+91 8255-266211
info@shreeodiyoor.org

ನೆರುಲ್ ಶ್ರೀ ಶನಿಮಂದಿರದಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮುಂಬೈ ಸಮಿತಿಯ ಸರಣಿ ಕಾರ್ಯಕ್ರಮದ ಸಮಾರೋಪ


“ಮನುಷ್ಯ ಜೀವನದ ಸಾರ್ಥಕ್ಯದಲ್ಲಿ ಗುರುಗಳು ದೀಪವಿದ್ದಂತೆ” – ವಿದ್ವಾನ್ ಕೈರೆಬೆಟ್ಟು ವಿಶ್ವನಾಥ ಭಟ್ ಆಶಯ

ನೆರುಲ್, ಆ. 5: “ಗುರುಗಳು ನಮಗೆ ಭಗವಂತನನ್ನು ಕಾಣುವುದಕ್ಕೆ ಒಂದು ನಿಮಿತ್ತ ಮಾತ್ರ. ಹೇಗೆ ಕತ್ತಲೆ ಇದ್ದಾಗ ಒಂದು ದೀಪದ ಬೆಳಕಿನಲ್ಲಿ ನಾವು ವಸ್ತುಗಳನ್ನೆಲ್ಲಾ ನೋಡುತ್ತೇವೆಯೋ ಅಂತೆಯೇ ಈ ಪ್ರಪಂಚ ಎನ್ನುವ ವಸ್ತುಗಳನ್ನು, ಈ ಜೀವನದ ರಹಸ್ಯಗಳನ್ನು ನಾವು ನೋಡುವರೇ ಅಲ್ಲಿ ಗುರುಗಳು ದೀಪವಿದ್ದಂತೆ. ಆ ದೀಪವೇ ಇಲ್ಲದಿದ್ದರೆ ದೇವರನ್ನು ನಾವು ಕಾಣುವುದಕ್ಕೆ ಕಷ್ಟ. ಮನುಷ್ಯನ ಜೀವನ ಸಾರ್ಥಕ್ಯ ಪಡೆಯುವಲ್ಲಿ ಗುರುಗಳ ಸ್ಥಾನ ಬಹಳ ದೊಡ್ಡದು. ಈ ಕೊರೊನಾ ಸಂದರ್ಭದಲ್ಲೂ ನೀವೆಲ್ಲಾ ಸೇರಿ ಒಡಿಯೂರು ಶ್ರೀಗಳವರ ಮೇಲಿನ ಭಕ್ತಿ, ಪ್ರೀತಿಯಿಂದಾಗಿ ಯಶಸ್ವಿಯಾಗಿ 60 ಕಾರ್ಯಕ್ರಮಗಳನ್ನು ಮಾಡಿರುವುದು ಖಂಡಿತವಾಗಿಯೂ ಭಗವಂತನ ಅನುಗ್ರಹದ ಜೊತೆಗೆ ಆ ಗುರುಗಳ ತಪಸ್ಸಿನ, ಪ್ರಾಣಶಕ್ತಿಯ ಆರಾಧನೆಯ ದಿವ್ಯಶಕ್ತಿಯೂ ಇದೆ ಎಂಬುದೇ ನಿಜವಾದ ದ್ಯೋತಕವಾಗಿದೆ. ಗುರುಭಕ್ತರಿಂದ ಅರ್ಥಪೂರ್ಣ ಕಾರ್ಯಕ್ರಮ ಗಳೊಂದಿಗೆ ಜನ್ಮ ಷಷ್ಠ್ಯಬ್ದ ಆಚರಣೆಯಲ್ಲಿ ನೀವೆಲ್ಲಾ ಹರಿಕಥೆಗೂ ಮಾನ್ಯತೆ ಕೊಟ್ಟು ಅದರ ಮೇಲೆ ಗೌರವ, ಪ್ರೀತಿ, ಆಸಕ್ತಿ ತೋರಿಸಿದ್ದೀರಿ. ಇಂತಹ ಪ್ರೋತ್ಸಾಹ ಮುಂದೆಯೂ ಸಿಗುತ್ತಿರಲಿ. ಗುರುಗಳ ಆಶೀರ್ವಾದ ನಿಮಗೆಲ್ಲ ದೊರೆಯಲಿ” ಎಂದು ವಿದ್ವಾನ್ ಕೈರೆಬೆಟ್ಟು ವಿಶ್ವನಾಥ ಭಟ್ ಅವರು ನೆರುಲ್ ಶನಿಮಂದಿರದಲ್ಲಿ ಜರಗಿದ ಪೂಜ್ಯ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ಮುಂಬೈ ಸಮಿತಿಯು ಆಯೋಜಿಸಿದ್ದ 60 ಸರಣಿ ಕಾರ್ಯಕ್ರಮಗಳ ಸಮಾರೋಪದಲ್ಲಿ ಮಾತನಾಡಿದರು.

