×
ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ – Odiyoor Shree Gurudevadatta Samsthanam

ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ

“ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ”
ಒಡಿಯೂರು ಶ್ರೀಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬಯಿ ಘಟಕದ 21ನೇ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಮುಂಬಯಿ, ಜು.24: “ಸುಖ ದುಃಖಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮಿಕತೆ ಬೇಕು. ಸುಖವೆಂದರೆ ಮನಸ್ಸಿನ ಒಂದು ಸ್ಥಿತಿಯಾಗಿದೆ. ಮನಸ್ಸನ್ನು ಏಕಾಗ್ರತೆಯಲ್ಲಿಟ್ಟು ಆಧ್ಯಾತ್ಮಿಕದ ವಿಚಾರಧಾರೆಗಳನ್ನು ನಮ್ಮಲ್ಲಿ ಇರಿಸಿಕೊಂಡಾಗ ಧರ್ಮದ ಕಡೆಗೆ ನಡೆಯಲು ಸಾಧ್ಯವಾಗುತ್ತದೆ. ಯುವ ಸಮುದಾಯ ಜಾಗೃತರಾದಾಗ ದೇಶ ಸದೃಢವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕುರ್ಲಾ(ಪೂ.)ದ ಬಂಟರ ಭವನ ದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬಯಿ ಘಟಕದ 21ನೇ ವಾರ್ಷಿಕೋತ್ಸವ ಮತ್ತು ಗುರುಬಂಧುಗಳ ಸಮಾವೇಶದಲ್ಲಿ ಸೇವಾಕರ್ತರಿಗೆ ಶ್ರೀ ಗುರುದೇವಾನುಗ್ರಹ ಪ್ರಶಸ್ತಿಯನ್ನು ನೀಡಿ ಹರಸಿ ಆಶೀರ್ವಚನಗೈದರು.
ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ “ವ್ಯಾಯಾಮದಿಂದ ನಮ್ಮ ಆರೋಗ್ಯ ಉತ್ತಮವಾಗುತ್ತದೆ. ಹಾಗೆಯೇ ಗುರು ಸೇವೆಯಿಂದ ಆತ್ಮ ಪರಿಶುದ್ಧವಾಗುತ್ತದೆ. ಗುರುವಿನಡೆಗೆ ನಾವು ಎರಡು ಹೆಜ್ಜೆ ಇಟ್ಟರೆ ಗುರು ನಮ್ಮ ಕಡೆಗೆ 10 ಹೆಜ್ಜೆಗಳನ್ನು ಇಡುತ್ತಾರೆ. ಗುರುವನ್ನು ಅರಿತವನಿಗೆ ಮಾತ್ರ ಗುರು ಅನುಗ್ರಹ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ನಾವು ಗುರುವಿಗೆ ಶರಣಾಗಬೇಕು. ಆಗ ನಮಗೆ ಯಶಸ್ವಿಯಾಗುತ್ತದೆ. ಪರರ ಕಷ್ಟ-ಸುಖದಲ್ಲಿ ನಮ್ಮ ಬದುಕನ್ನು ಮೀಸಲಿಟ್ಟಾಗ ಅಮೃತತತ್ವದ ನಡೆ ನಮ್ಮದಾಗುತ್ತದೆ. ಕೊರೋನಾ ಸಂದರ್ಭದಲ್ಲಿ ಕೂಡ ಪೂಜ್ಯ ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಬಹಳ ಅರ್ಥಪೂರ್ಣವಾಗಿ 60 ಕಾರ್ಯಕ್ರಮಗಳನ್ನು ನಡೆಸಿರುವ ಮುಂಬೈಯ ಭಕ್ತರಿಗೆ ಗುರುಗಳ ಅನುಗ್ರಹ ಪ್ರಾಪ್ತಿ ಆಗಿದೆ. ಶ್ರೀಕ್ಷೇತ್ರ ಅಭಿವೃದ್ಧಿಯಲ್ಲಿ ಮುಂಬೈ ಭಕ್ತರ ಸಹಕಾರ ಅನನ್ಯ. ಬದುಕು ಸಾರ್ಥಕತೆಯನ್ನು ಹೊಂದಲು ಗುರುವಿನ ಗುಲಾಮರಾಗೋಣ” ಎಂದರು.
