ಐ.ಟಿ.ಐ.ನ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ

“ಶಿಸ್ತು ಮತ್ತು ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ಸಾಧ್ಯ”
ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ ಒಡಿಯೂರು ಶ್ರೀ ಆಶೀರ್ವಚನ
“ನಮ್ಮನ್ನು ನಾವು ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂಸ್ಕಾರಯತ ಜೀವನದಿಂದ ಆದರ್ಶ ಬದುಕು ನಮ್ಮದಾಗಬಹುದು. ಜೀವನದಲ್ಲಿ ಕೌಶಲ್ಯವೂ ಅಗತ್ಯ. ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ತರಬೇತಿಯ ಜೊತೆಗೆ ಕೌಶಲ್ಯವನ್ನು ಮೈಗೂಡಿಸಿಕೊಳ್ಳಿ. ಶಿಸ್ತು ಮತ್ತು ಶ್ರದ್ಧೆಯೊಂದಿಗೆ ಆತ್ಮವಿಶ್ವಾಸದಿಂದ ಧರ್ಮ ಮಾರ್ಗದಲ್ಲೇ ಜೀವನ ನಡೆಸಿದರೆ ಯಶಸ್ಸು ಸಾಧ್ಯ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕನ್ಯಾನದ ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ(ಐ.ಟಿ.ಐ)ಯ ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ತರಬೇತು ಪಡೆದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ “ಸ್ವಾವಲಂಬಿ ಬದುಕಿಗೆ ಐ.ಟಿ.ಐ ಶಿಕ್ಷಣ ಪೂರಕವಾಗಿದೆ. ಸತ್‍ಚಿಂತನೆಯೊಂದಿಗೆ ಸತ್ಪ್ರಜೆಗಳಾಗಿ ಬಾಳಿ” ಎಂದರು.
ಮುಖ್ಯ ಅತಿಥಿಗಳಾದ ಶ್ರೀ ದೇವಿ ಪ್ರೌಢಶಾಲೆ ಪುಣಚದ ನಿವೃತ್ತ ಮುಖ್ಯಶಿಕ್ಷಕಿ ಶ್ರೀಮತಿ ಗಂಗಮ್ಮ ಹೆಚ್. ಶಾಸ್ತ್ರಿ ಇವರು ಮಾತನಾಡಿ “ಪ್ರವೇಶ ಮತ್ತು ಬೀಳ್ಕೊಡುಗೆ ಜೀವನದಲ್ಲಿ ನಿತ್ಯ, ನಿರಂತರ. ಗ್ರಾಮೀಣ ಪ್ರದೇಶದ ಅದರಲ್ಲಿಯೂ ಆರ್ಥಿಕವಾಗಿ ತೀರ ಹಿಂದುಳಿದವರ್ಗದವರೂ ಕೂಡ ಐ.ಟಿ.ಐ ಶಿಕ್ಷಣ ಪಡೆದು ಕೌಶಲ್ಯಭರಿತರಾಗಿ ಉದ್ಯೋಗಪಡೆಯಬಹುದು. ಆ ಮೂಲಕ ಸಾರ್ಥಕಜೀವನವನ್ನು ನಡೆಸಬಹುದು” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕನ್ಯಾನ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಯಶಸ್ವಿನಿ ಆರ್. ಇವರು ಮಾತನಾಡಿ “ಸ್ವಾವಲಂಬಿ ಜೀವನಕ್ಕೆ ಒಡಿಯೂರು ಕ್ಷೇತ್ರದ ಕೊಡುಗೆ ಅಪಾರ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿನ ಬಗ್ಗೆ ಸ್ವಾಮೀಜಿಯವರಿಗೆ ಇರುವ ಗೌರವವನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳು ಮಾನವೀಯ ಗುಣಧರ್ಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಗತ್ತಿನಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಬದುಕಿ” ಎಂದರು.
ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಕರುಣಾಕರ ಎನ್.ಬಿ ಪ್ರಾಸ್ತವನೆಗೈದು ಸ್ವಾಗತಿಸಿದರು, ತರಬೇತುದಾರರಾದ ಶ್ರೀ ಸಂಪ್ರೀತ್ ಕೆ. ವಂದಿಸಿದರು. ಶ್ರೀ ಶಿವಪ್ರಸಾದ ಎಸ್. ಕಾರ್ಯಕ್ರಮ ನಿರೂಪಿಸಿದರು.