ಅತ್ರಿ ಮಹರ್ಷಿ – ಅನಸೂಯ ದೇವಿಯರ ಕಣ್ಮಣಿ, ದತ್ತಾತ್ರೇಯ ಪ್ರಭು ತ್ರಿಮೂರ್ತಿ ಸ್ವರೂಪ. ಗುರುದೇವ ದತ್ತಾತ್ರೇಯ ಸೃಷ್ಟಿಕರ್ತನೂ, ಪಾಲನಾ ಕರ್ತೃವೂ, ಲಯಕಾರಣಕರ್ತನೂ ಹೌದು. ಜಗನ್ನಿಯಮಕನಾದ ಗುರುದೇವನು ಭಕ್ತ ಪರಿವಾರದಲ್ಲಿ ಸದ್ಭಾವ, ಸಚ್ಚಿಂತನೆ, ಸದಾಚಾರಗಳನ್ನು ಸೃಷ್ಟಿಸುವವನು ಹಾಗೆಯೇ ಪ್ರಸನ್ನತೆ, ಧರ್ಮಾಚರಣೆ, ಆತ್ಮ ಚಿಂತನೆಯ ದೈವೀಗುಣಗಳ ಪಾಲಕನು, ಕಾಮಕ್ರೋಧಾದಿ ಅಮಂಗಳವನ್ನು ಲಯ ಮಾಡುವ ಪ್ರಭು ಪರಮೇಶ್ವರನು. ಹೀಗೆ ಗುರುದೇವದತ್ತನು ಇಲ್ಲಿ ಆರಾಧ್ಯನಾದರೆ ಜತೆಗೆ ಆಂಜನೇಯ ಸ್ವಾಮಿಯೂ, ಶ್ರೀ ವಜ್ರಮಾತಾ ದೇವಿಯೂ ಇಲ್ಲಿ ಪ್ರಧಾನ ಆರಾಧ್ಯ ದೇವರು.

ಬಲಮುರಿ ಗಣಪತಿ ವಿಘ್ನನಾಶಕನಾಗಿ ಶ್ರೀ ಸಂಸ್ಥಾನದಲ್ಲಿ ಪೂಜೆಗೊಳ್ಳುತ್ತಾನೆ. ಸುಬ್ರಹ್ಮಣ್ಯ ಸ್ವಾಮಿಯು ಇಲ್ಲಿ ಪರಿವಾರ ದೇವರುಗಳಲ್ಲಿರುವÀನು. ಶ್ರೀ ಮಹಾವಜ್ರಮಾತೆ ಪ್ರಸನ್ನರೂಪಿಯಾಗಿ ಪರ್ವ ವಿಶೇಷದಲ್ಲಿ ಸೇವೆ ಸ್ವೀಕರಿಸುವ ಜಗದ್ಧಾತ್ರಿ. ಶಕ್ತಿ ಸ್ವರೂಪಿಣಿಯಾದ ಭದ್ರಕಾಳಿ ದಕ್ಷಿಣಾಮೂರ್ತಿ, ಮೂಲರಾಮ ಪರಿವಾರ ದೇವತೆಗಳ ಜತೆಗೆ ಇಲ್ಲಿ ಆರಾಧಿಸಲಾಗುತ್ತದೆ.

ಶ್ರೀ ಸಂಸ್ಥಾನದ ನಮಸ್ಕಾರ ಮಂಟಪದ ಹೊರಗೆ ಸುತ್ತು ಗೋಪುರದ ಮಧ್ಯೆ ಅತ್ತಿ(ಔದುಂಬರ), ನೆಲ್ಲಿ (ಆಮಲಕ) ಮತ್ತು ಪಾರಿಜಾತ ವೃಕ್ಷಗಳಿವೆ. ಈ ಗಿಡಗಳನ್ನು ಯಾರೂ ನೆಟ್ಟು ಬೆಳಿಸಿದ್ದಲ್ಲ. ಅದರಷ್ಟಕ್ಕೆ ಪ್ರಾಕೃತಿಕವಾಗಿ ಹುಟ್ಟಿ ಬೆಳದದ್ದು. ದತ್ತಾಂಜನೇಯ ಸನ್ನಿಧಿಯಲ್ಲಿ ಈ ವೃಕ್ಷಗಳ ಇರುವಿಕೆಗೆ ಹೆಚ್ಚು ಮಹತ್ವವಿದೆ. ಈ ಮೂರು ವೃಕ್ಷಗಳು ಅನುಪಮ ಔಷಧೀಯ ಗುಣಗಳಿರುವ ವೃಕ್ಷಗಳು.

ಸ್ವರ್ಣ ಪ್ರಶ್ನೆಯ ಆಧಾರದಿಂದ ವಿವೇಚಿಸಿದಾಗ, ಅತ್ತಿ, ನೆಲ್ಲಿ, ಪಾರಿಜಾತ ವೃಕ್ಷಗಳಿಗೂ ಗಿಡಮೂಲಿಕೆಗಳಿಗೂ ಸಂಜೀವಿನಿ ಇದ್ದ ಚಂದ್ರದ್ರೋಣ ಗಿರಿಯ ಸಂಪರ್ಕವೇ ಕಾರಣವೆಂದು ನಿರ್ಣಯಿಸಬಹುದಾಗಿದೆ.

ಅತ್ತಿ ಮರದಲ್ಲಿ ಲಕ್ಷ್ಮೀನಾರಾಯಣ ಅಸ್ತಿತ್ವ ಇದೆ, ಹಾಗಾದರೆ ಇಲ್ಲಿ ದತ್ತನ ಸಾನಿಧ್ಯವಿದೆ. ಪಾರಿಜಾತದಲ್ಲಿ ಪ್ರಾಣದೇವರು ನೆಲೆಯಾಗಿರುವನು. ಆದುದರಿಂದ ದತ್ತನೂ ಆಂಜನೇಯನೂ ನೆಲೆಯಾಗಿರುವ ಔದುಂಬರ – ಪಾರಿಜಾತ ಜತೆ ಜತೆಯಾಗಿರುವುದರಿಂದ ದತ್ತಾಂಜನೇಯರ ದಿವ್ಯ ಸಾನಿಧ್ಯ ಪೌರಾಣಿಕ ಆಧಾರಕ್ಕೆ ನೀಡುವ ಪ್ರತ್ಯಕ್ಷ ಸಾಕ್ಷಿಯಾಗಿದೆ. ಹಾಗೆಯೇ ನೆಲ್ಲಿ ವಿಷ್ಣು ಸಾನಿಧ್ಯದ ಪ್ರತೀತ.