+91 8255-266211
info@shreeodiyoor.org

ವಿಶ್ವ ಯೋಗ ದಿನಾಚರಣೆ

“ಭಾರತ ವಿಶ್ವಕ್ಕೆ ಕೊಟ್ಟ ಕೊಡುಗೆಯೇ ಯೋಗ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ ‘ವಿಶ್ವ ಯೋಗ ದಿನಾಚರಣೆ’ಯಲ್ಲಿ ಒಡಿಯೂರು ಶ್ರೀ ಆಶೀರ್ವಚನ
“ಯೋಗ ಬಾಳನ್ನು ಬೆಳಗಿಸುವ ತತ್ತ್ವ. ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಿಡುವ ಜೊತೆಗೆ ಚಂಚಲ ಚಿತ್ತವನ್ನು ಏಕಾಗ್ರತೆಗೆ ತರಲು ಯೋಗಾಭ್ಯಾಸ ಅವಶ್ಯ. ನಿರಂತರ ಯೋಗಾಭ್ಯಾಸದಿಂದ ರೋಗವೂ ದೂರಾಗಿ ಆರೋಗ್ಯವಂತರಾಗಬಹುದು. ಭಾರತ ದೇಶ ವಿಶ್ವಕ್ಕೆ ಕೊಟ್ಟ ಮಹತ್ತರವಾದ ಕೊಡುಗೆಯೇ ಯೋಗ. ಭಗವದ್ಗೀತೆಯು ಯೋಗದ ಮಹತ್ತ್ವವನ್ನು ತಿಳಿಸುತ್ತದೆ. ಅಧ್ಯಾತ್ಮ ಜಾಗೃತಿಗೆ ಯೋಗ ಪೂರಕ. ಅಷ್ಟಾಂಗಯೋಗದ ಮೂಲಕ ಅಂತಃಕರಣಶುದ್ಧಿ ಮತ್ತು ಆತ್ಮೋನ್ನತಿಯು ಸಾಧ್ಯವಾಗುತ್ತದೆ. ನಾವೆಲ್ಲರೂ ಯೋಗಿಗಳೇ ಆಗೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಆಯೋಜಿಸಿದ ವಿಶ್ವ ಯೋಗ ದಿನಾಚರಣೆಯನ್ನು ದೀಪೋಜ್ವಲನಗೈದು ಉದ್ಘಾಟಿಸಿ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
ಮೂರ್ಕಜೆ ಮೈತ್ರೇಯಿ ಗುರುಕುಲದ ಭಗಿನಿ ಕು| ಪೂರ್ಣಿಮಾ ಅವರು ಯೋಗದ ಬಗ್ಗೆ ಮಾಹಿತಿ ನೀಡಿದರು. ಭಗಿನಿಯರಾದ ಕು| ಪಾರ್ವತಿ ಮತ್ತು ಕು| ವನಜ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ. ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳೆಲ್ಲರೂ ಪಾಲ್ಗೊಂಡು ಹನುಮಾನ್ ಚಾಲೀಸಾ ಪಠಣ, ಯೋಗ ಪ್ರಾತ್ಯಕ್ಷಿಕೆ ಮಾಡಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶ್ರೀದೇವಿ ವಂದಿಸಿದರು. ಶಿಕ್ಷಕ ಶ್ರೀ ಶೇಖರ ಶೆಟ್ಟಿ ಬಾಯಾರು ಕಾರ್ಯಕ್ರಮ ನಿರೂಪಿಸಿದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top