ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಒಂದು ವಿಶಿಷ್ಟ ಸಾಂಸ್ಕೃತಿಕ ಕೇಂದ್ರವಾಗಿ ಜ್ಞಾನಸತ್ರದ ಪುಣ್ಯ ನೆಲೆಯಾಗಿ ಗುರುತತ್ವದ ಪ್ರಚಾರದ ದತ್ತಪೀಠವಾಗಿ, ಕಲೆ, ಸಾಹಿತ್ಯ ಸಂಸ್ಕೃತಿ , ಸಂಗೀತದ ಆಸರೆಯಾಗಿ, ತುಳು ಭಾಷಾಭಿಮಾನ ಬೆಳೆಸುವ ದೇಗುಲವಾಗಿ ಬೃಹದೆತ್ತರಕ್ಕೆ ವ್ಯಾಪಿಸಿದೆ. ಶ್ರೀ ಸಂಸ್ಥಾನದಲ್ಲಿ ಭಗವತ್ ಆರಾಧನೆಯಂತೆಯೇ ಕಲಾರಾಧನೆಗೂ ಪ್ರಾಮುಖ್ಯ ನೀಡಲಾಗಿದೆ.
ಇಲ್ಲಿ ನಿರ್ಮಾಣಗೊಂಡಿರುವ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಸಂಸ್ಥಾನದಲ್ಲಿ ನಡೆಯುವ ವಿಶೇಷ ಉತ್ಸವಗಳು, ಧಾರ್ಮಿಕ ಸಭೆ-ಸಮಾರಂಭಗಳು, ಕಲೆ-ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತದೆ. ಸತ್ಸಂಗ, ವಿಚಾರ ಗೋಷ್ಠಿಗಳು, ಯಕ್ಷಗಾನ, ಸಂಗೀತ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀ ಗುರುದೇವ ಜ್ಞಾನ ಮಂದಿರ ಹೆಚ್ಚು ಅನುಕೂಲಕರ ವಾಗಿದೆ. ಪ್ರತಿ ತಿಂಗಳ ಸಂಕ್ರಮಣ ದಂದು ಸಂಜೆ ‘ಪ್ರಜ್ಞಾ ದೀಪಿಕಾ’ ಎಂಬ ಸತ್ಸಂಗ ಕಾರ್ಯಕ್ರಮ ಇಲ್ಲಿ ಜರಗುವುದು.
ಕಲೆ ಎಂಬುದು ಕೇವಲ ಮನರಂಜನೆಗೆ ಸೀಮಿತವಾದುದಲ್ಲ. ಕಲೆಯಿಂದ ಬೌದ್ಧಿಕ ವಿಕಾಸವಾಗಬೇಕು. ತಿಳಿವಿನ ಪ್ರಕಾಶವಾಗಬೇಕು. ‘ಕಲೆ, ಕಲಾವಿದರನ್ನು ಗೌರವಿಸುವುದು ಸಾಂಸ್ಕೃತಿಕ ಚೇತನದ ಉಳಿವಿಗೆ ಮೊದಲ ಸೋಪಾನ’ ಎಂಬ ಪೂಜ್ಯ ಶ್ರೀಗಳ ಸಂಕಲ್ಪದಂತೆ ಶ್ರೀ ಸಂಸ್ಥಾನದಲ್ಲಿ ಕಲೆ, ಸಂಸ್ಕøತಿಯ ಪೋಷಣೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂಗೀತ,-ಸಾಹಿತ್ಯದ ಒಲವುಳ್ಳವರು. ನಾದೋಪಾಸನೆ ಮಾಡುವ ಪೂಜ್ಯಶ್ರೀಗಳ ಸಂಗೀತ ಪ್ರೇಮ ಅನುಪಮವಾದುದು.