“ನಾಗಾರಾಧನೆ ಪ್ರಕೃತಿಯ ಆರಾಧನೆ” ನಾಗರ ಪಂಚಮಿ ಮಹೋತ್ಸವದಲ್ಲಿ ಒಡಿಯೂರು ಶ್ರೀ ದಿವ್ಯ ಸಂದೇಶ
“ನಾಗಾರಾಧನೆಯಲ್ಲಿ ಪ್ರಕೃತಿಯ ಆರಾಧನೆಯ ತತ್ತ್ವವಿದೆ. ಸಂಪತ್ತುಗಳ ಅಧಿಪತಿ ನಾಗರಾಜ. ನಾಗಾರಾಧನೆಯ ಹಿಂದೆ ಮೂಲ ಸಂಸ್ಕøತಿಯ ಅಂಶವಿದೆ. ಆಸ್ತಿಕ ಭಾವಕ್ಕೆ ಹೆಚ್ಚು ಗೌರವವಿದೆ. ಪುರಾಣಗಳ ಪ್ರಕಾರ 16000 ಸರ್ಪಸಂಕುಲಗಳಿವೆ. ನಾಗಾರಾಧನೆಯ ಹೆಸರಿನಲ್ಲಿ ಪ್ರಕೃತಿಯ ಉಳಿವಿದೆ. ಪ್ರಕೃತಿಯ ಆರಾಧನೆಯಿಂದ ಆರೋಗ್ಯದ ಹಿತವಿದೆ. ಪ್ರಕೃತಿಯಲ್ಲಿ ಪರಮಾತ್ಮನ ಅಸ್ತಿತ್ವವನ್ನು ಕಾಣಬಹುದು. ಸಹೋದರತ್ವವನ್ನು ಪ್ರತಿನಿಧಿಸುವ ನಾಗರಪಂಚಮಿ ಹಬ್ಬ ನಾಡಿಗೆ ವಿಶೇಷ ಹಬ್ಬವಾಗಿದೆ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ಸಂಪನ್ನಗೊಂಡ ಸಾಮೂಹಿಕ ಆಶ್ಲೇಷ ಬಲಿಪೂಜೆಯ ಸಂದರ್ಭ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದಿವ್ಯ ಸಂದೇಶ ನೀಡಿದರು.
ಈ ಸುಸಂದರ್ಭ ಪೂಜ್ಯ ಶ್ರೀಗಳವರು ತುಳು ಲಿಪಿಯ ಹಸ್ತಾಕ್ಷರದ ಭಗವಾನ್ ದತ್ತಾತ್ರೇಯ ಪ್ರಣೀತ ಜೀವನ್ಮುಕ್ತ ಗೀತೆಯ ಕೃತಿಯನ್ನು ಬಿಡುಗಡೆಗೊಳಿಸಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಷಷ್ಠ್ಯಬ್ದ ಸಂಭ್ರಮ ಮುಂಬೈ ಸಮಿತಿಯ ಅಧ್ಯಕ್ಷ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‍ಕುಮಾರ್ ಬಿಜೈ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀ ರೇವತಿ ವಾಮಯ್ಯ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ನಾಗರಪಂಚಮಿಯ ಅಂಗವಾಗಿ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿಪೂಜೆಯು ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಮಪನ್ನಗೊಂಡಿತು.