+91 8255-266211
info@shreeodiyoor.org

ರಾಜಾಂಗಣ ಲೋಕಾರ್ಪಣೆಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ

“ಒಡಿಯೂರು ಶ್ರೀಗಳವರು ತಾನೂ ಬೆಳಗುವುದರ ಜೊತೆಗೆ ಅನ್ಯರನ್ನು ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ”
ರಾಜಾಂಗಣ ಲೋಕಾರ್ಪಣೆಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ
ದ.08: “ಸಾಧನೆ ನಮ್ಮ ಜೀವನದ ಆಯಸ್ಸಿನ ಗುಟ್ಟು. ಒಡಿಯೂರು ಶ್ರೀಗಳವರು ತಮ್ಮ ಸಾಧನೆಯ ಮೂಲಕ ಅಧ್ಯಾತ್ಮ ಸಂಪತ್ತನ್ನು ಸಂಪಾದಿಸಿದ್ದಾರೆ. ಇವರು ಪ್ರತಿಯೊಬ್ಬರಲ್ಲೂ ಭಗವಂತನನ್ನು ಕಾಣುತ್ತಾರೆ. ತಾನೂ ಬೆಳಗುವುದರ ಜೊತೆಗೆ ಅನ್ಯರನ್ನು ಬೆಳಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆಯೇ ನಾವು ಸಹ ಅಧ್ಯಾತ್ಮ ಸಂಪತ್ತನ್ನು ಗಳಿಸಲು ಪ್ರಯತ್ನಪಡಬೇಕು. ಅಂತರಂಗದಲ್ಲಿ ಬೆಳಕನ್ನು ಕಂಡುಕೊಳ್ಳಬೇಕು. ಪ್ರತಿಯೊಬ್ಬರ ಅಂತರಂಗ ಬೆಳಗುವುದನ್ನು ಅರ್ಥಾತ್ ಅವರ ಬೆಳವಣಿಗೆಯನ್ನು ಕಂಡು ಸಂತೋಷಪಡುವ ಸ್ವಭಾವ ಬೆಳೆದರೆ ಅದೊಂದು ಉಪಕಾರ. ಸಮಾಜದಲ್ಲಿ ಧರ್ಮ, ಶಿಸ್ತು, ಸಮಾನತೆ, ಸ್ನೇಹ ನೆಲೆಯಾಗಬೇಕು. ನೀವೆಲ್ಲರೂ ನಿಮ್ಮ ನಿಮ್ಮಲ್ಲಿರುವ ಚೈತನ್ಯವನ್ನು, ಶಕ್ತಿಯನ್ನು ಕಂಡುಕೊಳ್ಳಿ. ಆ ಮೂಲಕ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ” ಎಂದು ಪದ್ಮವಿಭೂಷಣ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಸವಿನೆನಪಿನಲ್ಲಿ ನಿರ್ಮಾಣಗೊಂಡ ‘ರಾಜಾಂಗಣ’ ಲೋಕಾರ್ಪಣೆಗೊಳಿಸಿ ಧರ್ಮ ಸಂದೇಶ ನೀಡಿದರು.