ನೆರುಲ್ ಶ್ರೀ ಶನಿ ಮಂದಿರದ ಧರ್ಮದರ್ಶಿ ಶ್ರೀ ರಮೇಶ್ ಎಂ. ಪೂಜಾರಿ ಮಾತನಾಡಿ “ಪ್ರಸ್ತುತ ಕೊರೋನಾ ಮಹಾಮಾರಿಯ ಭಯದ ವಾತಾವರಣವಿದ್ದರೂ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ನಿಮಿತ್ತ ಭಜನೆಯೊಂದಿಗೆ ವಿವಿಧ ಕಾರ್ಯಕ್ರಮಗಳು ನವಿಮುಂಬೈ ಪರಿಸರದಲ್ಲಿ ಉತ್ತಮ ರೀತಿಯಲ್ಲಿ ನಡೆದಿದೆ. ಜೀವನದಲ್ಲಿ ಭಗವಂತನನ್ನು ಒಲಿಸಲು ಭಜನೆ ಒಂದು ಸಾಧನವಾಗಿದೆ. ನಮ್ಮ ಸಮಿತಿಯು ಚಿಕ್ಕ ಕೋಣೆಯಲ್ಲಿ ಶನಿದೇವರ ಭಾವಚಿತ್ರವನ್ನಿಟ್ಟು ಭಜನೆ ಮಾಡುತ್ತಾ ಇಂದು ಭವ್ಯ ದೇವಸ್ಥಾನವಾಗಿದೆ. ಭಜನೆಗೆ ಅಷ್ಟೊಂದು ಅಗಾಧವಾದ ಶಕ್ತಿಯಿದೆ” ಎಂದರು.

“ದೈವ ದೇವರು, ಗುರು-ಹಿರಿಯರು ಸಂಸಾರ ರಥದ ಚಕ್ರವಿದ್ದಂತೆ ಸಂಸಾರವೆಂಬುದು ಉತ್ತಮ ರೀತಿಯಲ್ಲಿ ಮುಂದುವರಿಯಲು ಈ ನಾಲ್ಕು ಚಕ್ರಗಳ ಅಗತ್ಯವಿದೆ. ದೈವ-ದೇವರ ಅನುಗ್ರಹ, ಗುರು-ಹಿರಿಯರ ಆಶೀರ್ವಾದವಿದ್ದಲ್ಲಿ ನಮ್ಮ ಜೀವನಚಕ್ರ ಸುಗಮವಾಗಿ ಸಾಗಲು ಸಾಧ್ಯ. ಅಜ್ಞಾನವೆಂಬ ಕತ್ತಲೆಯನ್ನು ದೂರೀಕರಿಸಿ ಸುಜ್ಞಾನವೆಂಬ ದೀಪವನ್ನು ಬೆಳಗಿಸಿ ಕೊಡುವವರೇ ಗುರುಗಳು. ಜೀವನದ ಗುರಿ ಮುಟ್ಟಲು ಗುರುಗಳ ಆಶೀರ್ವಾದ ಬೇಕು. ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಬಹಳ ಭಕ್ತಿಪೂರ್ವಕ ಆಚರಿಸಿ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಿದ್ದೀರಿ. ಅವರ ಆಶೀರ್ವಾದ ಸದಾ ಇದ್ದುದರಿಂದಲೇ ಯಶಸ್ವಿಯಾಗಿ ನಡೆದಿದೆ” ಎಂದು ವೇ|ಮೂ| ದಿನೇಶ್ ಉಪರ್ಣರವರು ಕಾರ್ಯಕ್ರಮವನ್ನು ಪ್ರಶಂಸಿದರು.

