“ವಿದ್ಯಾರ್ಥಿಗಳು ಭವ್ಯಭಾರತದ ಭವಿಷ್ಯವನ್ನು ರೂಪಿಸುವವರಾಗಬೇಕು”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 2020-21ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

“ಬದುಕಿಗೊಂದು ಉದ್ದೇಶವನ್ನು ನಾವು ರೂಪಿಸಬೇಕು. ಅದಕ್ಕೆ ಪೂರಕವಾದ ನಿಯಮಗಳನ್ನು ಅಳವಡಿಸಬೇಕಾಗುತ್ತದೆ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬಂತೆ ಬಂಧನಗಳನ್ನು ಬಿಡುಗಡೆಗೊಳಿಸುವ ವಿದ್ಯೆ ನಮಗೆ ಅವಶ್ಯ. ವಿದ್ಯಾರ್ಥಿಗಳು ಭವ್ಯ ಭಾರತದ ಭವಿಷ್ಯವನ್ನು ರೂಪಿಸುವವರಾಗಬೇಕು ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣದ ಸಂಕಲ್ಪವನ್ನು ಮಾಡಬೇಕು. ನಮ್ಮ ಜೀವನಕ್ಕೂ ಇತಿ-ಮಿತಿಗಳಿರಬೇಕು. ಗುರುಕುಲ ಶಿಕ್ಷಣದಿಂದ ಸಂಸ್ಕಾರ ನೀಡಲು ಸಾಧ್ಯ. ಸತತ ಪರಿಶ್ರಮದಿಂದ, ಸಾಧನೆಯಿಂದ ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಬೇಕು. ಎಲ್ಲರೂ ಪ್ರಜ್ಞೆಯಿಂದ ಯೌವ್ವನದ ಬದುಕನ್ನು ನಡೆಸಬೇಕು. ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅದುವೇ ನಮಗೆ ನಿಜವಾದ ಸಂಪತ್ತು-ಸೌಭಾಗ್ಯಗಳನ್ನು ಕರುಣಿಸುತ್ತವೆ. ಬದುಕಿಗೆ ಉದ್ದೇಶವಿದ್ದರೆ ಮಾತ್ರ ಉಜ್ವಲತೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಉತ್ತಮ ಪ್ರಜೆಗಳಾಗಿ ಭಾರತೀಯತೆಯನ್ನು ಉಳಿಸೋಣ, ಬೆಳೆಸೋಣ. ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತ್ರಿವೇಣಿ ಸಂಗಮವಿದ್ದಂತೆ. ಏಕರೂಪವಾಗಿ ಹರಿದಾಗ ಉತ್ತಮ ಫಲ ಲಭಿಸುತ್ತದೆ. ನಂಬಿಕೆ-ವಿಶ್ವಾಸಗಳು ಬಲವಾಗಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಬಹುದು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2020-21ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು.

ಈ ಸುಸಂದರ್ಭ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಗುರುದಕ್ಷಿಣೆ ನೀಡಿದ್ದಾರೆ. ನಿಮ್ಮ ಶ್ರದ್ಧೆ, ಪರಿಶ್ರಮ ಸಾಧನೆಗೆ ಕಾರಣ. ಎರಡು ವರ್ಷಗಳಿಂದ ನಿಮ್ಮ ಪ್ರತಿಭೆಯ ಅನಾವರಣಕ್ಕೆ ಅಡ್ಡಿಯಾಯಿತು. ಎಲ್ಲರೂ ಪ್ರಜ್ಞಾವಂತ ಪ್ರಜೆಗಳಾಗಿ ಬಾಳಿ. ಆತ್ಮೋನ್ನತಿಯ ಕಡೆಗೆ ಸಾಗಬೇಕಾದರೆ ಆತ್ಮಸ್ಥೈರ್ಯ ಪ್ರಾಮುಖ್ಯ. ಎಲ್ಲಾ ಶಿಕ್ಷಕರಿಗೂ, ಪೋಷಕರಿಗೂ ಅಭಿನಂದನೆಗಳು. ಸಂಚಾಲಕರ ಹಾಗೂ ಮುಖ್ಯೋಪಾಧ್ಯಾಯರ ಪ್ರಯತ್ನ ಈ ಸಾಧನೆಗೆ ಕಾರಣ” ಎಂದರು.

ವೇದಿಕೆಯಲ್ಲಿ ಹಿರಿಯ ಪತ್ರಕರ್ತರು, ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ, ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಹಿರಿಯ ಅಧ್ಯಾಪಕರಾದ ಶ್ರೀ ನಾರಾಯಣ ಮಣಿಯಾಣಿ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಹಾಗೂ ಎಲ್ಲಾ ಅಧ್ಯಾಪಕ ವೃಂದದವರೂ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಹಿರಿಯ ಪತ್ರಕರ್ತರು, ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ, ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಹಿರಿಯ ಅಧ್ಯಾಪಕರಾದ ಶ್ರೀ ನಾರಾಯಣ ಮಣಿಯಾಣಿ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಹಾಗೂ ಎಲ್ಲಾ ಅಧ್ಯಾಪಕ ವೃಂದದವರೂ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕು. ಹರ್ಷಿತಾ ಡಿ. ಸೋಜ ಸ್ವಾಗತಿಸಿ, ಕು. ಶ್ರೇಯಸ್ ಒ. ವಂದಿಸಿದರು, ಕು. ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು.