×
ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂಪನ್ನ – Odiyoor Shree Gurudevadatta Samsthanam

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂಪನ್ನ

“ಆದಿಗುರು ದತ್ತಾತ್ರೇಯರು ವಿಶ್ವ ಮಾನವ ಧರ್ಮವನ್ನು ಜಗತ್ತಿಗೆ ಪಸರಿಸಿದವರು. ದತ್ತ ತತ್ತ್ವದ ಚಿಂತನೆ ಪಾಲನೆಯಿಂದ ಸಮರಸದ ಜೀವನ ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತ ಜಯಂತ್ಯುತ್ಸವದ ಧರ್ಮಸಭೆಯಲ್ಲಿ ಸಂದೇಶ ನೀಡಿದರು.
ಅವರು ಪ್ರೊ. ವಿ.ಬಿ. ಅರ್ತಿಕಜೆಯವರು ಕನ್ನಡಕ್ಕೆ ಅನುವಾದಿಸಿದ ‘ಶ್ರೀ ದತ್ತಾಂಜನೇಯ ಸಹಸ್ರನಾಮ’ ಪುಸ್ತಕವನ್ನು ಲೋಕಾರ್ಪಣೆಗೈದು “ಭಾರತೀಯ ಪದ್ಧತಿಯಂತೆ ಆಹಾರ ಅನುಸರಿಸುವವರಿಗೆ ಯಾವ ರೋಗಾಣುವೂ ಬಾಧಿಸದು. ಅಧ್ಯಾತ್ಮದ ಕೊನೆ ಆನಂದದಲ್ಲಿದ್ದು, ಸಾಧಕರಿಗೆ ಕ್ಷಮಾಗುಣ ದಾರಿದೀಪ ಇದ್ದಂತೆ” ಎಂದರು.
ಶ್ರೀ ಸಂಸ್ಥಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರದ ನೀಲನಕಾಶೆಯನ್ನು ಮಂಗಳೂರಿನ ಖ್ಯಾತ ಉದ್ಯಮಿ ಜಿತೇಂದ್ರ ಕೊಟ್ಟಾರಿ ಅನಾವರಣಗೈದರು.
‘ದತ್ತಪ್ರಕಾಶ’ ಆಧ್ಯಾತ್ಮಿಕ ದ್ವೈಮಾಸಿಕದ ದಶಂಬರ-ಜನವರಿ ತಿಂಗಳ ಸಂಚಿಕೆಯನ್ನು ಪ್ರೊ. ವಿ.ಬಿ.ಅರ್ತಿಕಜೆಯವರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಪ್ರೊ. ವಿ.ಬಿ. ಅರ್ತಿಕಜೆ ಪುತ್ತೂರು, ಮುಂಬೈನ ಉದ್ಯಮಿಗಳಾದ ಶ್ರೀ ವಾಮಯ್ಯ ಬಿ. ಶೆಟ್ಟಿ, ಬಿ.ಸಿ. ರೋಡ್ ರಂಗೋಲಿ ಹೋಟೆಲಿನ ಮ್ಹಾಲಕ ಶ್ರೀ ಚಂದ್ರಹಾಸ ಶೆಟ್ಟಿ, ನಮ್ಮ ಕುಡ್ಲ ವಾಹಿನಿಯ ಆಡಳಿತ ಪಾಲುದಾರರಾದ ಶ್ರೀ ಲೀಲಾಕ್ಷ ಕರ್ಕೇರ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಶೆಟ್ಟಿ, ಪುಣೆ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ ಪಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‍ಕುಮಾರ್, ತಿರುವನಂತಪುರದ ಶ್ರೀ ಅಜಿತ್‍ಕುಮಾರ್ ಪಂದಳಮ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಶ್ರೀ ಎ. ಸುರೇಶ್ ರೈ ಉಪಸ್ಥಿತರಿದ್ದರು.
ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಶ್ರೀ ಯಶವಂತ ವಿಟ್ಲ ನಿರೂಪಿಸಿದರು. ಶ್ರೀ ಮಾತೇಶ್ ಭಂಡಾರಿ ವಂದಿಸಿದರು.
ಬೆಳಿಗ್ಗೆ ಶ್ರೀ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನಾ ಶೋಭಾಯಾತ್ರೆ, ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ ನಡೆಯಿತು. ಮಧ್ಯಾಹ್ನ ಶ್ರೀ ದತ್ತ ಮಹಾಯಾಗ ಸಪ್ತಾಹದ ಪೂರ್ಣಾಹುತಿ, ಮಹಾಪೂಜೆ, ಪೂಜ್ಯ ಶ್ರೀಗಳವರಿಂದ ಮಧುಕರೀ; ಮಂತ್ರಾಕ್ಷತೆಯ ಬಳಿಕ ಮಹಾಸಂತರ್ಪಣೆ ಜರಗಿತು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಯಕ್ಷಪ್ರತಿಭೆ (ರಿ.), ಮಂಗಳೂರು ಇವರಿಂದ ಯಕ್ಷಗಾನ ಕಲಾವಿದ ಶ್ರೀ ಸಂಜಯಕುಮಾರ್ ಶೆಟ್ಟಿ ಗೋಣಿಬೀಡು ಇವರ ಸಂಯೋಜನೆಯಲ್ಲಿ ‘ಚೂಡಾಮಣಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ರಾತ್ರಿ ರಂಗಪೂಜೆ, ಬೆಳ್ಳಿರಥೋತ್ಸವ, ಉಯ್ಯಾಲೆ ಸೇವೆಗಳು ನಡೆಯಿತು.

Leave a Reply

Your email address will not be published. Required fields are marked *