ಒಡಿಯೂರು ಶ್ರೀಗಳವರ ಷಷ್ಠ್ಯಬ್ದಿ ಸಂಭ್ರಮ ಸಮಿತಿಯ ಅಧ್ಯಕ್ಷರಾಗಿ ಡಾ. ಎಂ. ಮೋಹನ ಆಳ್ವ ಆಯ್ಕೆ “ಕಾರ್ಯಕ್ರಮ ಸಮಾಜಮುಖಿ ಚಿಂತನೆಗಳಿಂದ ಕೂಡಿರಬೇಕು” – ಷಷ್ಟ್ಯಬ್ದಿ ಆಚರಣೆಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ
ಸೆ.18: “ತ್ಯಾಗಪೂರ್ಣ ಸೇವೆಯಿಂದ ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಸಾಧ್ಯ. ಕಳೆದು ಹೋದುದರ ಬಗ್ಗೆ ಚಿಂತಿಸದೆ ಇದ್ದುದರಲ್ಲೇ ತೃಪ್ತಿಪಡುವ ಮನಸ್ಸು ನಮ್ಮದಾಗಬೇಕು. ಯಾವುದೇ ಕಾರ್ಯಕ್ರಮವೂ ಸಹ ಅದು ಸಮಾಜಮುಖಿಯಾಗಿರಬೇಕು. ಮಾತ್ರವಲ್ಲದೆ ಅದೊಂದು ನೆನಪಿನ ಬುತ್ತಿಯಾಗಿರಬೇಕು. ಶಿಸ್ತುಬದ್ಧವಾಗಿ ನಡೆದ ಕಾರ್ಯಕ್ರಮಗಳು ಯಶಸ್ಸನ್ನು ಕಾಣುತ್ತದೆ. ಈ ಷಷ್ಠ್ಯಬ್ದಿ ಕಾರ್ಯಕ್ರಮ ಹಲವಾರು ಸಮಾಜಮುಖಿ ಚಿಂತನೆಗಳಿಂದ ಕೂಡಿದೆ. ಕೇಂದ್ರ ಸಮಿತಿಯ ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕುಗಳಲ್ಲಿ ಹಾಗೂ ಗ್ರಾಮ ಗ್ರಾಮಗಳಲ್ಲಿ ಸಮಿತಿಯನ್ನು ರಚನೆ ಮಾಡುವ ಯೋಜನೆ ಇದೆ. ಆದರ್ಶ ಹಾಗೂ ಅರ್ಥಪೂರ್ಣ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪೂಜ್ಯ ಶ್ರೀಗಳವರ ಷಷ್ಟ್ಯಬ್ದಿ ಆಚರಣೆ ಅಂಗವಾಗಿ ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಸಮಿತಿಯ ಪದಾಧಿಕಾರಿಗಳ ಹೆಸರನ್ನು ಘೋಷಿಸಿ ಆಶೀರ್ವಚನ ನೀಡಿ “ಸಮಾಜದ ಋಣ ಸಂತರಿಗಿದೆ. ಸಂತನ ಋಣ ಸಮಾಜಕ್ಕಿದೆ. ನನಗಾಗಿ ಏನನ್ನೂ ಮಾಡಬೇಡಿ, ಸಮಾಜಕ್ಕಾಗಿ ಏನಾದರೂ ಕೊಡುಗೆಗಳನ್ನು ನೀಡಿ ಎನ್ನುವುದು ಪೂಜ್ಯ ಶ್ರೀಗಳವರ ಸಂದೇಶವಾಗಿದೆ. ಈ ಷಷ್ಠ್ಯಬ್ದಿ ಕಾರ್ಯಕ್ರಮವು ಜ್ಞಾನವಾಹಿನಿ ಎಂಬ ಹೆಸರಿನಿಂದ ಆಚರಣೆಯಾಗುತ್ತದೆ. ಇದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು” ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಮಾತನಾಡಿ “ಒಡಿಯೂರು ಶ್ರೀಗಳವರು ಪ್ರೀತಿಯ ಪ್ರತೀಕವಾಗಿದ್ದು, ಕಷ್ಟದಲ್ಲಿ ಬಂದವರ ಅಳಲನ್ನು ಸಮಚಿತ್ತದಿಂದ ಆಲಿಸುವ ಆದರ್ಶಮಯಿಯಾಗಿದ್ದಾರೆ. ಅವರ ಷಷ್ಠ್ಯಬ್ದಿ ಆಚರಣೆಯನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ” ಎಂದರು.
ವಿಟ್ಲ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಪದ್ಮನಾಭ ಕೊಟ್ಟಾರಿ, ಬಿ.ಸಿ. ರೋಡ್ ರಂಗೋಲಿ ಹೋಟೆಲಿನ ಮ್ಹಾಲಕ ಶ್ರೀ ಚಂದ್ರಹಾಸ ಶೆಟ್ಟಿ, ಮಂಗಳೂರಿನ ಚಾರ್ಟರ್ಡ್ ಎಕೌಟೆಂಟ್ ಶ್ರೀ ರಾಮಮೋಹನ ರೈ, ವಿದ್ವಾಸಂರಾದ ವೇ|ಮೂ| ಹಿರಣ್ಯ ವೆಂಕಟೇಶ್ವರ ಭಟ್, ಶ್ರೀ ಸಂಸ್ಥಾನದ ಪ್ರಮುಖ ವೈದಿಕರಾದ ವೇ|ಮೂ| ಚಂದ್ರಶೇಖರ ಉಪಾಧ್ಯಾಯ, ಶ್ರೀ ಪಟ್ಲಗುತ್ತು ಮಹಾಬಲ ಶೆಟ್ಟಿ, ಉಪ್ಪಳದ ಹಿರಿಯ ವೈದ್ಯರಾದ ಡಾ. ಶ್ರೀಧರ ಭಟ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‍ಕುಮಾರ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಶ್ರೀ ಕಿರಣ್ ಉರ್ವ, ಯೋಜನೆಯ ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಶ್ರೀ ಕೆ.ಪಿ. ರಘುರಾಮ ಶೆಟ್ಟಿ, ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ಪಟ್ಲಗುತ್ತು ರಘುನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಪ್ರಾಥಮಿಕ ಶಾಲೆಯ ಮುಖ್ಯೊಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಶ್ರೀ ಎ. ಸುರೇಶ್ ರೈ ಸ್ವಾಗತಿಸಿ, ಶ್ರೀ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದರು. ಹಿರಿಯ ಪತ್ರಕರ್ತ ಶ್ರೀ ಯಶವಂತ ವಿಟ್ಲ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ವಂದಿಸಿದರು.