“ಕಾನೂನಿನಲ್ಲಿ ಕಠಿಣತೆ ಇಲ್ಲದಿದ್ದರೆ ಅನಾಹುತ ಹೆಚ್ಚಾಗುತ್ತದೆ”- ಒಡಿಯೂರು ಶ್ರೀ

“ರಾಮಾಯಣ, ಮಹಾಭಾರತದಂತಹ ಪುರಾಣಗಳು ಯಕ್ಷಗಾನ ಕಲೆಯ ಮೂಲಕ ಹಳ್ಳಿಗಳ ಜನರನ್ನು ಮುಟ್ಟುತ್ತವೆ. ಯಕ್ಷಗಾನದ ಮೂಲಕ ಪ್ರಸಿದ್ಧಿ ಪಡೆದ ಅರ್ಹರಿಗೆ ಪ್ರಶಸ್ತಿ ನೀಡುವುದು ಅರ್ತಪೂರ್ಣವಾಗಿದೆ. ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳಲ್ಲಿ ಬರುವ ಅನೇಕ ರಕ್ಕಸರನ್ನು ನಾವು ಕಲೆಯ ಪ್ರೀತಿಯಿಂದ ನೋಡುತ್ತೇವೆ. ಇಂದಿಗೂ ದೇಶದಲ್ಲಿ ಅನೇಕ ಜಾತಿಯ ರಕ್ಕಸರು ಇದ್ದಾರೆ. ಸಜ್ಜನರಿಂದ ರಕ್ಕಸರ ಸಂಹಾರವೂ ಆಗುತ್ತಿರಬೇಕು. ಕಾನೂನಿನಲ್ಲಿ ಕಠಿಣತೆ ಇಲ್ಲದಿದ್ದರೆ ಅನಾಹುತ ಹೆಚ್ಚು ಹೆಚ್ಚು ಸಂಭವಿಸುತ್ತದೆ. ಕಾನೂನು ಬಲಿಷ್ಠಗೊಂಡಾಗ ದೇಶ ಸುಭದ್ರವಾಗುತ್ತದೆ. ತುಳು ಭಾಷೆಯನ್ನು 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಲು ಆಸಕ್ತಿ ತೋರ್ಪಡಿಸಿದ ಮಲಯಾಳಿ ಸಂಸದರ ತುಳು ಪ್ರೇಮಕ್ಕೆ ತುಳುವರೆಲ್ಲರೂ ಅಭಿನಂದನೆ ಸಲ್ಲಿಸಲೇಬೇಕು. ತುಳುನಾಡಿನ ಸಂಸದರು ಇದೇ ರೀತಿ ಧ್ವನಿಯೆತ್ತಿದರೆ ಈ ಕಾರ್ಯ ಯಶಸ್ವಿಯಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂದರ್ಭ ಜರಗಿದ ಬೋಳಾರ ನಾರಾಯಣ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನಗೈದರು.

ಬೋಳಾರ ನಾರಾಯಣ ಶೆಟ್ಟಿ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಶ್ರೀ ಕುಂಬ್ಳೆ ಸುಂದರ ರಾವ್ ಅವರಿಗೆ ಪೂಜ್ಯ ಶ್ರೀಗಳವರು ಬೋಳಾರ ನಾರಾಯಣ ಶೆಟ್ಟಿ ಪ್ರಸಸ್ತಿಯನ್ನು ಪ್ರದಾನ ಮಾಡಿದರು.

ಕುಂಬ್ಳೆ ಸುಂದರ ರಾವ್ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ “ಯಕ್ಷಗಾನದಲ್ಲಿ ವ್ಯಾಕರಣ ಬದ್ಧತೆ, ಸುಂದರ ಪದ ಬಳಕೆ ಪ್ರಯೋಗದಿಂದಲೇ ತಮ್ಮ ಪಾತ್ರಕ್ಕೆ ಜೀವಂತಿಕೆ ತುಂಬುತ್ತಿದ್ದ ಬೋಳಾರ ನಾರಾಯಣ ಶೆಟ್ಟಿಯವರು ಮೇರು ಕಲಾವಿದ. ಹೃದಯವಂತಿಕೆಯುಳ್ಳ ಪರಿಪೂರ್ಣ ಕಲಾವಿದರಾಗಿದ್ದರು’ ಎಂದರು.

ವೇದಿಕೆಯಲ್ಲಿ ಶ್ರೀ ಗುರುಚರಿತಾಮೃತ ಪ್ರವಚನಗೈದ ಡಾ. ಸೋಂದಾ ಭಾಸ್ಕರ ಭಟ್, ಪ್ರತಿಷ್ಠಾನದ ಸಂಚಾಲಕ ಶ್ರೀ ಬೋಳಾರ ಕರುಣಾಕರ ಶೆಟ್ಟಿ, ಸತ್ಸಂಗ ಸಮಿತಿಯ ಸಂಚಾಲಕ ಶ್ರೀ ವಾಸುದೇವ ಆರ್. ಕೊಟ್ಟಾರಿ ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮೀನಾರಾಯಣ ರೈ ಹರೇಕಳ ಪ್ರಶಸ್ತಿ ಪತ್ರ ವಾಚಿಸಿದರು. ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.