ತಮಸೋಮಾ ಜ್ಯೋತಿರ್ಗಮಯ – ಒಡಿಯೂರು ಶ್ರೀ
ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ ವೈರಸ್(ಕೋವಿಡ್-19) ಸೋಂಕಿನಿಂದ ಹಲವರು ಬಳಲುತ್ತಿದ್ದು, ಕೆಲವರು ಮೃತಪಟ್ಟಿರುವುದು ವಿಷಾಧನೀಯ. ಇದೀಗ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈಗೊಂಡಿರುವ ಅತ್ಯಮೂಲ್ಯವಾದ ದೀಪ ಉರಿಸುವ ಕಾರ್ಯಕ್ರಮ ಪ್ರಶಂಸನೀಯ. ತ್ರೇತಾ, ದ್ವಾಪರ ಯುಗದಲ್ಲಿಯೂ ರಾಕ್ಷಸರ ತಾಮಸಗುಣವು ಹೆಚ್ಚಾದಾಗ ಅದರ ನಿವಾರಣೆಗೆ ಬೆಳಕನ್ನು ಹುಡುಕಿರುವುದು ಸಹಜ. ಇದಕ್ಕೆ ಪೂರಕವಾಗಿ ಕೋಟಿ ಕೋಟಿ ಜನರು ದೀಪ ಉರಿಸುವ ಮೂಲಕ ಭಗವದ್ ಪ್ರಾರ್ಥನೆಯೊಂದಿಗೆ ಬಲತುಂಬಿ ಅಂಧಕಾರವು ತೊಲಗಲಿ.
ಸೂಚಿಸಿದ ಕೆಲವೊಂದು ವಿಚಾರಗಳಿಗೆ ಸ್ಪಂದಿಸಿ, ಜನರೆಲ್ಲಾ ಮನೆಗಳಲ್ಲಿಯೇ ಉಳಿದು, ಅಂತರವನ್ನು ಕಾಪಾಡಿಕೊಳ್ಳೋಣ. ಶ್ರಮಿಸುವ ವೈದ್ಯರು, ದಾದಿಯರು, ಆರಕ್ಷಕರಿಗೆ ಸರ್ವರೂ ಸಹಕರಿಸಿದಾಗ ಸೋಂಕಿನ ನಿಯಂತ್ರಣ ಸುಲಭ ಸಾಧ್ಯ. ಮುಂಬರುವ ಸೌರಮಾನ ಯುಗಾದಿಗೆ ದುಃಖ-ದುಮ್ಮಾನಗಳು ನಿವಾರಣೆಯಾಗಿ ಸುದೃಢವಾದ ದೇಶ ನಿರ್ಮಾಣವಾಗಲಿ, ವಿಶ್ವಕಲ್ಯಾಣವಾಗಲಿ. ಶಾರ್ವರೀ ಸಂವತ್ಸರವು ಸಂಪದ್ಭರಿತವಾಗಲಿ.
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು,
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್