ಶ್ರೀ ಸಂಸ್ಥಾನದಲ್ಲಿ ಹೆಣ್ಣು ಮಗಳೊಬ್ಬಳು ಯೋಗಿನಿಯಾದುದು ಗುರು ಸಂಕಲ್ಪ ಸಿದ್ಧಿಯ ವಿಶಿಷ್ಟ ಸಂದÀರ್ಭ. ಪೂರ್ವಾಶ್ರಮದ ಶಾರಿಕಾ ಅವರು ತಮ್ಮ ಕುಟುಂಬದ ಪರಂಪರೆಗಳ ಪ್ರಭಾವದಿಂದ ಆಧ್ಯಾತ್ಮ ಪಥಕ್ಕೆ ಆಕರ್ಷಿಸಲ್ಪಟ್ಟರು. ಕಾನೂನು ಪದವೀಧರೆಯಾಗಿ, ರಾಜ್ಯ ಮಟ್ಟದ ಸಂಗೀತ ಪ್ರತಿಭೆಯಾಗಿ ಅವರು ಗುರುತಿಸಲ್ಪಟ್ಟವರು. ತನ್ನ ಮನೆ ಸಮೀಪದ ಶ್ರೀ ಗುರುದೇವ ಸಂಸ್ಥಾನದ ಆಧ್ಯಾತ್ಮಿಕ ಚಟುವಟಿಕೆಗಳಿಂದ ಪ್ರಭಾವಿತರಾದ ಅವರು ಭಗವದುಪಾಸನೆಯ ಭಕ್ತಿ ಪಂಥಕ್ಕೆ ಒಲಿದದ್ದು ದೈವ ಸಂಕಲ್ಪ. ಈ ಆಧ್ಯಾತ್ಮಿಕ ಪ್ರೀತಿಯೇ ಅವರನ್ನು ಸಾಧನಾ ಶೀಲ ಬದುಕಿಗೆ ಹೆಜ್ಜೆಯಿಡಲು ಪ್ರೇರಣೆ ನೀಡಿತು.

‘ಭಕ್ತಿ ಪಥದಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಸಲ್ಲದು. ಪುರುಷನೋರ್ವ ವೈರಾಗ್ಯ ಜೀವನಕ್ಕಿಳಿದು ಆತ್ಮ ಸಂಧಾನವನ್ನು ಮಾಡಿ, ಆ ಮೂಲಕ ಪರತತ್ವವನ್ನು ಕಂಡುಕೊಳ್ಳುವುದು ಯುಕ್ತವೇ ಹೌದಾದರೆ ಸ್ವಯಂ ಪ್ರೇರಣೆ ಹಾಗೂ ಆಂತರಿಕ ಹಂಬಲದಿಂದ ಪರಿತಪಿಸುವ ಹೆಣ್ಣು ಈ ಸನ್ಮಾರ್ಗದಿಂದ ವಂಚಿತಳಾಗಬಾರದು’ ಎನ್ನುವುದು ಶ್ರೀಗಳ ದಿಟ್ಟ ನಿಲುವು. ಅಂತೆಯೇ ಶಾರಿಕಾ ಅವರಿಗೆ ತಾರೀಕು 18-11-1997ರಂದು ಗಾಣಗಾಪುರದ ದತ್ತ ಸನ್ನಿಧಿಯಲ್ಲಿ ಶ್ರೀಗಳು ಆಧ್ಯಾತ್ಮ ಜೀವನದ ದೀಕ್ಷೆ ನೀಡಿ, ಶ್ರೀ ಮಾತಾನಂದಮಯೀ ಎಂದು ನಾಮಕರಣ ಮಾಡಿದರು. ಸಾಧ್ವೀ ಮಾತಾನಂದಮಯೀ ಅವರು ಭಕ್ತಿ ಪಂಥದ ರಾಗ ರಹಿತ ಜೀವನದ ಅವಧೂತ್ ಯೋಗಿನಿಯಾಗಿದ್ದಾರೆ.