“ವೈದ್ಯ ಮಾರ್ಗಕ್ಕೆ ಪ್ರವರ್ತಕರೇ ಶ್ರೀ ಧನ್ವಂತರೀ ದೇವರು” – ಒಡಿಯೂರು ಶ್ರೀ
ನ.02: “ವೈದ್ಯಮಾರ್ಗಕ್ಕೆ ಪ್ರವರ್ತಕರೇ ವಿಷ್ಣುವಿನ ಅವತಾರಿ ಶ್ರೀ ಧನ್ವಂತರೀ ದೇವರು. ವಾತ, ಪಿತ್ತ, ಕಫಗಳಿಂದ ಬರುವ ರೋಗಗಳಿಗೆ ಧನ್ವಂತರೀ ದೇವರ ಆರಾಧನೆಯಿಂದ ಪರಿಹಾರ ಪ್ರಾಪ್ತಿಯಾಗುತ್ತದೆ. ನಮ್ಮ ಮನಸ್ಸಿಗೆ ಮತ್ತು ಆಹಾರಕ್ಕೆ ನಿಕಟವಾದ ಸಂಬಂಧವಿದೆ. ಆಹಾರವನ್ನು ಸೇವಿಸುವಾಗ ಔಷಧವೆಂದೇ ಭಾವಿಸಬೇಕು. ಆಗ ಮಾತ್ರ ಶರೀರದ ಬೆಳವಣಿಗೆಗೆ ಪೂರಕವಾಗುತ್ತದೆ. ಹಿತ-ಮಿತ-ಋತುಗಳಿಗೆ ಸರಿಯಾಗಿ ಉಣ್ಣುವುದರಿಂದ ಆದಿ-ವ್ಯಾದಿಗಳಿಗೆ ಕಡಿವಾಣ ಹಾಕಬಹುದು; ಆರೋಗ್ಯವನ್ನೂ ಕಾಪಿಡಬಹುದು. ಈ ಸಂಬಂಧವಾಗಿ ಶಾಸ್ತ್ರ-ಪುರಾಣಗಳಲ್ಲಿ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಅದನ್ನು ಪಾಲನೆ ಮಾಡಿದಾಗ ಸಾರ್ಥಕ ಬದುಕು ನಮ್ಮದಾಗಬಹುದು. ಶ್ರೀ ಧನ್ವಂತರೀ ದೇವರ ಆರಾಧನೆಯ ಮೂಲಕ ಕೋರೋನಾ ಮಾತ್ರವಲ್ಲದೆ ಇನ್ನು ಮುಂದೆ ಬಾಧಿಸುವ ಎಲ್ಲಾ ರೋಗಗಳು ನಿವಾರಣೆಯಾಗಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಧನ್ವಂತರೀ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದರು.
ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಧನ್ವಂತರೀ ಹವನ ಸಂಪನ್ನಗೊಂಡಿತು. ಈ ಸುಸಂದರ್ಭ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಹಾಗೂ ಗುರುಬಂಧುಗಳು ಉಪಸ್ಥಿತರಿದ್ದರು.