+91 8255-266211
info@shreeodiyoor.org

“ಭಗವಂತನ ಕಲ್ಯಾಣಗುಣಗಳನ್ನು ಮೈಗೂಡಿಸಿಕೊಂಡಾಗ ಆಚರಣೆಗಳು ಅರ್ಥಪೂರ್ಣ”: ಒಡಿಯೂರು ಶ್ರೀ ಆಶೀರ್ವಚನ

“ಭಗವಂತನ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅಲೌಕಿಕ ಬದುಕು ಉನ್ನತಿಯನ್ನು ಸಾಧಿಸುತ್ತದೆ. ಲೌಕಿಕ ಬಂಧನದಿಂದ ಬಿಡುಗಡೆಗೊಂಡರೆ ಅದುವೇ ಮೋಕ್ಷ. ಬದುಕು ಸತ್ವಪೂರ್ಣವಾಗಿರಬೇಕು. ಧರ್ಮಯುಕ್ತವಾಗಿರಬೇಕು. ಪ್ರಪಂಚವೇ ನಮಗೆ ಪಾಠಶಾಲೆ. ಶ್ರೀ ಗುರುಚರಿತ್ರೆ ಅಮೃತವನ್ನು ಸವಿಯುವಂತೆ ಮಾಡುತ್ತದೆ. ಗುರುದತ್ತಾತ್ರೇಯರ ತತ್ತ್ವಗಳನ್ನು ನಮ್ಮೊಳಗೆ ಅನುಷ್ಠಾನಿಸಬೇಕು. ಆಗ ಭಗವಂತನ ಪ್ರೀತಿಗೆ ಪಾತ್ರರಾಗಲು ಸಾಧ್ಯ. ಹೃದಯದಲ್ಲಿ ದೃಢತೆ ಇದ್ದಾಗ ಕಾರ್ಯ ಸಾಧನೆಯಾಗುತ್ತದೆ. ಭಗವಂತನ ಕಲ್ಯಾಣಗುಣಗಳನ್ನು ಮೈಗೂಡಿಸಿಕೊಂಡಾಗ ಆಚರಣೆಗಳು ಅರ್ಥಪೂರ್ಣವಾಗುತ್ತದೆ. ತನ್ನನ್ನು ತಾನು ಅರಿತುಕೊಂಡಾಗ ಜಗತ್ತನ್ನೇ ಗೆಲ್ಲಬಹುದು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿಯ ಧರ್ಮಸಭೆಯಲ್ಲಿ ಶ್ರೀ ಸಂಸ್ಥಾನದ ಉತ್ಸವಗಳ ವಿವರಗಳನ್ನೊಳಗೊಂಡ 2020ರ ದಿನದರ್ಶಿಕೆ (ಕ್ಯಾಲೆಂಡರ್) ಅನವಾರಣಗೊಳಿಸಿ ಸಂದೇಶ ನೀಡಿದರು.

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನಗೈದು “ಶ್ರದ್ಧಾಕೇಂದ್ರಗಳು ಮನುಷ್ಯನ ತಪ್ಪನ್ನು ಸರಿಪಡಿಸುವ ಕಾರ್ಯ ಮಾಡುತ್ತದೆ. ಸ್ವಾರ್ಥ ಬಿಟ್ಟು ಸೇವೆಯಲ್ಲಿ ತೊಡಗಿಸಿಕೊಂಡಾಗ ಸಾರ್ಥಕತೆ ಲಭಿಸುತ್ತದೆ. ದೇವರ ಪ್ರಸಾದದ ಶಕ್ತಿ ನಾವು ಬಳಸವು ರೀತಿಯಲ್ಲಿದೆ” ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಗುರುತತ್ತ್ವದ ಚಿಂತನೆಯಲ್ಲಿದ್ದಾಗ ಮನಸ್ಸು ಅಡ್ಡದಾರಿಯತ್ತ ಸಾಗದು. ಸಾಮೂಹಿಕ ಪ್ರಾರ್ಥನೆ ಇರುವಲ್ಲಿ ಧನಾತ್ಮಕ ಶಕ್ತಿ ಸಂಚಯನವಾಗುತ್ತದೆ. ಸದ್ವಿಚಾರ-ಸತ್ಸಂಗಗಳೊಂದಿಗೆ ಬದುಕು ನಡೆಸುವ ಕಾರ್ಯವಾಗಬೇಕು” ಎಂದರು.

ನವಿಮುಂಬೈನ ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ಶ್ರೀ ಗುರುಪ್ರಸಾದ್ ಭಟ್ ಅವರು ಮಾತನಾಡಿ “ಪೂಜ್ಯ ಶ್ರೀಗಳವರ ಮಾರ್ಗದರ್ಶನದ ಮೂಲಕ ನಾವೆಲ್ಲ ಒಂದಾಗಬೇಕು. ಧರ್ಮಯುಕ್ತವಾಗಿ, ಸಾತ್ವಿಕಭಾವದಿಂದ ಸಂಪಾದಿಸಿದ ಸಂಪತ್ತಿನಿಂದ ನೆಮ್ಮದಿ ಸಾಧ್ಯ” ಎಂದರು. ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.

ವೇದಿಕೆಯಲ್ಲಿ ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಶ್ರೀ ದಾಮೋದರ ಎಸ್. ಶೆಟ್ಟಿ, ನವಿಮುಂಬೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಅಶೋಕ್‍ಕುಮಾರ್ ಎ. ಬಿಜೈ, ಮುಂಬೈ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈ ಉಪಸ್ಥಿತರಿದ್ದರು.

ಶ್ರೀ ದತ್ತ ಜಯಂತ್ಯುತ್ಸವದ ಯಶಸ್ಸಿಗೆ ಪ್ರಾಯೋಜಕರಾಗಿ ಸಹಕರಿಸಿದ ಬಂಧುಗಳನ್ನು ಪೂಜ್ಯ ಶ್ರೀಗಳವರು ಶಾಲು ಹೊದಿಸಿ, ಫಲಮಂತ್ರಾಕ್ಷತೆಯಿತ್ತು ಹರಸಿದರು.

ಒಡಿಯೂರು ಶ್ರಿ ಗುರುದೇವ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಪ್ರಾರ್ಥನಾಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್ ಸ್ವಾಗತಿಸಿ, ಶ್ರೀ ಸಂತೋಷ್ ಭಂಡಾರಿ ವಂದಿಸಿ, ಹಿರಿಯ ಪತ್ರಕರ್ತ ಶ್ರೀ ಯಶವಂತ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನ ವೇದ ಪಾರಾಯಣ- ಶ್ರೀ ಗುರುಚರಿತ್ರೆ ಪಾರಾಯಣ ಸಮಾಪ್ತಿಯಾಯಿತು. ಬಳಿಕ ಶ್ರೀ ದತ್ತ ಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಹಾಪೂಜೆ, ದತ್ತ ಸಂಪ್ರದಾಯದಂತೆ ಪೂಜ್ಯ ಶ್ರೀಗಳವರ ಮಧುಕರೀ; ಮಂತ್ರಾಕ್ಷತೆ ಜರಗಿತು. ರಾತ್ರಿ ರಂಗಪೂಜೆ, ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ಸಂಪನ್ನಗೊಂಡಿತು. ರಾತ್ರಿ ಪೆರ್ಡೂರು ಮೇಳದವರಿಂದ ‘ಕಾರ್ತವೀರ್ಯ-ಚಂದ್ರಹಾಸ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top