿ ರವಿ ಅಲೆವೂರಯ ವಿರಚಿತ ಶ್ರೀ ಮಾತೇ ಭದ್ರಕಾಳಿ ಯಕ್ಷಗಾನ ಬಯಲಾಟ ನಡೆಯಿತು. ಸಾಯಂಕಾಲ ಸಾಮೂಹಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ರಂಗಪೂಜೆ, ಅಷ್ಟಾವಧಾನಸೇವೆ, ಶ್ರೀ ಭದ್ರಕಾಳಿಗೆ ವಿಶೇಷ ಪೂಜೆಯೊಂದಿಗೆ ಉತ್ಸವವು ಸಂಪನ್ನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top