‘ಶ್ರೀಗಂಧ ಬೆಳೆಯೋಣ’ ಯೋಜನೆಗೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ

“ಪ್ರಕೃತಿ ಉಳಿದರೆ ನಮ್ಮ ಉಳಿವು” ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ‘ಮನೆಗೊಂದು ಶ್ರೀಗಂಧದ ಸಸಿ – ಶ್ರೀಗಂಧ ಬೆಳೆಯೋಣ’ ಯೋಜನೆಗೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ

“ಆರೋಗ್ಯಕ್ಕೆ ಹಾನಿಕಾರಕವಾದ ಅಕೇಶಿಯಾದಂತಹ ಗಿಡದ ಬದಲು ಗಿಡಮೂಲಿಕೆ, ಹಣ್ಣುಗಳ ಗಿಡಗಳನ್ನು ಬೆಳೆಸಬೇಕು. ಪ್ರಕೃತಿಯ ಉಳಿವು ನಮ್ಮಿಂದಲೇ ಅಗಬೇಕು. ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬವನ್ನು ಆಚರಿಸುವಾಗ ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸಿದಾಗ ಆದರ್ಶ ಆಚರಣೆಯಾಗುತ್ತದೆ. ಮಕ್ಕಳ ಕೈಯಲ್ಲೇ ಗಿಡಗಳನ್ನು ನೆಟ್ಟು, ಮರ ಬೆಳೆಸಿ, ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಅದರಲ್ಲಿ ಸಿಗುವ ಖುಷಿ ಬೇರೊಂದರಲ್ಲಿ ಸಿಗಲು ಸಾಧ್ಯವಿಲ್ಲ. ಆ ಮೂಲಕ ಸಮಾಜದಲ್ಲಿ ಪರಿವರ್ತನೆಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮನೆಗೊಂದು ಗಂಧದ ಗಿಡವನ್ನು ನೀಡಲಾಗುತ್ತಿದೆ. ‘ಮನೆಗೊಂದು ಶ್ರೀಗಂಧ ಗಿಡ – ಶ್ರೀಗಂಧ ಬೆಳೆಯೋಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಜಾತಿಯ ಸುಮಾರು 60000 ಗಿಡಗಳನ್ನು ನೆಡುವ ಯೋಜನೆಯನ್ನು ರೂಪಿಸಲಾಗಿದೆ. ತಾವೆಲ್ಲರೂ ಸಹಕರಿಸಬೇಕು” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು.

ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಅಂಗವಾಗಿ ಆಯೋಜಿಸಿದ ‘ಮನೆಗೊಂದು ಶ್ರೀಗಂಧ ಗಿಡ – ಶ್ರೀಗಂಧ ಬೆಳೆಯೋಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೂಜ್ಯ ಶ್ರೀಗಳವರು ಷಷ್ಠ್ಯಬ್ದ ಸಂಭ್ರಮ ಸಮಿತಿಯ ವಲಯವಾರು ಸಮಿತಿಗಳ ಪದಾಧಿಕಾರಿಗಳಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಗಂಧದ ಗಿಡಗಳನ್ನು ವಿತರಿಸಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ಶ್ರೀ ಯು. ರಾಜೇಶ್ ನಾಯ್ಕ್, ಪುತ್ತೂರು ಶಾಸಕ ಸ್ರೀ ಸಂಜೀವ ಮಠಂದೂರು, ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀ ಪಿ. ಶ್ರೀಧರ್, ಪುತ್ತೂರು ವಲಯ ಅರಣ್ಯಾಧಿಕಾರಿ ಶ್ರೀ ಸುಬ್ಬಯ್ಯ ನಾಯ್ಕ, ಬಂಟ್ವಾಳ ವಲಯ ಅರಣ್ಯಾಧಿಕಾರಿ ಶ್ರೀ ರಾಜೇಶ್ ಬಳೆಗಾರ್, ಬಂಟ್ವಾಳ ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ರೀ ಎಸ್. ರವಿಕುಮಾರ್ ಉಪಸ್ಥಿತರಿದ್ದರು.

ಷಷ್ಠ್ಯಬ್ದ ಸಂಭ್ರಮ ಸಮಿತಿಯ ಕಾರ್ಯಧ್ಯಕ್ಷ ಮಾಜಿ ಶಾಸಕ ಶ್ರೀ ಕೆ. ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.