ಒಡಿಯೂರು ಶ್ರೀ ಸಂಸ್ಥಾನದಲ್ಲಿ ‘ಒಡಿಯೂರು ಶ್ರೀ ಜನ್ಮದಿನೋತ್ಸವ – ಗ್ರಾಮೋತ್ಸವ’ದ ಪೂರ್ವಭಾವಿ ಸಭೆ

“ಗ್ರಾಮೋತ್ಸವದಿಂದ ರಾಷ್ಟ್ರೋತ್ಥಾನ” – ಒಡಿಯೂರು ಶ್ರೀ
“ಸಮಾಜಮುಖಿ ಕಾರ್ಯಗಳು ಗ್ರಾಮೋತ್ಸವದ ಮೂಲಕ ಆಗಬೇಕಾಗಿದೆ. ಗ್ರಾಮೋತ್ಸವದ ಮೂಲಕ ರಾಷ್ಟ್ರೋತ್ಥಾನದ ಕಾರ್ಯವಾಗಲಿ. ಬದುಕು ಕೌಶಾಲ್ಯಾಧಾರಿತವಾಗಿರಬೇಕು. ಗುಣಾತ್ಮಕ ಹಾಗೂ ಋಣಾತ್ಮಕ ಪಟ್ಟಿ ಜೀವನದಲ್ಲಿ ಮಾಡಬೇಕು. ಜೀವನದಲ್ಲಿ ಬದಲಾವಣೆ ಅತೀ ಅಗತ್ಯ. ವಿಶ್ವದಲ್ಲಿ ಶಾಶ್ವತವಾದುದು ಯಾವುದೂ ಇಲ್ಲ. ಎಲ್ಲರನ್ನು ಅರಿತು ಬಾಳುವ ಬದುಕು ನಮ್ಮದಾಗಬೇಕು. ಆಧ್ಯಾತ್ಮದ ಬದುಕಿಗೆ ನಮ್ಮನ್ನು ತೊಡಗಿಸಿಕೊಳ್ಳುವ ಮನಮಾಡಬೇಕು. ಅನುಭವವೇ ನಮಗೆ ಮಹಾಗುರು. ಇದರ ಮೂಲಕ ಜ್ಞಾನವು ಲಭಿಸುತ್ತದೆ. ತಾಳ್ಮೆ, ಸಹನೆ ಇದ್ದರೆ ಬದುಕು ಹಸನಾಗುತ್ತದೆ. ತಾಳ್ಮೆ ಸಹನೆಯ ಗುಣವನ್ನು ಆಭರಣವಾಗಿಸೋಣ. ಶ್ರೀ ಸಂಸ್ಥಾನದ ಸಮೀಪವಿರುವ ಹನುಮಾದ್ರಿ ಎನ್ನುವ ಸ್ಥಳವನ್ನು ಅಭಿವೃದ್ಧಿ ಮಾಡುವ ಇರಾದೆಯೂ ಇದೆ. ಹಲವಾರು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಸತ್ಸಂಕಲ್ಪದ ಸಾಕಾರಕ್ಕೆ ತಮ್ಮೆಲ್ಲರ ಸಹಕಾರವಿರಲಿ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವನಂದ ಸ್ವಾಮಿಗಳವರು ಆಗಸ್ಟ್ 8ರಂದು ಜರಗುವ ಒಡಿಯೂರು ಶ್ರೀ ಗ್ರಾಮೋತ್ಸವ – 2022ರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯಿಯವರು ಆಶೀರ್ವಚನ ನೀಡಿ “ನಮಗೆಲ್ಲ ಇನ್ನೊಂದು ಸಂಭ್ರಮದ ಕ್ಷಣ ಎದುರಾಗುವ ದಿನ ಸನ್ನಿಹಿತವಾಗಿದೆ. ರಾಷ್ಟ್ರೋನ್ನತಿಯ ಕಾರ್ಯವಾಗಿಸಲು ಗುರುಗಳು ವಿವಿಧ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಗುರುಸೇವೆಗೆ ಎಲ್ಲರಿಗೂ ಸದವಕಾಶ ಸಿಕ್ಕಿದ್ದು, ಗ್ರಾಮೋತ್ಸವದ ಮೂಲಕ ಇದನ್ನು ಸದುಪಯೋಗಪಡಿಸಿಕೊಳ್ಳೋಣ” ಎಂದರು.
ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ “ಒಡಿಯೂರು ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮ ಬಹಳಷ್ಟು ಯಶಸ್ವಿಯಾಗಿ ನಡೆದಿದೆ. ಗ್ರಾಮೋತ್ಸವ ಕಾರ್ಯಕ್ರಮ ರಾಷ್ಟ್ರೋತ್ಥಾನದ ಕಾರ್ಯಕ್ರಮವಾಗಿ ನಡೆಯಲಿದೆ. ಪೂಜ್ಯ ಸ್ವಾಮೀಜಿಯ ಚಿಂತನೆಯ ಪ್ರಕಾರ ಕಾರ್ಯಕ್ರಮಗಳ ರೂಪುರೇಖೆಯನ್ನು ತಯಾರಿಸಿ ನಡೆಸಲಾಗುವುದು. ಗ್ರಾಮೋತ್ಸವದ ಹೆಸರಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿದೆ. ಎಲ್ಲರನ್ನು ಒಟ್ಟು ಸೇರಿಸಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೊಣ” ಎಂದರು.
ಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮುಂಬೈನ ಖ್ಯಾತ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ಆಯ್ಕೆಯಾದುದನ್ನು ಪೂಜ್ಯ ಸ್ವಾಮೀಜಿಯವರು ಘೋಷಿಸಿದರು. ಈ ಸಂದರ್ಭದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿದ್ದವರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಎ. ಅಶೋಕ್ ಕುಮಾರ್ ಬಿಜೈ, ಲೊಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸದ ಯೋಜನಾಧಿಕಾರಿ ಕಿರಣ್ ಉರ್ವ, ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಕೆ.ಎನ್. ವೆಂಕಟರಮಣ ಹೊಳ್ಳ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.
ರೇಣುಕಾ ಎಸ್.ರೈಯವರ ಪ್ರಾರ್ಥನಾಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ ವಂದಿಸಿದರು.