+91 8255-266211
info@shreeodiyoor.org

ಒಡಿಯೂರು ಶ್ರೀಆಶೀರ್ವಚನ ದಾವಣಗೆರೆ

“ಈಶಪ್ರೇಮದೊಂದಿಗೆ ದೇಶಪ್ರೇಮವಿದ್ದರೆ ಧರ್ಮದ ಅನುಷ್ಠಾನ ಸಾಧ್ಯ”
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ದಾವಣಗೆರೆ ಘಟಕದ 15ನೇ ವಾರ್ಷಿಕೋತ್ಸವ ಉದ್ಘಾಟಿಸಿ – ಒಡಿಯೂರು ಶ್ರೀಆಶೀರ್ವಚನ ದಾವಣಗೆರೆ:

“ಈಶಪ್ರೇಮದೊಂದಿಗೆ ದೇಶಪ್ರೇಮವಿದ್ದರೆ ಧರ್ಮದ ಅನುಷ್ಠಾನ ಸಾಧ್ಯ. ಈಶಪ್ರೇಮದೊಟ್ಟಿಗೆ ದೇಶಪ್ರೇಮವೂ ಬೇಕು. ಅದು ಎರಡೂ ಜತೆಯಲ್ಲಿ ಹೋಗಬೇಕು. ಧರ್ಮ ಅನುಷ್ಠಾನವಾಗಬೇಕಾದರೆ ದೇಶಪ್ರೇಮ ಬೇಕು. ಆಗ ಬದುಕು ಬದುಕಾಗುತ್ತದೆ. ನಮ್ಮ ಮಕ್ಕಳಿಗೆ ದೇವರ ನಂಬಿಕೆಯನ್ನು ತಿಳಿಸಿಕೊಟ್ಟು ದೇಶಪ್ರೇಮದ ಅರಿವು ಮೂಡಿಸುವ ಕೆಲಸ ತಾಯಂದಿರು ಮಾಡಬೇಕು. ದಾವಣಗೆರೆಯ ಮಹಿಳೆಯರು ಏನೂ ಕಡಿಮೆ ಇಲ್ಲ ಎಂಬುದು ಇಲ್ಲಿ ಕಂಡ ಸತ್ಯ. ಭಕ್ತಿಶ್ರದ್ಧೆಗೆ ಇಲ್ಲಿಯ ತಾಯಂದಿರು ಮಾದರಿಯಾಗಿದ್ದಾರೆ, ಅವರುಗಳು ನಮ್ಮ ಕ್ಷೇತ್ರಕ್ಕೆ ಬಂದಾಗ ಕ್ರಿಯಾಶೀಲರಾಗಿರುವುದನ್ನು ನಾವು ಗಮನಿಸಿದ್ದೇವೆ. ಶಿಸ್ತು, ಸಂಯಮ ಹಾಗೂ ಭಗವದ್ಭಕ್ತಿ ಇದ್ದಲ್ಲಿ ಜೀವನ ಯಶಸ್ವಿಯಾಗುತ್ತದೆ. ತಾಳ್ಮೆ, ಕ್ಷಮಾಗುಣವಿದ್ದರೆ ಭಗವಂತನನ್ನು ಕಾಣಬಹುದು. ದಾವಣಗೆರೆಯಲ್ಲಿ ಪುಣ್ಯದ ಪಾದಗಳಿವೆ. ದಾನ-ಧರ್ಮ ಮಾಡುವ ಕೈಗಳಿವೆ. ಒಳ್ಳೆಯ ಮನಸ್ಸಿನವರೂ ಇದ್ದಾರೆ. ಪ್ರೀತಿಯಿಂದ ತುಂಬಿದ ಹೃದಯವಂತರೂ ಇದ್ದಾರೆ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ದಾವಣಗೆರೆ ಘಟಕದ 15ನೇ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನಗೈದರು.ದಾವಣಗೆರೆಯ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಜರಗಿದ ಸಮಾರಂಭದಲ್ಲಿ ಸೇವಾಬಳಗದ ಮಾಜಿ ಅಧ್ಯಕ್ಷ ದಿ| ಸಿದ್ಧರಾಮಪ್ಪ ಅವರ ಸೇವಾಕಾರ್ಯವನ್ನು ಸ್ಮರಿಸಿದ ಪೂಜ್ಯ ಶ್ರೀಗಳವರು “ರಾಮ ಎಂದರೆ ರಾಷ್ಟ್ರ. ರಾಷ್ಟ್ರ ಎಂದರೆ ರಾಮ ಎಂದು ನಂಬಿದವರು ನಾವು. ರಾಮ ಎಂದರೆ ಧರ್ಮ ಮತ್ತೊಮ್ಮೆ ಅವತಾರ ಎತ್ತಿ ಬಂದಂತಹದ್ದು. ಹನುಮ ಎಂದರೆ ಸಂಸ್ಕøತಿ. ರಾಮ ಎಂದರೆ ತ್ಯಾಗ, ಹನುಮ ಎಂದರೆ ಸೇವೆ. ಎರಡೂ ಒಟ್ಟು ಸೇರಿದಾಗ ರಾಷ್ಟ್ರೀಯ ಆದರ್ಶಗಳಾಗುತ್ತವೆ. ಎಲ್ಲರಲ್ಲು ಅಧ್ಯಾತ್ಮದ ಜಾಗೃತಿ ಆಗಬೇಕು. ಇರವಿನ ಅರಿವು ಮೂಡಿದಾಗ ಮನುಷ್ಯನಾಗಿ ಬದುಕಲು ಸಾಧ್ಯತೆ ಇದೆ. ಅಧ್ಯಾತ್ಮಿಕ ಚಿಂತನೆಯಿಂದ ಅಂತರಂಗ ಬೆಳಗುತ್ತದೆ. ಅಂತರಂಗ ಶುದ್ಧವಾಗಿದ್ದರೆ ಭಗವದನುಗ್ರಹ ನಿಶ್ಚಿತ” ಎಂದರು.ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಸೇವಾ ಬಳಗ ಹಾಗೂ ಮಹಿಳಾವಿಕಾಸ ಕೇಂದ್ರ ಎರಡು ಕಣ್ಣುಗಳಿದ್ದಂತೆ. ಕಳೆದ 15 ವರ್ಷಗಳಿಂದ ದಾವಣಗೆರೆಯ ಈ ಸಂಘಟನೆಯು ಯಶಸ್ವಿ ಕಾರ್ಯಕ್ರಮಕ್ಕೆ ಪೂಜ್ಯ ಶ್ರೀಗಳವರ ಅನುಗ್ರಹ ಮತ್ತು ನಿಮ್ಮೆಲ್ಲರ ದೃಢ ಮನಸ್ಸಿನ ಭಕ್ತಿಯ ಸೇವೆ ಅಭಿನಂದನೀಯ. ಅಧ್ಯಾತ್ಮಿಕ ಗುರುವಿನ ಪೂಜೆ ನಮಗೆ ಲೌಕಿಕ ಸಂತೋಷವನ್ನು ನೀಡುತ್ತದೆ. ಒಡಿಯೂರು ಶ್ರೀ ಸಂಸ್ಥಾನಕ್ಕೆ ದಾವಣಗೆರೆಯವರು ಬಂದಾಗ ಅವರು ದೇಗುಲದಲ್ಲಿ ಶ್ರದ್ಧಾಭಕ್ತಿಯಿಂದ ಮೂಡಿಸುವ ವರ್ಣರಂಜಿತ ರಂಗೋಲಿ ಆಕರ್ಷಣೀಯವಾಗಿರುತ್ತದೆ” ಎಂದರು.ಸಭಾಕಾರ್ಯಕ್ರಮದ ಮೊದಲಿಗೆ ಶ್ರೀಮತಿ ನಳಿನಿ ಅಚ್ಚುತ ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ ಜರಗಿತು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಮಲ್ಲಿಕಾರ್ಜುನ ಎಂ.ವಿ. ದಂಪತಿಗಳು ಶ್ರೀ ಗುರುಪಾದುಕಾರಾಧನೆ-ಗುರುಪಾದಪೂಜೆ ನೆರವೇರಿಸಿದರು.ಶ್ರೀಮತಿ ಮಾದೇವಿ ಮತ್ತು ಶ್ರೀಮತಿ ಮಂಜುಳಾ ಪ್ರಾರ್ಥನಾಗೀತೆ ಹಾಡಿದರು. ಬಳಗದ ಅಧ್ಯಕ್ಷ ನ್ಯಾಯವಾದಿ ಟಿ. ಹನುಮಂತಪ್ಪ ಕಂಚಿಕೆರೆ ಸ್ವಾಗತಿಸಿದರು. ಕಾರ್ಯದರ್ಶಿ ಪಂಡರಿನಾಥ್ ಮತ್ತಿತರ ಪದಾಧಿಕಾರಿಗಳು, ಮಹಿಳಾವಿಕಾಸ ಕೇಂದ್ರ, ದಾವಣಗೆರೆ ಘಟಕಾಧ್ಯಕ್ಷೆ ಶ್ರೀಮತಿ ಸುಮಾ ರಾಜಶೇಖರ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.ದಾವಣಗೆರೆ ಘಟಕದ ಕಛೇರಿ ಉದ್ಘಾಟನೆ ಹಾಗೂ ಗುರುಮಂದಿರಕ್ಕೆ ಶಿಲಾನ್ಯಾಸ:ಈ ಸುಸಂದರ್ಭ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ದಾವಣಗೆರೆ ಘಟಕಕ್ಕೆ ಸರಕಾರ ಒದಗಿಸಿದ ನಿವೇಶನದಲ್ಲಿ ಬಳಗವು ನಿರ್ಮಿಸಿದ ಕಛೇರಿಯನ್ನು ಪೂಜ್ಯ ಶ್ರೀಗಳವರು ಉದ್ಘಾಟಿಸಿದರು.ಕಛೇರಿಯಲ್ಲಿ ಶ್ರೀಮತಿ ಮಂಜುಳಾ ಹರೀಶ್ ದಂಪತಿಗಳು ಶ್ರೀ ಗುರುಪಾದುಕಾರಾಧನೆಗೈದರು. ನೂತನ ಕಛೇರಿಯ ಬಳಿ ನಿರ್ಮಿಸಲುದ್ದೇಸಿರುವ ಗುರುಮಂದಿರಕ್ಕೆ ಪೂಜ್ಯ ಶ್ರೀಗಳವರು ಶಿಲಾನ್ಯಾಸ ನೆರವೇರಿಸಿದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿದರು.

 

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top