ಇದ್ದುದರಲ್ಲಿ ತೃಪ್ತಿ ಇರಲಿ; ಸಂತೃಪ್ತಿಯೇ ಸಂಪತ್ತು –ಒಡಿಯೂರು ಶ್ರೀ
“ಜ್ಞಾನ ಇಲ್ಲದ ಬದುಕು ಬದುಕಲ್ಲ. ಸಮಸ್ಯೆ ಬಂದರೆ ಅನುಭವ ಬರುತ್ತದೆ. ಅನುಭವದಿಂದ ನಮಗೆ ಜ್ಞಾನ ಲಭಿಸುತ್ತದೆ. ಲೌಕಿಕ ಜ್ಞಾನದ ಜೊತೆಗೆ ಅಲೌಕಿಕ ಜ್ಞಾನವೂ ನಮಗೆ ಅವಶ್ಯಕ. ಅದನ್ನೇ ಕಠೋಪನಿಷತ್ತಿನಲ್ಲಿ ಪರಾ ವಿದ್ಯೆ ಮತ್ತು ಅಪರಾ ವಿದ್ಯೆ ಎಂಬುದಾಗಿ ವಿಂಗಡಿಸಿ ತಿಳಿಸಿದ್ದಾರೆ. ಅಪರಾ ವಿದ್ಯೆಯೇ ಅಲೌಕಿಕ ವಿದ್ಯೆ. ಅರ್ಥಾತ್ ಅಧ್ಯಾತ್ಮ ವಿದ್ಯೆ. ಆ ಮೂಲಕ ನಾವು ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಜರಗಿದ ಶ್ರೀ ಶಾರದಾ ಪೂಜೆಯೊಂದಿಗೆ ನಡೆದ ಶ್ರೀ ಸರಸ್ವತಿ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದ ಪೂಜ್ಯ ಶ್ರೀಗಳವರು “ಜ್ಞಾನವನ್ನು ಕರುಣಿಸುವ ದೇವತೆ ಶಾರದೆಯ ಪೂಜೆಯನ್ನು ಶರದೃತುವಿನಲ್ಲಿ ನಾವು ಮಾಡುತ್ತೇವೆ. ಈ ಸಮಯದಲ್ಲಿ ಆಕಾಶವು ಶುಭ್ರವಾಗಿರುತ್ತದೆ. ಹರಿಯುವ ನದಿಯೂ ಪರಿಶುದ್ಧವಾಗಿರುತ್ತದೆ. ಅದೇ ರೀತಿ ನಾವು ಸಹ ಪರಿಶುದ್ಧ ಮನಸ್ಸಿನಿಂದ ದೇವಿಯ ಆರಾಧನೆ ಮಾಡುವುದರಿಂದ ಸತ್ಫಲ ಪ್ರಾಪ್ತಿಯಾಗುತ್ತದೆ. ಇದ್ದುದರಲ್ಲಿ ತೃಪ್ತಿ ಇರಬೇಕು. ಸಂತೃಪ್ತಿಯೇ ಸಂಪತ್ತು. ವಿಶ್ವವನ್ನೇ ವ್ಯಾಪಿಸಿರುವ ಓಂಕಾರವನ್ನು ನಾಭಿಯಿಂದ ಹೇಳಿದರೆ ಒಳ್ಳೆಯದು. ಆಗ ನಮಗೆ ಓಂಕಾರದ ಮಹತ್ತ್ವ ಅನುಭವವಾಗುತ್ತದೆ. ಓಂಕಾರ ಸ್ವರೂಪಿಣಿಯಾದ ದೇವಿಯ ಅನುಗ್ರಹದ ಮೂಲಕ ಕೋವಿಡ್ 19 ಕೊರೋನಾ ಮಹಾಮಾರಿಯಿಂದ ವಿಶ್ವವೇ ಮುಕ್ತವಾಗಲಿ” ಎಂದರು.
ಈ ಸುಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಸರಸ್ವತಿ ಹವನ ನಡೆಯಿತು.