×
“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” – ಒಡಿಯೂರು ಶ್ರೀ ಆಶೀರ್ವಚನ – Odiyoor Shree Gurudevadatta Samsthanam

“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” – ಒಡಿಯೂರು ಶ್ರೀ ಆಶೀರ್ವಚನ

“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” ಶ್ರೀ ದತ್ತ ಜಯಂತ್ಯುತ್ಸವ-ಹರಿಕಥಾ ಸತ್ಸಂಗ ಸಪ್ತಾಹ ಸಮಾರೋಪದಲ್ಲಿ ಒಡಿಯೂರು ಶ್ರೀ ಆಶೀರ್ವಚನ

ದ. 18.: “ಗುರುದೇವರ ಜಯಂತಿ ಉತ್ಸವ ತತ್ತ್ವಾದರ್ಶಗಳಿಗೆ ಶಕ್ತಿ ತುಂಬಲಿದೆ. ಮೋಹ ಕ್ಷಯವಾಗದೆ ಮೋಕ್ಷ ಪ್ರಾಪ್ತಿಯಾಗದು. ದತ್ತತತ್ತ್ವ ಶ್ರೇಷ್ಠವಾದದ್ದು. ವಿಶ್ವಮಾನವಧರ್ಮದ ತತ್ತ್ವ ದತ್ತತತ್ತ್ವದಲ್ಲಿ ಅಡಗಿದೆ. ಭಾರತೀಯ ಸಂಸ್ಕøತಿ ಉಜ್ಜೀವನದ ಮೂಲ. ಆತ್ಮನಿಷ್ಠ ಸಂಸ್ಕøತಿ ಭಾರತೀಯತೆಯಲ್ಲಿ ಹುದುಗಿದೆ. ನಿಜವಾದ ಶಾಂತಿ ನಮ್ಮ ಹೃದಯದೊಳಡಗಿದೆ. ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ. ಷಷ್ಠ್ಯಬ್ದ ಸಂಭ್ರಮದ ಜ್ಞಾನವಾಹಿನಿಯ ಮೂಲಕ ಇಂತಹ ಸತ್ಕಾರ್ಯಗಳು ನಡೆದಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ದತ್ತಜಯಂತಿಯ ಸಂದೇಶ ನೀಡಿದರು.
ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗದ ಸಪ್ತಾಹ ಸಮಾಪ್ತಿ ಹಾಗೂ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಹರಿಕಥಾ ಪರಿಷತ್(ರಿ.), ಮಂಗಳೂರು ಇವರು ಆಯೋಜಿಸಿದ್ದ ಹರಿಕಥಾ ಸತ್ಸಂಗ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನಗೈದ ಪೂಜ್ಯ ಶ್ರೀಗಳವರು “ತುಳು ಭಾಷೆ 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೆ ಹಿನ್ನಡೆಯಾಗಿರುವ ಬಗ್ಗೆ ಖೇದ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳ್ಳಲಿದೆ. ತಾಳ್ಮೆ-ಸಹನೆಯಿಂದ ಸಂಘಟನಾ ಶಕ್ತಿಯನ್ನು ತೋರಿಸಬೇಕಾಗಿದೆ. ಮಧುಮಕ್ಷಿಕೆಯಂತೆ ಎಲ್ಲರರೊಂದಿಗೆ ಬೆರೆಯುವ ಗುಣ ನಮ್ಮದಾಗಲಿ” ಎಂದರು.
