ಶ್ರೀ ಸಂಸ್ಥಾನದಲ್ಲಿ ವೃತ್ತಾಕಾರದಲ್ಲಿ ಎರಡು ಅಂತಸ್ತಿನ ಸುಂದರ ದತ್ತ ಪೀಠವನ್ನು ನಿರ್ಮಿಸಲಾಗಿದೆ. ಇದು ತುಳು ನಾಡಿನ ‘ಶ್ರೀ ಗುರುದೇವದತ್ತ ಪೀಠ’. ಪೂಜ್ಯ ಶ್ರೀಗಳು ಇಲ್ಲಿ ಗುರುವಾರ, ಶನಿವಾರ ಮತ್ತು ಭಾನುವಾರ ಭಕ್ತ ಜನರನ್ನು ಭೇಟಿ ಮಾಡುವರು. ಅವರ ಬದುಕಿನ ಸಮಸ್ಯೆಗಳನ್ನು ಆಲಿಸುವರು. ಪರಿಹಾರಗಳನ್ನು ಸೂಚಿಸುವರು. ಶಕ್ತ್ಯಾನುಸಾರ ಬಾಧಾ ನಿವೃತ್ತಿ ದೇವತಾರಾಧನೆಯ ಸೇವೆಗಳಿಗೆ ಶ್ರೀ ಸಂಸ್ಥಾನದಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

ಪೂಜ್ಯ ಸ್ವಾಮೀಜಿ ಅವರ ದೃಷ್ಟಿಯಲ್ಲಿ ಯತಿಗಳು ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು. ‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’ ಎನ್ನುವ ಪೂಜ್ಯ ಶ್ರೀಗಳು ಸಾಮಾಜಿಕ ಸ್ಪಂದನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.

ನಮ್ಮ ಸಮಾಜದಲ್ಲಿ ಗುರು ಪೀಠದ ಸ್ಥಾನ ವಿಶಿಷ್ಟವಾದುದು. ಶಿಷ್ಯ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಧರ್ಮ ಜಾಗೃತಿ ಮೂಡಿಸುವ ಪವಿತ್ರ ಕಾರ್ಯ ಗುರು ಪೀಠದಿಂದ ನಡೆಯುತ್ತಿದೆ. ಗುರುಪೀಠ ಮತ್ತು ಶಿಷ್ಯ ಸಮುದಾಯ ಒಂದಕ್ಕೊಂದು ಪೂರಕ. ಗುರುಪೀಠವನ್ನು ವಿಧಾಯಕವೆಂದು ಉಲ್ಲೆಖಿಸಿದರೆ ಶಿಷ್ಯ ಸಮುದಾಯ ವಿಧೇಯವೆನ್ನಬಹುದು. ಗುರುಪೀಠ ಹಾಗೂ ಶಿಷ್ಯ ಸಮುದಾಯದೊಳಗಣ ಸಂಬಂಧ ನಿಕಟ ಹಾಗೂ ಆತ್ಮೀಯವಾದಷ್ಟು ಸ್ವಸ್ಥ ಸಮಾಜದ ನಿರ್ಮಾಣದ ಕನಸು ನನಸಾಗುವುದು ಸುಗಮ ಸಾಧ್ಯ.

ಶ್ರೀ ಗುರುದೇವದತ್ತ ಪೀಠದ ಸನಿಹದಲ್ಲೇ ನಾಗಬಿಂಬವನ್ನು ಪ್ರತಿಷ್ಠೆ ಮಾಡಲಾಗಿದೆ. ಶ್ರೀ ಸಂಸ್ಥಾನದಲ್ಲಿ ನಾಗರಪಂಚಮಿ, ಆಶ್ಲೇಷ ಬಲಿ ಉತ್ಸವಗಳು, ನಾಗದೋಷಕ್ಕೆ ಸಂಬಂಧಿಸಿದ ಪ್ರಾಯಶ್ಚಿತ ವಿಧಿಗಳು, ಚರ್ಮರೋಗ ನಿವಾರಣೆ, ಸಂತಾನ ಪ್ರಾಪ್ತಿಯ ಕುರಿತಾದ ಸೇವೆಗಳು ಜರಗುತ್ತದೆ.