ಕೋವಿಡ್ ನಿಯಮ ಅನುಸರಿಸಿ ಜನ್ಮದಿನೋತ್ಸವ (ಗ್ರಾಮೋತ್ಸವ) ಆಚರಣೆ- ಒಡಿಯೂರು ಶ್ರೀ
“ಗುರುಭಕ್ತರು ತಮ್ಮ ತಮ್ಮ ಮನೆಯಲ್ಲೇ ಇದ್ದು ಹನುಮಾನ್ ಚಾಲೀಸಾ ಪಠಣದ ಮೂಲಕ ಜನ್ಮದಿನವನ್ನು ಆಚರಿಸಬಹುದು. ಎಲ್ಲರ ಒಳಿತಿಗಾಗಿ ಸನ್ನಿಧಿಯಲ್ಲಿ ನಾವು ಪ್ರಾರ್ಥಿಸುತ್ತೇವೆ. ಶ್ರೀ ಸಂಸ್ಥಾನದಲ್ಲಿ ಸರಳ ರೀತಿಯಲ್ಲಿ ಶ್ರೀ ಗುರುಪಾದುಕಾರಾಧನೆ ನಡೆಯುತ್ತದೆ. ಯಾವುದೇ ಲೋಪ ಬಾರದಂತೆ ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸೋಣ. ಕಾಯಿಲೆಯ ಬಗ್ಗೆ ಜಾಗೃತಿ ಇರಲಿ. ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡೋಣ. ಷಷ್ಠ್ಯಬ್ದ ಸಂಭ್ರಮದ ಕಾರ್ಯಕ್ರಮಗಳನ್ನು ಕೋವಿಡ್ ನಿಯಮಗಳು ಸಡಿಲಗೊಂಡಾಗ ಪೂರ್ಣಗೊಳಿಸೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜರಗಿದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವದ ಸಮಾಲೋಚನಾ ಸಭೆಯಲ್ಲಿ ಕರೆ ನೀಡಿದರು.
ಸಭೆಯಲ್ಲಿ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಕೋಶಾಧಿಕಾರಿಗಳಾದ ಶ್ರೀ ಎ. ಸುರೇಶ್ ರೈ, ಕಾಸರಗೋಡು ಸಮಿತಿಯ ಅಧ್ಯಕ್ಷ ಶ್ರೀ ಕೆ.ಎನ್. ವೆಂಕಟರಮಣ ಹೊಳ್ಳ, ಮಂಜೇಶ್ವರ ಸಮಿತಿಯ ಗೌರವಾಧ್ಯಕ್ಷ ಡಾ. ಶ್ರೀಧರ ಭಟ್, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್ಕುಮಾರ್, ವಿಟ್ಲ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ದಂಬೆಕಾನ ಇವರುಗಳು ಉಪಸ್ಥಿತರಿದ್ದರು.
ಒಡಿಯೂರು ಶ್ರೀ ವಜ್ರಮತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಪುತ್ತೂರು ಸಮಿತಿಯ ಕಾರ್ಯದರ್ಶಿ ಶ್ರೀ ಹರಿಣಾಕ್ಷಿ ಜೆ. ಶೆಟ್ಟಿ, ಶ್ರೀ ದೇವಿಪ್ರಸಾದ್ ಶೆಟ್ಟಿ ಅನಂತಾಡಿ ಮೊದಲಾದವರು ತಮ್ಮ ಸಲಹೆಗಳನ್ನು ಸಭೆಯ ಮುಂದಿಟ್ಟರು. ಸಮಿತಿಯ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.