“ಆದರ್ಶ ಶಿಲ್ಪಕ್ಕೆ ನಾವೇ ಶಿಲ್ಪಿಗಳು” – ಶಿಕ್ಷಣ ಸಂಸ್ಥೆಗಳ ಶಾಲಾ ಆರಂಭೋತ್ಸವದಲ್ಲಿ ಒಡಿಯೂರು ಶ್ರೀ ಆಶೀರ್ವಚನ

“ರಾಷ್ಟ್ರೀಯ ಆದರ್ಶಗಳೆಂದರೆ ತ್ಯಾಗ ಮತ್ತು ಸೇವೆ. ಇವು ದೇಶದ ಎರಡು ಕಣ್ಣುಗಳಿದ್ದಂತೆ. ನಾನು, ನನ್ನದು ಎನ್ನುವ ಭಾವನೆ ತೊಲಗಿದಾಗ ನಾವೂ ಬೆಳೆಯುತ್ತೇವೆ, ಸಮಾಜವೂ ಬೆಳೆಯುತ್ತದೆ. ನಂಬಿಕೆಯೇ ಬದುಕು. ಅದನ್ನು ರೂಪಿಸಲು ಗುರುಕುಲ ಮಾದರಿ ಶಿಕ್ಷಣ ಸೂಕ್ತವಾದುದು. ವಿದ್ಯಾರ್ಥಿಗಳು ನಾಣ್ಯಗಳಾದರೆ, ಪೋಷಕರು ಮತ್ತು ಶಿಕ್ಷಕರು ನಾಣ್ಯದ ಎರಡು ಮುಖಗಳಿದ್ದಂತೆ. ಭಾವನೆಗಳು ಪರಿಶುದ್ಧವಾಗಿದ್ದಾಗ ಸತ್ಕಾರ್ಯಗಳು ನಡೆಯುತ್ತವೆ. ಆದರ್ಶಯುತ ಶಿಲ್ಪಿಗಳು ನಾವಾದಾಗ ಮಾತ್ರ ಭವ್ಯಭಾರತ ನಿರ್ಮಾಣ ಸಾಧ್ಯ. ಸಂಸ್ಕಾರಯುತ ಶಿಕ್ಷಣದಿಂದ ಸುದೃಢವಾದ ಸಮಾಜ ನಿರ್ಮಾಣವಾಗುವುದು. ಆದ್ದರಿಂದ ಆದರ್ಶ ಶಿಲ್ಪಕ್ಕೆ ನಾವೇ ಶಿಲ್ಪಿಗಳು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಪ್ರಾಂಗಣದಲ್ಲಿ ಜರಗಿದ ಶ್ರೀ ಗುರುದೇವ ಚ್ಯಾರೀಟೇಬಲ್ ಕಮಿಟಿ(ರಿ), ಒಡಿಯೂರು ಇದರ ಆಶ್ರಯದ ಶ್ರೀ ಗುರುದೇವ ಗುರುಕುಲ, ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆರಂಭೋತ್ಸವ ಕಾರ್ಯಕ್ರಮದಲ್ಲಿ ಉಚಿತ ಸಮವಸ್ತ್ರ ವಿತರಿಸಿ ಆಶೀರ್ವಚನಗೈದರು.
ಈ ಸುಸಂದರ್ಭ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಹರಸಿದ ಪೂಜ್ಯ ಶ್ರೀಗಳವರು “ಉತ್ತಮ ಫಲಿತಾಂಶ ದೊರಕುವಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಹಿರಿದಾದುದು” ಎಂದು ಪ್ರಶಂಸಿದರು.
ದೀಪೋಜ್ವಲನಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು “ವಿದ್ಯಾರ್ಥಿಗಳು ಸಚ್ಚಾರಿತ್ರ್ಯವಂತರಾಗಬೇಕು. ಮಾನವೀಯ ಮೌಲ್ಯಗಳಿಂದೊಡಗೂಡಿದ ನೈತಿಕ ಶಿಕ್ಷಣವಿದ್ದಾಗ ಮಾತ್ರ ವಿದ್ಯೆ ಸಾರ್ಥಕವೆನಿಸುತ್ತದೆ. ತಮ್ಮಲ್ಲಿರುವ ಸಾಮಥ್ರ್ಯ, ಪ್ರತಿಭೆಯ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಬೇಕೆಂದು” ಆಶೀರ್ವಚನಗೈದರು.
ವೇದಿಕೆಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಎ. ಸುರೇಶ್ ರೈ, ನಿರ್ದೇಶಕ ವೇಣುಗೋಪಾಲ ಮಾರ್ಲ, ನಿವೃತ್ತ ಮುಖ್ಯೋಪಾಧ್ಯಾಯರಾದ ಅಮೈ ಕೃಷ್ಣ ಭಟ್, ನಿವೃತ್ತ ಅಧ್ಯಾಪಕರಾದ ನಾರಾಯಣ ಕೆ. ಮಣಿಯಾಣಿ, ಒಡಿಯೂರು ಶ್ರೀಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು ಹಾಗೂ ಶಾಲಾ ಮಾತೃ ಮಂಡಳಿಯ ಅಧ್ಯಕ್ಷೆ ಹರಿಣಿ ಪ್ರಕಾಶ್ ಪಕಳ ಉಪಸ್ಥಿತರಿದ್ದರು.
ಉತ್ತಮ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಠಣ ಹಾಗೂ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್.ರೈ ಸ್ವಾಗತಿಸಿ, ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಜ್ಯೋತಿ ಹಾಗೂ ಪ್ರೌಢಶಾಲಾ ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ಶೇಖರ ಶೆಟ್ಟಿ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿತು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.