ವಿಶೇಷ ಅತಿಥಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಶ್ರೀ ಚಂದ್ರಹಾಸ ಕೆ.ಶೆಟ್ಟಿ ಮಾತನಾಡಿ, “ಪೂಜ್ಯ ಶ್ರೀಗಳವರ ಚಿಂತನೆಗಳು ಸಮಾಜವನ್ನು ಬಲಿಷ್ಠಗೊಳಿಸಿದೆ. ಬಂಟರ ಸಂಘದಲ್ಲಿ ಮಹತ್ವದ ಯೋಜನೆಗಳು ರೂಪುಗೊಂಡಿದೆ. ಅದೆಲ್ಲವೂ ಸುಲಲಿತವಾಗಿ ನಡೆಯಲು ಪೂಜ್ಯ ಸ್ವಾಮೀಜಿಯವರ ಆಶೀರ್ವಾದವೇ ಕಾರಣ” ಎಂದು ನುಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಮಾತನಾಡಿ ನಾನು ಸಮಾಜದ ಯಾವುದೇ ಪದವಿಯಲ್ಲಿದ್ದರೂ ಕೂಡ ಒಡಿಯೂರಿನ ಪರಮಭಕ್ತನಾಗಿ ಅಲ್ಲಿಯ ಸೇವಾಕರ್ತನಾಗಿದ್ದೇನೆ. ಮುಂಬೈಯ ನಗರದಲ್ಲಿ ನಾವೆಲ್ಲರೂ ಜಾತಿ-ಮತವನ್ನು ಮರೆತು ಒಳ್ಳೆಯ ಜೀವನವನ್ನು ನಡೆಸುತ್ತಾ ಬಂದಿದ್ದೇವೆ. ನಮ್ಮೆಲ್ಲ ಬದುಕು ಯಶಸ್ವಿಯಾಗುವುದಕ್ಕೆ ಪೂಜ್ಯ ಶ್ರೀಗಳವರು ಸದಾ ಅನುಗ್ರಹಿಸಲಿ” ಎಂದರು.
ಮುಂಬೈನ ಹೇರಂಬ ಇಂಡಸ್ಟ್ರೀಸ್ ಲಿ.ನ ಸಿ.ಎಂ.ಡಿ. ಶ್ರೀ ಸದಾಶಿವ ಕೆ.ಶೆಟ್ಟಿ ಕೂಳೂರು ಕನ್ಯಾನ ಇವರು ಮಾತನಾಡುತ್ತಾ “ಸದ್ಗುರು ನಿತ್ಯಾನಂದ ಬಾಬರ ಆದರ್ಶವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅದರಿಂದ ನಮ್ಮೊಳಗೆ ಜ್ಞಾನದ ಜ್ಯೋತಿ ಬೆಳಗಲು ಸಾಧ್ಯವಾಗುತ್ತದೆ. ಒಡಿಯೂರು ಶ್ರೀಗಳು ಎಲ್ಲಾ ಭಕ್ತರನ್ನು ಸಮಾನ ರೀತಿಯಲ್ಲಿ ಕಂಡವರು. ಅವರ ಜ್ಞಾನದ ಬೆಳಕು ನಮ್ಮನ್ನು ಪ್ರಕಾಶಮಾನವಾಗಿಸಲಿ” ಎಂದರು.
ಬಿ.ಎಸ್.ಕೆ.ಬಿ. ಅಸೋಸಿಯೇಷನ್, ಮುಂಬೈ ಇದರ ಅಧ್ಯಕ್ಷರು, ಸಾಯನ್ ಗೋಕುಲ ಮಂದಿರ ನವೀಕರಣದ ರೂವಾರಿಗಳೂ ಆದ ಡಾ. ಸುರೇಶ್ ರಾವ್ ಮಾತನಾಡುತ್ತಾ “ನಾನು ಕಟೀಲು ಗ್ರಾಮದಲ್ಲಿ ಬೆಳೆದವನು. ಕಟೀಲು ಕ್ಷೇತ್ರಕ್ಕೂ ಒಡಿಯೂರು ಕ್ಷೇತ್ರಕ್ಕೂ ಅನನ್ಯವಾದ ಸಂಬಂಧವಿದೆ ಎನ್ನುವುದನ್ನು ನಾನು ಅರಿತುಕೊಂಡವನು. ಒಡಿಯೂರು ಶ್ರೀಗಳವರ ಮೃದು ಮಾತುಗಳು, ಅವರ ಚಿಂತನೆಗಳು ಭಕ್ತರನ್ನು ಜಾಗ್ರತೆಗೊಳಿಸಿದೆ” ಎಂದರು.
ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಉಮಾ ಕೃಷ್ಣ ಶೆಟ್ಟಿ ಮಾತನಾಡುತ್ತಾ “ಗುರು ಸೇವೆಗಳು ಆಡಂಬರವಾಗಿರದೆ ಭಕ್ತಿಯಿಂದ ತುಂಬಿಕೊಂಡಾಗ ಗುರು ನಮ್ಮನ್ನು ಅನುಗ್ರಹಿಸುತ್ತಾರೆ. ಪೂಜ್ಯ ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮವನ್ನು ನಾನು ಕೇಳಿ ತಿಳಿದಿದ್ದೇನೆ. ಕಾರ್ಯಕ್ರಮದ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ. ಆಧ್ಯಾತ್ಮಿಕದ ಒಲವನ್ನು ಭಕ್ತರಲ್ಲಿ ತುಂಬಿಸಿಕೊಂಡಿದ್ದಾರೆ. ಗುರುಗಳ ಆಶೀರ್ವಾದದ ಸೇವೆ ಎಂದು ಗುರುಭಕ್ತರು ಮಾಡಿದ್ದಾರೆ. ನಮ್ಮೆಲ್ಲರಲ್ಲಿ ಕೂಡ ಗುರು ಭಕ್ತಿ ತುಂಬಿಕೊಳ್ಳಲಿ. ಪೂಜ್ಯ ಶ್ರೀಗಳು ನಮ್ಮನ್ನೆಲ್ಲರನ್ನು ಅನುಗ್ರಹಿಸಲಿ” ಎಂದು ನುಡಿದರು.
ಸಾಲಿಸಿಟರ್ ಎಡ್ವೊಕೇಟ್ ಸಜಿತ್ ಆರ್. ಸುವರ್ಣ ಮಾತನಾಡುತ್ತಾ “ನಾನು ಈ ಎತ್ತರಕ್ಕೆ ಬೆಳೆದು ಬರುವುದಕ್ಕೆ ಪೂಜ್ಯ ಶ್ರೀಗಳ ಆಶೀರ್ವಾದವೇ ಕಾರಣ. ನಮಗೆ ಗುರುಗಳು ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದದ ಕೃಪೆಯಿಂದ ನಾವು ಬದುಕು ಕಟ್ಟುವ” ಎಂದು ನುಡಿದರು.
ಒಡಿಯೂರು ಶ್ರೀಗುರುದೇವ ಸೇವಾ ಬಳಗ, ಮುಂಬಯಿ ಘಟಕದ ಉಪಾಧ್ಯಕ್ಷ ಬೋಳ್ನಾಡುಗುತ್ತು ಶ್ರೀ ಚಂದ್ರಹಾಸ ರೈ. ಮಾತನಾಡುತ್ತಾ “ಗ್ರಾಮದ ಜನರಿಗೆ ಅನುಕೂಲಕ್ಕಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಪೂಜ್ಯ ಶ್ರೀಗಳವರು ಮಾಡುತ್ತಿದ್ದಾರೆ. ಅವರ ಇಚ್ಛೆಗೆ ನಾವೆಲ್ಲರೂ ಸಹಕಾರ ನೀಡುವ” ಎಂದು ನುಡಿದರು.
ವೇದಿಕೆಯಲ್ಲಿ ಒಡಿಯೂರು ಶ್ರೀ ವಜ್ರಮಾತ ಮಹಿಳಾವಿಕಾಸ ಕೇಂದ್ರದ ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಶೆಟ್ಟಿ, ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀಗುರುದೇವ ಸೇವಾ ಬಳಗ, ಮುಂಬಯಿ ಘಟಕದ ಉಪಾಧ್ಯಕ್ಷ ಶ್ರೀ ದಾಮೋದರ ಎಸ್. ಶೆಟ್ಟಿ, ಗೌರವಕೋಶಾಧಿಕಾರಿ ಶ್ರೀ ರವೀಂದ್ರ ಶೆಟ್ಟಿ ಜೊತೆ ಕಾರ್ಯದರ್ಶಿ ಶ್ರೀ ಮೋಹನ್ ಹೆಗ್ಡೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಶ್ರೀ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲಿಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ – ನಾಟ್ಯ – ಹಾಸ್ಯ ವೈಭವ ಪ್ರದರ್ಶನಗೊಂಡಿತು.

 

Leave a Reply

Your email address will not be published. Required fields are marked *