ಸಮಾಜದ ಸ್ವಾಸ್ಥ್ಯಕ್ಕೆ ಆರಾಧನೆಗಳು ಪೂರಕ – ಒಡಿಯೂರು ಶ್ರೀ
“ಸಮುದ್ರ ಮಥನ ಸಮಯದಲ್ಲಿ ಅವತರಿಸಿದ ಶ್ರೀ ಧನ್ವಂತರೀ ದೇವರ ಆರಾಧನೆಯಿಂದ ಸರ್ವರೋಗ ನಿವಾರಣೆಯಾಗುತ್ತದೆ. ಆರೋಗ್ಯಪೂರ್ಣ ಬದುಕಿಗೆ ಭಗವದಾರಾಧನೆಯ ಅಗತ್ಯವಿದೆ. ನೈತಿಕ ಸ್ವಾಸ್ಥ್ಯ, ಸಮಾಜದ ಸ್ವಾಸ್ಥ್ಯಕ್ಕೆ ಆರಾಧನೆಗಳು ಪೂರಕ. ಶ್ರೀ ಧನ್ವಂತರೀ ದೇವರ ಆರಾಧನೆಯ ಮೂಲಕ ಕೊರೋನಾ ಮಹಾಮಾರಿಯಿಂದ ಜಗತ್ತೇ ಮುಕ್ತಿಹೊಂದಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಧನ್ವಂತರೀ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದ ಪೂಜ್ಯ ಶ್ರೀಗಳವರು “ಋತುಗಳಿಗೆ ಸರಿಯಾಗಿ, ಹಿತ-ಮಿತವಾಗಿ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಿಡಬಹುದು. ನಮ್ಮ ಪರಿಸರದಲ್ಲೇ ಇರುವಂತಹ ಹಲವು ಔಷಧೀಯ ಗುಣಗಳಿರುವ ಗಿಡಮೂಲಿಕೆಗಳಿಂದ ನಿಯಮಾನುಸಾರ ತಯಾರಿಸಿದ ಔಷಧಗಳಿಂದ ಹಲವಾರು ರೋಗಗಳನ್ನು ನಿವಾರಿಸಬಹುದು. ಇವೆಲ್ಲದಕ್ಕೂ ಮಖ್ಯ ಆತ್ಮಶಕ್ತಿ. ಆತ್ಮಶಕ್ತಿ ಬಲಗೊಳ್ಳುವುದರ ಜೊತೆಗೆ ಆತ್ಮಚಿಂತನೆಯೂ ನಮ್ಮಲ್ಲಿರಬೇಕು. ಆತ್ಮನ ಅರಿವೇ ನಿಜವಾದ ಸಂಪತ್ತು. ಆ ಮೂಲಕ ಬದುಕು ಸಾರ್ಥಕವಾಗುತ್ತದೆ. ತೈಲ ದೀಪವನ್ನೇ ಉರಿಸುವ ಮೂಲಕ ನಾವೆಲ್ಲರೂ ದೀಪಾವಳಿಯನ್ನು ಆಚರಿಸೋಣ” ಎಂದರು.
ಈ ಸುಸಂದರ್ಭ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಹಾಗೂ ಗುರುಬಂಧುಗಳು ಉಪಸ್ಥಿತರಿದ್ದರು.