ಹುಟ್ಟುಹಬ್ಬಕ್ಕೊಂದು ಗಿಡ ನೆಡೋಣ… ಸಂರಕ್ಷಿಸೋಣ…
ಪರಿಸರ ಸ್ನೇಹಿಗಳಾಗೋಣ..ಪರಿಸರ ಸ್ನೇಹಿಗಳಾಗೋಣ..
ಪರಿಸರ ಎನ್ನುವ ಶಬ್ದಕ್ಕೆ ಅರ್ಥ ಸುತ್ತುಮುತ್ತಲು ಎನ್ನುವುದಿದೆ. ಮನೆಯಿಂದ ಹೊರಹೊರಟಾಗ ಪ್ರಕೃತಿಯ ಸೌಂದರ್ಯ ಸೆಳೆಯುತ್ತವೆ. ಹರಿಯುವ ನದಿಗಳು, ಗುಡ್ಡಕಾಡುಗಳು, ಹಾರಾಡುವ ಪಕ್ಷಿಗಳು, ಓಡಾಡುವ ಪ್ರಾಣಿಗಳು, ಸರೀಸೃಪಗಳು ಎಲ್ಲವೂ ಎದುರು ಕಾಣುತ್ತದೆ.
ಪರಿಸರಸ್ನೇಹಿ ಎನ್ನುವುದು ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ಇಲ್ಲೊಂದು ಮುಖ್ಯವಾದ ವಿಚಾರವನ್ನು ಗಮನಿಸಬೇಕು. ಬೆಳೆದು ನಿಂತ ಮರಗಳು ನೆರಳನ್ನು, ಹಣ್ಣುಗಳನ್ನು ಕೊಟ್ಟು ಉಪಕೃತವಾಗುತ್ತವೆ. ಹರಿಯುವ ನದಿಯು ತಾನೇ ನೀರನ್ನೇ ಕುಡಿಯದೆ ಪರರಿಗೆ ಅನುಕೂಲವಾಗಿಸುತ್ತದೆ. ನಾವು ಹೇಗಿರಬೇಕೆನ್ನುವ ಪುಟಗಳು ತೆರೆದುಕೊಳ್ಳುತ್ತವೆ. ಅರ್ಥಾತ್ ಬದುಕಿಗೊಂದು ಪಾಠವಿದೆ. ಪ್ರಕೃತಿಯು ಎಲ್ಲವನ್ನೂ ನಮಗೊದಗಿಸುತ್ತದೆ. ಜೊತೆ ಜೊತೆಯಲ್ಲಿ ಸಾಗಬೇಕಾದ ಅನಿವಾರ್ಯತೆಯಿದೆ. ವಿಶ್ವ ಪರಿಸರ ದಿನಾಚರಣೆಯ ಉದ್ದೇಶವು ಇದಾಗಬೇಕು. ಮಕ್ಕಳಲ್ಲಿ ಪರಿಸರ ಪ್ರೇಮದ ಬೀಜವನ್ನು ಬಿತ್ತಬೇಕು. ಪರಿಸರ ಸಂರಕ್ಷಣೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಗೊಳ್ಳುತ್ತದೆ. ಮನುಷ್ಯನು ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಬಲಿಕೊಡಬಾರದು. ಪ್ರಕೃತಿಯನ್ನು ಬಳಸಿಕೊಂಡು ನಾವು ಬದುಕಬೇಕು. ಪರಮಾತ್ಮ ಪ್ರಕೃತಿಯ ಜೊತೆಗಿದ್ದುಕೊಂಡು ಎಲ್ಲವನ್ನೂ ಕರುಣಿಸಿದ್ದಾನೆ. ಪರಿಸರ ನಿರ್ಮಾಣಗೊಳ್ಳಬೇಕೇ ಹೊರತು ನಿರ್ನಾಮ ಸಲ್ಲದು. ಈಗೀಗ ನಮಗೆ ಕಾಣುವಂತಹುದು ಪರಿಸರದಲ್ಲಿ ತ್ಯಾಜ್ಯ ವಸ್ತುಗಳನ್ನು ತುಂಬಿ ಸ್ವಾರ್ಥಕ್ಕಾಗಿ ಬೆಳೆಯುವ ಮನುಷ್ಯನಿಗೆ ಏನೆನ್ನೋಣ? ವಿಶ್ವದ ಶ್ವಾಸವೇ ವಿಶ್ವನಾಥನೆಂದರಿತು ವಿಶ್ವ ಪರಿಸರ ದಿನಾಚರಣೆ ಆಚರಿಸಿದಾಗ ಅರ್ಥ ಬರುವುದು. ಪರಿಸರ ನೈರ್ಮಲ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.
ಹುಟ್ಟುಹಬ್ಬಕ್ಕೊಂದು ಗಿಡ ನೆಡೋಣ… ಸಂರಕ್ಷಿಸೋಣ…
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್