ಮನೆ-ಮನೆಗಳಲ್ಲಿ ತುಳು ಭಾಷೆ ಬೆಳೆಯಲಿ – 21ನೇ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಆಶೀರ್ವಚನ
“ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ರಾಜ್ಯ, ಕೇಂದ್ರ ಸರಕಾರಗಳಿಗೆ ಮನವಿ ಮಾಡಲಾಗಿದೆ. ತುಳುವರಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಯ ಕೊರತೆಯಿದೆ. ಅದನ್ನು ನಿವಾರಿಸಿ ಸಮ್ಮಿಳಿತ ಪ್ರಯತ್ನವಾಗಬೇಕು. ಮನೆ-ಮನೆಗಳಲ್ಲಿ ತುಳು ಭಾಷೆಯಲ್ಲೇ ಮಾತುಕತೆಯಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ 21ನೇ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದುಗ್ಗಲಡ್ಕ ಕುರಲ್ ತುಳುಕೂಟದ ಸಂಚಾಲಕ ಶ್ರೀ ಕೆ.ಟಿ. ವಿಶ್ವನಾಥ್ ಮಾತನಾಡಿ “ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ದಿಲ್ಲಿಯಲ್ಲಿ ಹೋರಾಡಬೇಕು. ಮಾತೃಬಾಷೆ ಮತ್ತು ಮಾತೃಶ್ರೀಯನ್ನು ಎಂದಿಗೂ ಮರೆಯಬಾರದು” ಎಂದರು.
ಸಮ್ಮೇಳನಾಧ್ಯಕ್ಷ ಶ್ರೀ ಮಲಾರು ಜಯರಾಮ ರೈ ಮಾತನಾಡಿ “ತುಳು ಭಾಷಿಗರ ಸಂಖ್ಯೆ ಕೋಟಿ ದಾಟಿದೆ. ವಿಸ್ತೀರ್ಣವೂ ಇದೆ. ತುಳುವಿನಲ್ಲಿ ಮಹಾಕಾವ್ಯಗಳಿವೆ. ಅನೇಕ ಸಾಹಿತ್ಯ ಪ್ರಕಟವಾಗಿದೆ. ತುಳು ಸಂಸ್ಕøತಿ ಮೇಳೈಸುತ್ತಿದೆ. ಎಲ್ಲ ರೀತಿಯ ಅರ್ಹತೆಗಳಿವೆ. ಆದರೆ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಮನ್ನಣೆಯಿಲ್ಲ. ತುಳು ಭಾಷಿಗರನ್ನು ದ.ಕ., ಉಡುಪಿ ಮತ್ತು ಕಾಸರಗೋಡಿನಲ್ಲಿ ವಿಂಗಡಿಸಿ ತೂಲೂವರು ಒಂದಾಗದಂತೆಯೂ ಮಾಡಲಾಗಿದೆ. ಇದನ್ನೆಲ್ಲ ಗಮನಿಸುವಾಗ ತುಳು ರಾಜ್ಯವನ್ನು ಕೇಳಬೇಕೆಂದೆನಿಸುವುದಿಲ್ಲವೇ? ತುಳು ಬಾಷೆಗೆ ಮನ್ನಣೆ ಸಿಕ್ಕಿದಲ್ಲಿ ಅನುದಾನ ಬರುತ್ತದೆ. ಈ ಬಗ್ಗೆ ಶಾಸಕರು, ಸಂಸದರು ಪ್ರಯತ್ನಿಸಿಲ್ಲ. ಅವರ ಪ್ರಯತ್ನ ಸಾಲದು” ಎಂದರು.
ತುಳು ಭಾಷೆಯ ಸೇವೆ ಸಲ್ಲಿಸಿದ ಪೂವರಿ ಪತ್ರಿಕೆಯ ಸಂಪಾದಕ ಶ್ರೀ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್, ತುಳು ಲಿಪಿ ಪ್ರಚಾರಕ ಶ್ರೀ ಜಿ.ವಿ.ಎಸ್. ಉಳ್ಳಾಲ, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಶ್ರೀ ಎಸ್.ಆರ್. ಬಂಡಿಮಾರು ಅವರಿಗೆ ಪೂಜ್ಯ ಶ್ರೀಗಳವರು ‘ತುಳುಸಿರಿ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಸಮ್ಮೇಳನದ ಸಂಚಾಲಕ ಡಾ. ವಸಂತಕುಮಾರ ಪೆರ್ಲ ಅವಲೋಕನ ಮಾಡಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬೆಳ್ತಂಗಡಿ ತಾಲೂಕು ಮೇಲ್ವಿಚಾರಕ ಶ್ರೀ ಯಶೋಧರ ಸಾಲ್ಯಾನ್ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿಯರಾದ ಕು| ಸವಿತಾ, ಶ್ರೀಮತಿ ವಸಂತಿ ಹಾಗೂ ಗ್ರಾಮವಿಕಾಸ ಯೋಜನೆಯ ಸೇವಾದೀಕ್ಷಿತೆ ಶ್ರೀಮತಿ ಪುಷ್ಪಾ ಪುಣಚ ಇವರು ಸನ್ಮಾನ ಪತ್ರ ವಾಚಿಸಿದರು. ಶ್ರೀ ಮಾತೇಶ್ ಭಂಡಾರಿ ವಂದಿಸಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ ಎ. ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕøತಕ ಕಾರ್ಯಕ್ರಮದಂಗವಾಗಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ‘ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮ್ಯೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.