ಪೂಜ್ಯ ಶ್ರೀಗಳವರ ಕೈಬರಹದ ‘ಅವಧೂತೋಪನಿಷತ್’ ಕೃತಿಯನ್ನು ಬಿಡುಗಡೆಗೊಳಿಸಿದ ಡಾ. ಹೆಗ್ಗಡೆಯವರು ಪೂಜ್ಯ ಶ್ರೀಗಳವರ ತುಳು ಭಾಷೆಯ ಪ್ರೀತಿಯ ಬಗ್ಗೆ ಪ್ರಶಂಸಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಶಾಲು ಹೊದಿಸಿ ಗೌರವಿಸಿದರು. ಶ್ರೀ ಸಂಸ್ಥಾನದ ವತಿಯಿಂದ ಪೂಜ್ಯ ಶ್ರೀಗಳವರು ಡಾ. ಹೆಗ್ಗಡೆಯವರನ್ನು ಗೌರವಿಸಿದರು.
ಅನುಗ್ರಹ ಸಂದೇಶ ನೀಡಿದ ಪೂಜ್ಯ ಶ್ರೀಗಳವರು “ಎಲ್ಲರನ್ನು ತನ್ನಂತೆ ಕಾಣುವ ಮನಸ್ಸು ನಮ್ಮದಾಗಬೇಕು. ಆಗ ಅಲ್ಲಿ ರಾಗ, ದ್ವೇಷ, ಅಸೂಯೆಗೆ ಎಡೆ ಇರುವುದಿಲ್ಲ. ನಾವು ಕ್ರೀಯಶೀಲರಾಗುವ ಜೊತೆಗೆ ಬದುಕಿನಲ್ಲಿ ಒಳಿತನ್ನು ಸಂಪಾದನೆ ಮಾಡುವುದು ಅಗತ್ಯ. ಬದುಕಿಗೆ ಒಂದು ದಿಕ್ಸೂಚಿ ಎಂದರೆ ಅದು ಧರ್ಮಸ್ಥಳ. ಧರ್ಮಸೂತ್ರದಲ್ಲಿ ನಾವು ಬದುಕಬೇಕು. ಧರ್ಮವನ್ನು ಮರೆತ ವ್ಯಕ್ತಿಗೆ ಜೀವನವಿಲ್ಲ” ಎಂದರು.
ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ “ನಮ್ಮ ಅರಿವಿನ ಗುರುವನ್ನು ಎಚ್ಚರ ಮಾಡುವ ಕೆಲಸ ಒಡಿಯೂರಿನಿಂದ ನಿರಂತರವಾಗಿ ನಡೆಯುತ್ತಾ ಇದೆ. ತ್ಯಾಗ ಮತ್ತು ಸಮರ್ಪಣಾ ಭಾವದ ಸೇವೆಯನ್ನು ನೀಡುತ್ತಾ ಬರುತ್ತಿರುವ ಕ್ಷೇತ್ರ ಇದಾಗಿದೆ” ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರು ಮಾತನಾಡಿ “ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಕಾರ್ಯಕ್ರಮ ಸಮಾಜಮುಖಿಯಾಗಿ ನಡೆದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರೊರೆಸುವ ಕಾರ್ಯಕ್ರಮವಾಗಿ ಮೂಡಿಬಂದಿದೆ” ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಎಸ್. ಅಂಗಾರರವರು ಮಾತನಾಡಿ “ಧರ್ಮ ನೆಲೆಯಾಗಿರುವ ಕ್ಷೇತ್ರ ಒಡಿಯೂರು. ಇಲ್ಲಿ ನಡೆಯುವ ಕಾರ್ಯಕ್ರಮವನ್ನು ನಾವೆಲ್ಲ ಅರ್ಥೈಸಿಕೊಂಡರೆ ನಮ್ಮ ಬದುಕು ಹಸನಾಗುತ್ತದೆ. ನಿಜವಾದ ಭಕ್ತಿಯಿಂದ ನಮ್ಮ ಬದುಕು ಮುಕ್ತಿಹೊಂದಲು ಸಾಧ್ಯ” ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶಯಗೀತೆ ಹಾಡಿದರು. ಸಂಸದ ಶ್ರೀ ನಳಿನ್‍ಕುಮಾರ್ ಕಟೀಲು, ಶಾಸಕರುಗಳಾದ ಶ್ರೀ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಶ್ರೀ ಸಂಜೀವ ಮಠಂದೂರು, ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಕೋಶಾಧಿಕಾರಿ ಶ್ರೀ ಎ. ಸುರೇಶ್ ರೈ, ಸಹಕೋಶಾಧಿಕಾರಿ ಶ್ರೀ ಅಶೋಕ್‍ಕುಮಾರ್ ಬಿಜೈ, ಪುತ್ತೂರು ಸಮಿತಿಯ ಅಧ್ಯಕ್ಷ ಶ್ರೀ ಕೆ. ಸೀತಾರಾಮ ರೈ ಸವಣೂರು, ಮುಂಬೈ ಸಮಿತಿಯ ಅಧ್ಯಕ್ಷ ಶ್ರೀ ವಾಮಯ್ಯ ಬಿ. ಶೆಟ್ಟಿ, ಪುಣೆ ಸಮಿತಿಯ ಅಧ್ಯಕ್ಷ ಶ್ರೀ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು, ಮಂಜೇಶ್ವರ ತಾಲೂಕು ಸಮಿತಿಯ ಅಧ್ಯಕ್ಷ ಶ್ರೀ ಶಶಿಧರ ಶೆಟ್ಟಿ ಜಮ್ಮದಮನೆ, ಮಂಗಳೂರು ವಲಯ ಸಮಿತಿಯ ಅಧ್ಯಕ್ಷ ಶ್ರೀ ಪುಷ್ಪರಾಜ್ ಜೈನ್, ಕಾಸರಗೋಡು ತಾಲೂಕು ಸಮಿತಿಯ ಅಧ್ಯಕ್ಷ ಶ್ರೀ ಕೆ.ಎನ್. ವೆಂಕಟರಮಣ ಹೊಳ್ಳ, ಸುಳ್ಯ ಸಮಿತಿಯ ಅಧ್ಯಕ್ಷ ಶ್ರೀ ವಿಶ್ವನಾಥ ರೈ ಕಳಂಜ, ತೊಕ್ಕೊಟ್ಟು ಸಮಿತಿಯ ಅಧ್ಯಕ್ಷ ಶ್ರೀ ಪ್ರಸಾದ್ ರೈ ಕಳ್ಳಿಮ್ಮಾರ್, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಮುಂಬೈನ ಅಧ್ಯಕ್ಷೆ ಶ್ರೀಮತಿ ರೇವತಿ ವಿ.ಶೆಟ್ಟಿ, ಮುಂಬೈನ ಉದ್ಯಮಿ ಶ್ರೀ ವಿವೇಕ್ ಶೆಟ್ಟಿ ನಗ್ರಿಗುತ್ತು, ಮಂಗಳೂರಿನ ಉದ್ಯಮಿ ಶ್ರೀ ಲೋಕನಾಥ ಶೆಟ್ಟಿ ತಾಳಿಪ್ಪಾಡಿಗುತ್ತು ಉಪಸ್ಥಿತರಿದ್ದರು.
ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಸ್ವಾಗತಿಸಿದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯ ಬಳಗದವರು ವೈದಿಕ ಪ್ರಾರ್ಥನೆಗೈದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಮತ್ತು ಕು| ನಿತ್ಯಶ್ರೀ ಎಸ್.ರೈ ಪ್ರಾರ್ಥನಾಗೀತೆ ಹಾಡಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರೀ ಯಶವಂತ್ ವಿಟ್ಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top