ಮುದ್ದುಕೃಷ್ಣ ವೇಷಸ್ಪರ್ಧೆ
“ಕೃಷ್ಣವೇಷ ಹಾಕುವ ಜೊತೆಗೆ ಕೃಷ್ಣನ ಆದರ್ಶವನ್ನು ಬೆಳೆಸಬೇಕು” – ಒಡಿಯೂರು ಶ್ರೀ
“ತಾಯಿ ಮಕ್ಕಳ ಸಂಬಂಧದ ವಿಚಾರಗಳನ್ನು ಕೃಷ್ಣಲೀಲೆ ತಿಳಿಸುತ್ತದೆ. ಇವರ ನಡುವಿನ ಪ್ರೀತಿಯಲ್ಲಿ ಯಾವುದೇ ಕಲ್ಮಶಗಳಿರುವುದಿಲ್ಲ. ನಾವು ಮಗುವಿನಿಂದ ಎಲ್ಲವನ್ನು ಕಲಿಯಬಹುದು. ಮಗುವಿನ ಮನಸ್ಸೂ ಹಾಗೆ ಪರಿಶುದ್ದವಾಗಿರುತ್ತದೆ. ಕೃಷ್ಣನ ಸಂದೇಶದಂತೆ ಅವರವರ ಮನಸ್ಸೇ ಮಿತ್ರರು ಮತ್ತು ಶತ್ರುಗಳು. ಸತ್ಸಂಗಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮನಸ್ಸಿನ ನಿಯಂತ್ರಣ ಸಾಧ್ಯ. ಆ ಮೂಲಕ ನಿಷ್ಕಲ್ಮಶಗಳೆಲ್ಲವೂ ದೂರಾಗಿ ನಮ್ಮ ದೇಹವೂ ಆಲಯವಾಗುವುದು. ಮಾನಸಿಕ, ಶಾರೀರಿಕ ಕ್ಷೋಭೆಗಳಿಗೆ ಪರಿಹಾರ ಶ್ರೀಮದ್ಭಗವದ್ಗೀತೆಯಲ್ಲಿದೆ. ವೇಷ ಹಾಕುವ ಜೊತೆಗೆ ಕೃಷ್ಣನ ಆದರ್ಶವನ್ನು ಮಕಳಲ್ಲಿ ಬೆಳೆಸಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜೈ ಗುರುದೇವ ಕಲಾಕೇಂದ್ರದ ವತಿಯಿಂದ ಆಯೋಜಿಸಿದ್ದ ಮುದ್ದುಕೃಷ್ಣ ವೇಷಸ್ಪರ್ಧೆಯನ್ನು ದೀಪೋಜ್ವಲನಗೊಳಿಸಿ ಚಾಲನೆ ನೀಡಿ ಶುಭಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
ಮುದ್ದುಕೃಷ್ಣ ವೇಷ ಸ್ಪರ್ಧೆಯ ಗುರುಕುಲದ ವಿಭಾಗದಲ್ಲಿ ಬೇಬಿ| ಶ್ರಾವ್ಯ ಶೆಟ್ಟಿ ಪಾವೂರು ಪ್ರಥಮ ಹಾಗೂ ಮಾ| ಹಾರ್ದಿಕ್ ನಾಯಕ್ ಮಿತ್ತನಡ್ಕ ಇವರು ದ್ವಿತೀಯ, ಕಿರಿಯ ಪ್ರಾಥಮಿಕ ಶಾಲಾ (1 ಮತ್ತು 2ನೇ ತರಗತಿ) ವಿಭಾಗದಲ್ಲಿ ಕು| ಧನ್ವಿ ಟಿ. ಗೋಳಿಕಟ್ಟೆ ಪ್ರಥಮ ಹಾಗೂ ಕು| ಸಾನ್ನಿಧ್ಯ ಕಾಣಿಚ್ಚಾರು ದ್ವಿತೀಯ ಬಹುಮಾನ ಪಡೆದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜೈ ಗುರುದೇವ ಕಲಾಕೇಂದ್ರ ಅಧ್ಯಕ್ಷ ಶ್ರೀ ಟಿ. ಸುಬ್ರಹ್ಮಣ್ಯ ಒಡಿಯೂರು ಇವರು ಪೂಜ್ಯ ಶ್ರೀಗಳವರಿಗೆ ಫಲಪುಷ್ಪ ಸಮರ್ಪಿಸಿದರು. ಒಡಿಯೂರು ಶಾಲಾ ಶಿಕ್ಷಕ ಶ್ರೀ ಶೇಖರ ಶೆಟ್ಟಿ ಬಾಯಾರು ತೀರ್ಪುಗಾರರಾಗಿ ಸಹಕರಿಸಿದರು. ಒಡಿಯೂರ್ದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.