ಶ್ರೀ ಶನಿ ಮಂದಿರದ ಕಾರ್ಯಾಧ್ಯಕ್ಷ, ಮಾಜಿ ನಗರ ಸೇವಕ ಶ್ರೀ ಸಂತೋಷ್ ಶೆಟ್ಟಿಯವರು ಅಧ್ಯಕ್ಷೀಯ ಭಾಷಣ ಮಾಡಿ “ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಮ್ಮ ನಾಡಿನ ಕಲೆ, ಸಂಸ್ಕøತಿಯನ್ನು ಪರಿಚಯಿಸುವ, ಅದನ್ನು ಉಳಿಸಿ, ಬೆಳೆಸುವ ಮಹತ್ತರವಾದ ಕಾರ್ಯಕ್ರಮಗಳು ನಿರಂತರ ನಡೆಯುತ್ತಾ ಬಂದಿದೆ. ನಮ್ಮ ಯಶಸ್ವಿ ಕಾರ್ಯಕ್ರಮಕ್ಕೆ ಭಕ್ತರ ಸಹಕಾರ ಕೂಡಾ ಒದಗುತ್ತಿದೆ. ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಿನಿಂದ ಬಾಳಿ ಸಮಾಜಪರ, ಧರ್ಮಕಾರ್ಯ, ಸತ್ಕಾರ್ಯಗಳನ್ನು ಮಾಡೋಣ. ಇಂತಹ ಕಾರ್ಯಗಳಿಗೆ ಭಗವಂತನ, ಗುರುಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ” ಎಂದರು.

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಧರ್ಮದರ್ಶಿ ಶ್ರಿ ಅಣ್ಣಿ ಸಿ.ಶೆಟ್ಟಿ ಮಾತನಾಡಿ “ಛಲವಿದ್ದಲ್ಲಿ ಫಲ ಇದ್ದೇ ಇದೆ. ದಾಮೋದರ ಶೆಟ್ಟಿ ಮತ್ತು ವಿ.ಕೆ. ಸುವರ್ಣ ಬಳಗದವರ ಶ್ರಮ ಫಲ ನೀಡಿದೆ. ಕೊರೋನಾ ಸಂಕಷ್ಟಕಾಲದಲ್ಲಿ ಅಲ್ಪಾವಧಿಯಲ್ಲಿಯೇ ಅರುವತ್ತು ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸುಲಭದ ಕೆಲಸವಲ್ಲ. ಆದರೆ ಆಯೋಜಕರಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಛಲವಿತ್ತು. ಪ್ರಸ್ತುತ ಮನುಷ್ಯನ ಆಡಂಬರದ ಜೀವನದಿಂದ ಸಂಸ್ಕøತಿ-ಸಂಸ್ಕಾರ ಕ್ಷೀಣಿಸುತ್ತಿರುವ ಇಂತಹ ಕಾಲಘಟ್ಟದಲ್ಲಿ ಸಂಸ್ಕøತಿ-ಸಂಸ್ಕಾರದ ಅರಿವು ಮೂಡಿಸುವ, ಜ್ಞಾನದ ಬೆಳಕನ್ನು ಚೆಲ್ಲುವಂತಹ ಒಳ್ಳೆಯ ಕಾರ್ಯಕ್ರಮಗಳು ಒಡಿಯೂರು ಶ್ರೀಗಳ ಜನ್ಮಷಷ್ಠ್ಯಬ್ದ ಸಂಭ್ರಮಾಚರಣೆಯಲ್ಲಿ ಜರಗಿದೆ” ಎಂದರು.

ನೆರುಲ್ ಶ್ರೀಗಣಪತಿ, ಅಯ್ಯಪ್ಪ, ದುರ್ಗಾದೇವಿ ಮಂದಿರದ ಅಧ್ಯಕ್ಷ, ಮಾಜಿ ನಗರ ಸೇವಕ ಶ್ರೀ ಸುರೇಶ್ ಜಿ. ಶೆಟ್ಟಿ ಮಾತನಾಡಿ “ಕಳೆದ ಹಲವಾರು ವರ್ಷಗಳಿಂದ ನನ್ನ ಒಡನಾಡಿಯಾಗಿರುವ ದಾಮೋದರ ಶೆಟ್ಟಿ ಮತ್ತು ವಿ.ಕೆ. ಸುವರ್ಣರ ಸಮಾಜಪರ ಕಾರ್ಯವೈಖರಿಯನ್ನು ನಾನು ಅರಿತಿದ್ದೇನೆ. ಈ ಲಾಕ್‍ಡೌನ್‍ನಂತಹ ಸಂದರ್ಭದಲ್ಲೂ ಎಲ್ಲಾ ಗುರುಭಕ್ತರನ್ನು ಒಟ್ಟು ಸೇರಿಸಿ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದವರೆಲ್ಲರೂ ಅಭಿನಂದನಾರ್ಹರು” ಎಂದರು.

ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಶ್ರೀ ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ “ಒಗ್ಗಟ್ಟು ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯ. ಆ ಒಗ್ಗಟ್ಟನ್ನು ಕಾಪಾಡಿಕೊಂಡು ಸಮಾಜಪರ ಅಲ್ಲದೆ ನಮ್ಮ ಸಂಸ್ಕøತಿ, ಕಲೆಯನ್ನು ಮತ್ತಷ್ಟು ಬೆಳೆಸುವ ಕಾರ್ಯ ನಿಮ್ಮಿಂದಾಗಲಿ” ಎಂದರು.

ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಶ್ರೀ ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ “ಒಗ್ಗಟ್ಟು ಇದ್ದಾಗ ಮಾತ್ರ ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯ. ಆ ಒಗ್ಗಟ್ಟನ್ನು ಕಾಪಾಡಿಕೊಂಡು ಸಮಾಜಪರ ಅಲ್ಲದೆ ನಮ್ಮ ಸಂಸ್ಕøತಿ, ಕಲೆಯನ್ನು ಮತ್ತಷ್ಟು ಬೆಳೆಸುವ ಕಾರ್ಯ ನಿಮ್ಮಿಂದಾಗಲಿ” ಎಂದರು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಾಹಾರಾಷ್ಟ್ರ ಘಟಕದ ಅಧ್ಯಕ್ಷ ನ್ಯಾಯವಾದಿ ಶ್ರೀ ಕೃಷ್ಣ ಎಲ್. ಶೆಟ್ಟಿ ಮಾತನಾಡಿ “ಅಗಾಧವಾದ ಶಕ್ತಿಯನ್ನು ಹೊಂದಿರುವ ಪೂಜ್ಯ ಶ್ರೀಗಳವರ ಮಹಿಮೆ ಅಪಾರವಾದುದು. ನನ್ನಂತಹ ಅನೇಕ ಭಕ್ತರಿಗೆ  ಅದರ ಅನುಭವವಾಗಿದೆ” ಎಂದರು. ಬಳಗ ಮಾಜಿ ಅಧ್ಯಕ್ಷ ನ್ಯಾಯವಾದಿ ಶ್ರೀ ಪ್ರಕಾಶ್ ಎಲ್. ಶೆಟ್ಟಿ ಮಾತನಾಡಿ “ಎರಡು ದಶಕಗಳ ಹಿಂದೆ ಒಳ್ಳೆಯ ಧ್ಯೇಯೋದ್ದೇಶದಿಂದ ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ಸ್ಥಾಪನೆಯಾಗಿದೆ. ಅಂದಿನಿಂದ ಇಂದಿನವರೆಗೆ ಪೂಜ್ಯ ಶ್ರೀಗಳವರ ಆಶೀರ್ವಾದದಿಂದ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ, ಜ್ಞಾನವನ್ನು ಹಂಚುವ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಮುಂದೆಯೂ ಬಳಗವು ಹಮ್ಮಿಕೊಳ್ಳವ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಕಾರವಿರಲಿ” ಎಂದರು.

ಕಾರ್ಯಕ್ರಮ ಸಂಯೋಜಕರಲ್ಲಿ ಓರ್ವರಾದ ಶ್ರೀ ವಿ.ಕೆ. ಸುವರ್ಣ ಪಡುಬಿದ್ರೆ ಮಾತನಾಡಿ “ಭಜನೆ, ವಿಷ್ಣುಸಹಸ್ರನಾಮ, ಹರಿಕಥಾ ಸತ್ಸಂಗ, ಯಕ್ಷಗಾನ ತಾಳಮದ್ದಳೆ, ಕವಿಗೋಷ್ಠಿ ಮುಂತಾದ 60 ಸರಣಿ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಗುರುಭಕ್ತರು ನಮಗೆ ನಿರೀಕ್ಷೆಗೂ ಮೀರಿ ಪ್ರೋತ್ಸಾಹ, ಸಹಕಾರವನ್ನು ನೀಡಿದ್ದಾರೆ. ಇದರಿಂದ ಎಲ್ಲ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಜರಗಿದೆ. ಸಹಕಾರ, ಪ್ರೋತ್ಸಾಹ ನೀಡಿದವರಿಗೆಲ್ಲಾ ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದರು.

ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಅಧ್ಯಕ್ಷ ಶ್ರೀ ಹರೀಶ್ ಜಿ.ಅಮೀನ್ ಮಾತನಾಡಿ “ನೀವೆಲ್ಲ ಸೇರಿ ಷಷ್ಠ್ಯಬ್ದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೀರಿ” ಎಂದು ಪ್ರಶಂಸಿದರು. ಜ್ಯೋತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಮುಂಬೈ ಇದರ ಅಧ್ಯಕ್ಷ ಶ್ರೀ ಗಿರೀಶ್ ಸಾಲ್ಯಾನ್ ಮಾತನಾಡಿ “ನಮ್ಮ ಸಂಸ್ಕøತಿ, ಕಲೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಅಭಿನಂದನೀಯ” ಎಂದರು.

“ಇಂತಹ ಕಾರ್ಯಕ್ರಮಗಳಿಗೆ ಪಾಲಕರು ಮಕ್ಕಳನ್ನು ಕರೆದುಕೊಂಡು ಬಂದರೆ ಮಕ್ಕಳಿಗೆ ನಮ್ಮ ಸಂಸ್ಕøತಿಯ ಅರಿವು ಮೂಡುತ್ತದೆ. ಧಾರ್ಮಿಕ ಪ್ರಜ್ಞೆ ಬೆಳೆಯುತ್ತದೆ” ಎಂದು ನೆರುಲ್ ಶ್ರೀ ಗಣಪತಿ ದುರ್ಗಾ ಅಯ್ಯಪ್ಪ ಮಂದಿರದ ಕಾರ್ಯಾಧ್ಯಕ್ಷ ಶ್ರೀ ರವಿ ಆರ್.ಶೆಟ್ಟಿ ಅವರು ಮಾತನಾಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಫ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ದಿಯಾ ನವೀನ್ ಇನ್ನ (ಕ್ರಿಕೆಟ್), ಪ್ರತೀಕ್ ಸದಾಶಿವ ಶೆಟ್ಟಿ (ಮಿಕ್ಸ್ ಮಾರ್ಷಲ್ ಆರ್ಟ್ ಚಾಂಪಿಯನ್) ಮಾನಸ್ ಶೇಖರ್ ಶೆಟ್ಟಿ (ಯಕ್ಷಗಾನ ಕಲಾವಿದ ಹಾಗೂ ಆರ್ಟ್‍ವರ್ಕ್), ಸುಮನಾ ಶೇಖರ್ ಸಾಲ್ಯಾನ್ (ನ್ಯಾಷನಲ್ ಫುಟ್ಬಾಲ್ ಆಟಗಾರ್ತಿ), ಸ್ವಾತಿ ಮನ್ಮಥ ಹೆಗ್ಡೆ (ಪೆನ್ಸಿಲ್ ಆರ್ಟ್ ಸ್ಕೆಚ್ ಮೇಕರ್), ಮೊದಲಾದವರನ್ನು ಶಾಲು ಹೊದಿಸಿ ಸ್ಮರಣಿಕೆ ನಗದನ್ನು ನೀಡಿ ಸನ್ಮಾನಿಸಿದರು. ಶ್ರೀ ಪ್ರಭಾಕರ್ ಎಸ್. ಹೆಗ್ಡೆ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಈ ಸಂದರ್ಭದಲ್ಲಿ ಕಲಾವಿದ ಮಾನಸ್ ಶೇಖರ್ ಶೆಟ್ಟಿಯವರು ಬಿಡಿಸಿದ ಒಡಿಯೂರು ಶ್ರೀಗಳವರ ಭಾವಚಿತ್ರವನ್ನು ಅವರು ಮುಂಬೈ ಸಮಿತಿ ಅಧ್ಯಕ್ಷ ಶ್ರೀ ವಾಮಯ್ಯ ಬಿ. ಶೆಟ್ಟಿಯವರಿಗೆ ನೀಡಿದರು. ಅರುವತ್ತು ಸರಣಿ ಕಾರ್ಯಕ್ರಮಗಳ ಸಂಚಾಲಕರಾದ ಶ್ರೀ ದಾಮೋದರ ಶೆಟ್ಟಿ ಮತ್ತು ಸ್ವರ್ಣಲತಾ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಪ್ರಕಾಶಿಸಿದ ಶ್ರೀ ಹನುಮಾನ್ ಚಾಲೀಸಾ ಕೃತಿಯನ್ನು ಪುರೋಹಿತರಾದ ವೇ|ಮೂ| ದಿನೇಶ್ ಉಪರ್ಣ ಬಿಡುಗಡೆಗೊಳಿಸಿದರು.

