‘ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಅವಶ್ಯ’ – ಪೂಜ್ಯ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಕಾರ್ಯಕ್ರಮಗಳ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ

ಒಡಿಯೂರು, ನ.05: “ಜನಸೇವೆಯೇ ಜನಾರ್ದನ ಸೇವೆ. ಮನುಷ್ಯನ ಬದುಕಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯ ಮೌಲ್ಯವರ್ಧನೆಗೆ ಪೂರಕವಾಗಿ ಜ್ಞಾನವಾಹಿನಿ ನಿರಂತರ ನಡೆಯಲು ಚಾಲನೆ ನೀಡಿದ್ದೇವೆ. ಸುಖ-ದುಃಖವನ್ನು ಹಂಚಿ ಬಾಳಬೇಕು. ಇದರ ಸಮತೋಲನಕ್ಕೆ ಅಧ್ಯಾತ್ಮ ನಮಗೆ ಮುಖ್ಯ. ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಬೇಕು. ನಾವೆಲ್ಲರೂ ಒಂದೊಂದು ಬೆಳಕಾಗಬೇಕು. ಅಂಧಾಕಾರದ ಮಸಿಯನ್ನು ತೆಗೆದಾಗ ಅಧ್ಯಾತ್ಮದ ಬೆಳಕು ಬೆಳಗುತ್ತದೆ. ಜ್ಞಾನದ ಬೆಳಕು ಎಲ್ಲರಲ್ಲೂ ಬೆಳಗಲಿ” ಎಂದು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜರಗಿದ ಪೂಜ್ಯ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಕಾರ್ಯಕ್ರಮಗಳ ಸಮಾಲೋಚನಾ ಸಭೆಯಲ್ಲಿ ದೀಪಾವಳಿಯ ಸಂದೇಶ ನೀಡಿದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಮಾಜದಿಂದ ಸಮಾಜಕ್ಕೆ ಎಂಬ ಕಾರ್ಯಕ್ರಮ ಇದಾಗಿದೆ. ಸಮಾಜದ ಋಣ ತೀರಿಸುವುದೇ ದೊಡ್ಡ ಠೇವಣಿ. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ಸತ್ಫಲ ಪ್ರಾಪ್ತಿಯಾಗುತ್ತದೆ” ಎಂದು ಆಶೀರ್ವಚನಗೈದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ ಆಳ್ವ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದಶಂಬರ 8ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಸಂಸ್ಥಾನದ ರಾಜಾಂಗಣ ಲೋಕಾರ್ಪಣೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಜರಗುವ ಸಹಕಾರ ಸಂಭ್ರಮ, ಸಾಧು ಸಮಾವೇಶ ಹಾಗೂ ಹಿರಿಯ ಸಾಧಕರಿಗೆ ಸನ್ಮಾನ ಈ ಎಲ್ಲಾ ಕಾರ್ಯಕ್ರಮಗಳ ವಿವರಗಳನ್ನು ಸಭೆಯ ಮುಂದಿಟ್ಟರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿಯವರು ಮಂಗಳೂರು ನಗರ ಸಮಿತಿಯ ಕಾರ್ಯಕ್ರಮಗಳ ವಿವರಗಳನ್ನು ನೀಡಿ ಪ್ರಸ್ತಾವನೆಗೈದರು. ಶ್ರೀ ಸರಪಾಡಿ ಅಶೋಕ್ ಶೆಟ್ಟಿಯವರು ಬಂಟ್ವಾಳ ಸಮಿತಿಯ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಿದರು.
ಸಭೆಯಲ್ಲಿ ಷಷ್ಠ್ಯಬ್ದ ಸಂಭ್ರಮ, ಮಂಗಳೂರು ವಲಯ ಸಮಿತಿಯವರು ಸಂಘಟಿಸಿರುವ ಶ್ರೀ ದತ್ತಾಂಜನೇಯ ಸಂಕೀರ್ತನಾ ಮತ್ತು ಹನುಮಾನ್ ಚಾಲೀಸಾ ಪಠಣ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಪೂಜ್ಯ ಶ್ರೀಗಳವರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಸಂಘಟನಾ ಕಾರ್ಯದರ್ಶಿ ಶ್ರೀ ಚಂದ್ರಹಾಸ ಶೆಟ್ಟಿ, ಬಿ.ಸಿ.ರೋಡ್, ಕೋಶಾಧಿಕಾರಿ ಶ್ರೀ ಎ. ಸುರೇಶ್ ರೈ, ಸಹಕೋಶಾಧಿಕಾರಿ ಶ್ರೀ ಎ. ಅಶೋಕ್ ಕುಮಾರ್ ಬಿಜೈ, ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಶ್ರೀ ಕೆ. ಸೀತಾರಾಮ ರೈ ಸವಣೂರು, ಕಾಸರಗೋಡು ಸಮಿತಿಯ ಅಧ್ಯಕ್ಷ ಶ್ರೀ ಕೆ.ಎನ್. ವೆಂಕಟರಮಣ ಹೊಳ್ಳ, ಬಂಟ್ವಾಳ ಸಮಿತಿಯ ಅಧ್ಯಕ್ಷ ಶ್ರೀ ಜಗನ್ನಾಥ ಚೌಟ ಬದಿಗುಡ್ಡೆ, ಸಹಕಾರಿ ಸಂಭ್ರಮ ಸಮಿತಿಯ ಸಂಚಾಲಕ ಶ್ರೀ ಹರೀಶ್ ಆಚಾರ್ಯ ಮಂಗಳೂರು, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಬಾಬು ಉರ್ವ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ವಂದಿಸಿದರು.