+91 8255-266211
info@shreeodiyoor.org

ತುಳುನಾಡ ಜಾತ್ರೆ

ಶ್ರೀ ಸಂಸ್ಥಾನದ ಪ್ರತಿಷ್ಠಾ ಮುಹೂರ್ತವನ್ನು ಪ್ರತಿವರ್ಷ ವಾರ್ಷಿಕೋತ್ಸವಾಗಿ ಆಚರಿಸಲಾಗುತ್ತಿದ್ದು, 2001ರಿಂದ ಒಡಿಯೂರು ರಥೋತ್ಸವವಾಗಿದೆ. ಒಡಿಯೂರು ರಥೋತ್ಸವ 2014 ರಿಂದ ತುಳುನಾಡ ಜಾತ್ರೆಯಾಗಿ ಸಂಭ್ರಮದ ಪರ್ವ ವಾಗಿದೆ. ಇದೊಂದು ಕಣ್ಣಿಗೆ ಹಬ್ಬವಾಗಿ ಈ ನಾಡಿನ ಅಪೂರ್ವ ಉತ್ಸವವಾಗಿ ದಾಖಲಾಗಿದೆ. ಸುಮಾರು 12 ಕಿ.ಮೀ. ಕ್ರಮಿಸುವ ಶ್ರೀ ದತ್ತಗುರು, ಪ್ರಾಣದೇವರ ಒಡಿಯೂರು ರಥೋತ್ಸವ ಜನಮನವನ್ನು ಆಕರ್ಷಿಸುವ ಹಬ್ಬವಾಗಿದೆ. ನವರತ್ನಖಚಿತವಾದ ಶ್ರೀ ದತ್ತಗುರು ಸ್ವರ್ಣಪಾದುಕೆಗಳನ್ನು ಮತ್ತು ಅಭಯ ಹಸ್ತದ ಭವ್ಯವಾದ ಪ್ರಾಣದೇವರ ಉತ್ಸವಮೂರ್ತಿಯನ್ನು ವೇದಘೋಷ, ಪಂಚ ವಾದ್ಯಗಳ ನಿನಾದದೊಂದಿಗೆ ರಥದಲ್ಲಿ ರಿಸಲಾಗುತ್ತದೆ. ಪೂಜ್ಯ ಶ್ರೀಗಳು ವೈದಿಕರೊಂದಿಗೆ ರಥಾರೂಢರಾಗುತ್ತಿದ್ದಂತೆಯೇ ಶ್ರೀ ಸಂಸ್ಥಾನ ದಿಂದ ಆಕರ್ಷಕ ವರ್ಣರಂಜಿತ ಸಾಂಸ್ಕøತಿಕ ವೈಭವದೊಂದಿಗೆ ಹೊರಡುವ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥ ಮಿತ್ತನಡ್ಕ ಗ್ರಾಮ ದೈವಸ್ಥಾನಕ್ಕೆ ಹೋಗಿ ಅಲ್ಲಿಂದ ಕನ್ಯಾನ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ಸಂಪ್ರದಾಯದಂತೆ ಪೂಜೆಯ ಬಳಿಕ ಕನ್ಯಾನ ಪೇಟೆ ಸವಾರಿ ಮುಗಿಸಿ ಶ್ರೀ ಸಂಸ್ಥಾನಕ್ಕೆ ಹಿಂತಿರುಗುವುದು.

ಸಹಸ್ರ ಸಹಸ್ರ ಜನ ಭಜನೆ ಹಾಡುತ್ತಾ ನಾಮ ಸಂರ್ಕೀರ್ತನೆ ಮಾಡುತ್ತಾ ತೇರನ್ನು ಎಳೆಯುವುದು. ರಥದ ದಾರಿ ಮಧ್ಯೆ ಭಕ್ತ ಜನರು ಆರತಿ, ಹಣ್ಣುಕಾಯಿ ಒಪ್ಪಿಸಿ, ಭಾವಪರವಶರಾಗಿ ರಥೋತ್ಸವವನ್ನು ಕಣ್ತುಂಬ ಕಂಡು ಆನಂದಿಸುತ್ತಿರುವ ದೃಶ್ಯಗಳು ರೋಚಕವಾಗಿರುತ್ತದೆ. ಶಿಸ್ತು ಸಂಯಮದಿಂದ ಭಾಗವಹಿಸುವ ಭಜಕರ ಸಹಕಾರ ಸುದೀರ್ಘ ರಥೋತ್ಸವಕ್ಕೆ ಹೊಸ ಮೆರಗು ನೀಡುತ್ತದೆ.

“ಉತ್ಸವಗಳು ಬರಿಯ ಆಚರಣೆಗಳಾಗಿ ಸದ್ದು ಗದ್ದಲದಲ್ಲಿ ಮುಗಿದು ಹೋಗಬಾರದು. ಅವು ಆತ್ಮ ನಿರೀಕ್ಷಣೆಗೆ ಅವಕಾಶ ಮಾಡಿಕೊಡುವಂತಾದರೆ ಅದು ಸಾರ್ಥಕ. ಜೀವನೋತ್ಸವವನ್ನು ತುಂಬುವ ಉತ್ಸವಗಳು ಅಂತರಂಗದ ಶುದ್ಧಿಗೆ ಚೇತೋಹಾರಿಯಾಗಿರಬೇಕು. ಪರಸ್ಪರ ಸಹಕಾರ, ಸಾಮರಸ್ಯ, ನೋವು ನಲಿವುಗಳ ವಿನಿಮಯ ಮತ್ತು ಸಾಮೂಹಿಕ ಆರಾಧನಾ ಮನೋಭಾವವನ್ನು ಉದ್ಧೀಪನಗೊಳಿಸುತ್ತದೆ. ಒಕ್ಕೊರೊಲ ಪ್ರಾರ್ಥನೆಗೆ ವಿಶೇಷ ಶಕ್ತಿಯಿದೆ. ಆದರೆ ಭಗವಂತನಲ್ಲಿ ನಿರ್ವಂಚನೆಯಿಂದ ಪ್ರಾರ್ಥಿಸುವ ಭಕ್ತಿ ಶ್ರದ್ಧೆಯಿಂದ ನಿವೇದಿಸುವ ಶುದ್ಧಾಂತರಂಗ ನಮ್ಮದಾಗಬೇಕು” ಎಂಬುದು ಉತ್ಸವಗಳ ಬಗ್ಗೆ ಪೂಜ್ಯ ಶ್ರೀಗಳ ಸ್ಪಷ್ಟ ನಿಲುವು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top