“ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು.” – ಒಡಿಯೂರು ಶ್ರೀ

 

ಭಾರತೀಯತೆ ಅಂದರೆ ಸಂಸ್ಕೃತಿ. ಮಾತೃಹೃದಯ ಎಲ್ಲವನ್ನೂ ಅಪ್ಪಿಕೊಳ್ಳುತ್ತದೆ ಮತ್ತು ಒಪ್ಪಿಕೊಳ್ಳುತ್ತದೆ. ಮಕ್ಕಳ ಬಗ್ಗೆ ನಾವು ಕನಸನ್ನು ಕಾಣುವ. ಮಕ್ಕಳ ಜೊತೆ ಸಮಯ ಕಳೆಯಬೇಕು. ತಾಯಂದಿರು ಭಾಷೆಯ ಹಿಂದಿನ ಸಂಸ್ಕೃತಿಗೆ ಗಮನ ನೀಡಬೇಕು. ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು. ಜೀವನ ಮೌಲ್ಯ ತುಂಬುವ ಕೆಲಸ ತಾಯಿಯಿಂದ ಮನೆಯಲ್ಲೇ ಆಗಬೇಕು. ಆಗ ಮಾತ್ರ ಮಕ್ಕಳು ನಮ್ಮ ಜೊತಿಗಿರುತ್ತಾರೆ. ಭಾರತೀಯತೆಯನ್ನು ಅಳವಡಿಸಿಕೊಂಡರೆ ಮಾತ್ರ ನಿಜವಾದ ಬದುಕು ನಮ್ಮದಾಗುತ್ತದೆ. ಸಂಪತ್ತು – ಆಪತ್ತು ಎರಡಕ್ಕೂ ಕಾರಣ ನಮ್ಮ ನಾಲಿಗೆ. ಆದುದರಿಂದ ಮಾತಿನಲ್ಲಿ ಜಾಗರೂಕರಾಗಿರಬೇಕು. ಅಮ್ಮಾ ಎಂದರೆ ಆನಂದ. ಆಕೆಯಿಂದಲೇ ಆನಂದದ ಆರಂಭವಾಗಬೇಕು ಮತ್ತು ತಾಯಿ ಮಕ್ಕಳ ಬೆಸುಗೆಯಿಂಧ ಸಾರ್ಥಕ ಜೀವನ ಸಾಧ್ಯವಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ನಮ್ಮ ಪ್ರಯತ್ನದ ಕುರಿತು ನಮಗೆ ಅರಿವು ಇರಬೇಕು ಎಂದು ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಮಾತೃಪೂಜನಾ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು.

ಸಾಧ್ವಿ ಶ್ರೀ ಮಾತಾನಂದಮಯಿಯವರು ಈ ಸಂದರ್ಭದಲ್ಲಿ ‘ವಿಶ್ವವನ್ನು ಗೆಲ್ಲುವ ಪುರುಷರಿಗೆ ಜನ್ಮನೀಡುವವಳು ತಾಯಿ, ಆಕೆಯನ್ನು ತ್ಯಾಗಮಯಿ-ಕರುಣಾಮಯಿ ಎಂದು ಕರೆಯುತ್ತಾರೆ. ಭಗವದ್ಗೀತೆಯು ಆಕೆಯನ್ನು ವೇದಮಾತೆ – ಗೋಮಾತೆ ಎಲ್ಲದಕ್ಕೂ ತಾಯಿ ಸ್ಥಾನವನ್ನು ಕಲ್ಪಿಸಿದ ದೇಶ ಭಾರತ. ಮಕ್ಕಳಿಗೆ ಧಾರ್ಮಿಕತೆಯ ಪರಿಚಯವನ್ನು ತಾಯಿ ಮಾಡಿಕೊಡಬೇಕು. ಎಲ್ಲ ಒಳ್ಳೆಯ ಚಿಂತೆನೆಗಳನ್ನು ಕೊಡುವ ಜವಾಬ್ದಾರಿ ತಾಯಿಯ ಮೇಲಿದೆ ಎಂದು ಶುಭ ನುಡಿದರು.

ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಮಾತೃಪೂಜನಾ ಕಾರ್ಯಕ್ರಮವನ್ನು ಅರ್ಚಕರಾದ ಶಿವನಾರಾಯಣ ಭಟ್ ನಡೆಸಿಕೊಟ್ಟರು. ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ ಶೆಟ್ಟಿ ಎ, ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಎಸ್ ರೈ, ಮಾತೃಮಂಡಳಿ ಸಂಚಾಲಕಿ ಶ್ರೀಮತಿ ಹರಿಣಿ ಪಕಳ, ಉಪಸಂಚಾಲಕಿ ಶ್ರೀಮತಿ ಲತಾದೇವಿ, ಪ್ರಾಥಮಿಕ-ಪ್ರೌಢ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮಾರಂಭದಲ್ಲಿ ಪಾಲ್ಗೊಂಡರು. ಶಿಕ್ಷಕಿ ಶ್ರೀಮತಿ ವೇದಾವತಿ ನಿರ್ವಹಿಸಿ ಶ್ರೀಮತಿ ನಾಗವೇಣಿ ವಂದಿಸಿದರು.