ಷಷ್ಠಬ್ದ ಸಂಭ್ರಮ, ಮುಂಬೈ ಸಮಿತಿಯು ನವಿಮುಂಬೈನಲ್ಲಿ ಸಂಪನ್ನಗೊಳಿಸಿದ 60 ಜ್ಞಾನವಾಹಿನಿ ಕಾರ್ಯಕ್ರಮದ ಛಾಯಾಚಿತ್ರಗಳ ಸಂಗ್ರಹದ ಸಂಪುಟವನ್ನು ಪೂಜ್ಯ ಶ್ರೀಗಳವರಿಗೆ ನವಿಮುಂಬೈನ ಗುರುಭಕ್ತರು ಸಮರ್ಪಿಸಿದರು. ಸಮಾರಂಭದಲ್ಲಿ ಶ್ರೀ ಸಂಸ್ಥಾನದ ಉತ್ಸವಗಳ ವಿವರಗಳನ್ನೊಳಗೊಂಡ 2020ರ ಕಿರು ದಿನದರ್ಶಿಕೆಯನ್ನು ಪೂಜ್ಯ ಶ್ರೀಗಳವರು ಬಿಡುಗಡೆ ಮಾಡಿದರು.
ಈ ಸುಸಂದರ್ಭ ಆಕರ್ಷಕ, ಕಲಾತ್ಮಕವಾಗಿ ರಂಗವಲ್ಲಿ ಮಂಡಲ ಮೂಡಿಸುವ ಕಲಾವಿದ ವೇ|ಮೂ| ಶಿವಪ್ರಸಾದ್ ಹೊಳ್ಳ ಬಾಯಾರು ಅವರನ್ನು ಪೂಜ್ಯ ಶ್ರೀಗಳವರು ಸನ್ಮಾನಿಸಿ ಹರಸಿದರು.
ವೇದಿಕೆಯಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮುಂಬೈ ಸಮಿತಿಯ ಅಧ್ಯಕ್ಷ ಶ್ರೀ ವಾಮಯ್ಯ ಬಿ. ಶೆಟ್ಟಿ, ಕಾರ್ಯದರ್ಶಿ ಶ್ರೀ ಪ್ರಕಾಶ್ ಕೆ.ಶೆಟ್ಟಿ ಪೇಟೆಮನೆ, ನವಿಮುಂಬೈನ ಶ್ರೀ ದಾಮೋದರ ಎಸ್.ಶೆಟ್ಟಿ, ಪುಣೆ ಸಮಿತಿಯ ಅಧ್ಯಕ್ಷ ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀ ಎ. ಸುರೇಶ್ ರೈ, ನೆರುಲ್ ಶ್ರೀ ಶನಿ ಮಂದಿರದ ಧರ್ಮದರ್ಶಿ ಶ್ರೀ ರಮೇಶ್ ಪೂಜಾರಿ, ಹರಿಕಥಾ ಪರಿಷತ್‍ನ ಅಧ್ಯಕ್ಷ ಶ್ರೀ ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಯಶವಂತ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಶ್ರೀ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನಾ ಶೋಭಾಯಾತ್ರೆ, ಶ್ರೀ ತೋನ್ಸೆ ಪುಷ್ಕಳಕುಮಾರ್ ಮತ್ತು ಶ್ರೀ ಶಂನಾಡಿಗ ಕುಂಬಳೆ ಇವರಿಂದ ‘ಸೀತಾಕಲ್ಯಾಣ’ ಯುಗಳ ಹರಿಕಥೆ ನಡೆಯಿತು. ದಶಂಬರ 13ರಂದು ಶ್ರೀ ವೈ ಅನಂತಪದ್ಮನಾಭ ಭಟ್ ಅವರಿಂದ ‘ವಾಲಿಮೋಕ್ಷ’, 14ರಂದು ಶ್ರೀ ಪಿ.ವಿ.ರಾವ್ ಸುರತ್ಕಲ್ ಅವರಿಂದ ‘ಶ್ರೀದೇವಿ ವಜ್ರಮಾತಾ’ 15ರಂದು ಶ್ರೀಮತಿ ಮಂಜುಲಾ ರಾವ್ ಇರಾ ಇವರಿಂದ ‘ಪಾದುಕಾ ಪ್ರಧಾನ’, 16ರಂದು ಶ್ರೀ ರಾಮಚಂದ್ರ ಮಣಿಯಾಣಿಯವರಿಂದ ‘ಭಕ್ತ ಶಬರಿ’, 17ರಂದು ದೇವಕೀತನಯ ಕೂಡ್ಲು ಇವರಿಂದ ‘ಸುಂದರಕಾಂಡ’ ಹರಿಕಥೆ ಜರಗಿದೆ. ಶ್ರೀದತ್ತಮಹಾಯಾಗದ ಪೂರ್ಣಾಹುತಿ, ಮಹಾಪೂಜೆ, ದತ್ತ ಸಂಪ್ರದಾಯದಂತೆ ಪೂಜ್ಯ ಶ್ರೀಗಳವರಿಂದ ಮಧುಕರೀ, ರಾತ್ರಿ ರಂಗಪೂಜೆ, ಬೆಳ್ಳಿರಥೋತ್ಸವ, ಉಯ್ಯಾಲೆ ಸೇವೆ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *