‘ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ’ – ಒಡಿಯೂರು ಶ್ರೀ

‘ಬೀಳ್ಕೊಡುಗೆ ಎನ್ನುವುದು ಭವಿಷ್ಯತ್ತಿನ ಕಡೆಗೆ ಹೋಗಲಿರುವ ಕೊಡುಗೆ. ವಿದ್ಯಾರ್ಥಿ ಬದುಕು ಭೋಗದ ಬದುಕಲ್ಲ, ಇದು ತ್ಯಾಗದ ಬದುಕು. ಕಲ್ಪನಾಲೋಕದ ಬದುಕಿಗಿಂತ ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ. ಉತ್ತಮ ಮಿತ್ರರನ್ನು ಸಂಪಾದಿಸಿ ಗುಣಾತ್ಮಕ ಚಿಂತನೆಯನ್ನು ತಮ್ಮದಾಗಿಸಬೇಕು. ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯದಲ್ಲಿ ಪೋಷಕರು ವಿದ್ಯಾಭ್ಯಾಸ ಮುಂದುವರಿಯಲು ಬಿಡಬೇಕು. ಮಾತೃ ಋಣ, ಶಿಕ್ಷಕರ ಋಣ, ದೇಶದ ಋಣ ಸದಾ ನೆನಪಿನಲ್ಲಿರಬೇಕು’ ಎಂದು ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 10ನೇ ತರಗತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನವಿತ್ತರು.

ಸಾಧ್ವಿ ಶ್ರೀ ಮಾತಾನಂದಮಯಿಯವರು ಈ ಸಂದರ್ಭದಲ್ಲಿ ‘ಪ್ರಯತ್ನಕ್ಕೆ ತಕ್ಕ ಫಲವಿದೆ, ಸತತ ಅಭ್ಯಾಸದಿಂದ ಉನ್ನತ ಸಾಧನೆಯನ್ನು ಮಾಡಲು ಸಾಧ್ಯ, ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಕೆಟ್ಟದ್ದನ್ನು ದೂರೀಕರಿಸಿ ಒಳ್ಳೆಯದನ್ನು ತನ್ನದಾಗಿಸಿಕೊಳ್ಳಬೇಕೆಂದು ಶುಭ ನುಡಿದರು.

ಬೀಳ್ಕೊಡುಗೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಯಶವಂತ ವಿಟ್ಲ ಶುಭಹಾರೈಸಿದರು. ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ ಶೆಟ್ಟಿ ಎ, ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಎಸ್ ರೈ, ಪ್ರಾಥಮಿಕ-ಪ್ರೌಢ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮಾರಂಭದಲ್ಲಿ ಪಾಲ್ಗೊಂಡರು.