ಈ ಸಂದರ್ಭ ದಾಮೋದರ ಶೆಟ್ಟಿ ದಂಪತಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನವಿಮುಂಬೈ ಮಹಾನಗರ ಪಾಲಿಕೆಯ ಸಹಕಾರದಿಂದ ಅರವತ್ತು ಗಿಡಗಳನ್ನು ನೆಡಲಾಯಿತು. ಸಾಂಕೇತಿಕವಾಗಿ ಗಿಡಗಳನ್ನು ಶ್ರೀ ಸಂತೋಷ್ ಶೆಟ್ಟಿಯವರಿಗೆ ನೀಡಿದರು. ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾದವರಿಗೆ 60 ಮಂದಿಗೆ ಕಿಟ್ ವಿತರಿಸಲಾಯಿತು. ವೇದಿಕೆಯಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಬಿ. ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಪೂಜ್ಯ ಶ್ರೀಗಳವರ ಅನುಗ್ರಹ ಸಂದೇಶದ ವೀಡಿಯೋ ಪ್ರಸಾರ ಮಾಡಲಾಯಿತು. ಸಂಯೋಜಕ ಮಿತ್ರರಾದ ಶ್ರೀ ಅನಿಲ್ ಕೆ.ಹೆಗ್ಡೆ ಪೆರ್ಡೂರು ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕರುಗಳಾದ ಅದ್ಯಪಾಡಿಗುತ್ತು ಶ್ರೀ ಕರುಣಾಕರ ಎಸ್. ಆಳ್ವ, ಶ್ರೀ ತಾರಾನಾಥ ಶೆಟ್ಟಿ ಪುತ್ತೂರು, ಶ್ರೀ ಗಿರೀಶ್ ಶೆಟ್ಟಿ ಏಳಿಂಜೆ, ಶ್ರೀ ಪ್ರಭಾಕರ ಎಸ್. ಹೆಗ್ಡೆ ಯೆರ್ಲಪಾಡಿ, ಅದ್ಯಪಾಡಿ ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ರವಿ ಶಂಕರ್ ಆಚಾರ್ಯ, ಶ್ರೀ ಜಯ ಶೆಟ್ಟಿ ವಾಶಿ, ಶ್ರೀ ವಿಶ್ವನಾಥ ಕೆ. ಪೂಜಾರಿ, ಶ್ರೀ ಆನಂದ ಹೆಗ್ಡೆ, ಶ್ರೀ ರಘು ಮೂಲ್ಯ, ಶ್ರೀ ಹರ್ಷವರ್ಧನ ಹೆಗ್ಡೆ ಮೊದಲಾದವರು ಸಹಕರಿಸಿದರು.  ಶ್ರೀ ಜಗದೀಶ್ ಶೆಟ್ಟಿ ಪನ್ವೆಲ್ ವಂದನಾರ್ಪಣೆಗೈದರು. ಸಮಾರಂಭದಲ್ಲಿ ಅರುವತ್ತು ಕಾರ್ಯಕ್ರಮಗಳ ಪ್ರಾಯೋಜಕರನ್ನು, ತಾಳಮದ್ದಳೆಯ ಕಲಾವಿದರನ್ನು, ಕವಿಗಳನ್ನು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದವರನ್ನು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.

ನ್ಯಾಯವಾದಿ ಶ್ರೀ ಪ್ರಕಾಶ್ ಎಲ್. ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಹರಿಕಥಾ ವಿದ್ವಾನ್ ವಿಶ್ವೇಶದಾಸ ಕೈರಬೆಟ್ಟು ವಿಶ್ವನಾಥ ಭಟ್ ಅವರು ಸಮುದ್ರೋಲ್ಲಂಘನ ಎಂಬ ಹರಿಕಥೆಯನ್ನು ತುಳುವಿನಲ್ಲಿ ಪ್ರಸ್ತುತಪಡಿಸಿದರು. ಹಾರ್ಮೋನಿಯಂನಲ್ಲಿ ಶ್ರೀ ಶೇಖರ ಸಸಿಹಿತ್ಲು ಹಾಗೂ ತಬಲಾದಲ್ಲಿ ಶ್ರೀ ಜನಾರ್ದನ ಸಾಲ್ಯಾನ್ ಸಹಕರಿಸಿದರು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top