“ತ್ಯಾಗದಿಂದ ಕೂಡಿದ್ದರೆ ಬದುಕು ಸಾರ್ಥಕ” ಶ್ರೀ ದತ್ತಮಾಲಾಧಾರಣೆಗೈದು ಒಡಿಯೂರು ಶ್ರೀ ಆಶೀರ್ವಚನ
“ಬೋಗದ ಬದುಕು ನಿಜಾರ್ಥದ ಬದುಕಲ್ಲ. ತ್ಯಾಗದಿಂದ ಕೂಡಿದ್ದರೆ ಮಾತ್ರ ಬದುಕು ಸಾರ್ಥಕವೆನಿಸುತ್ತದೆ. ಸಮರಸ ತತ್ತ್ವವೆನಿಸಿದ ಗುರುತತ್ತ್ವ ಪ್ರತಿಯೊಬ್ಬರ ಬದುಕಿನಲ್ಲಿಯೂ ಅನುಷ್ಠಾನವಾಗಬೇಕಿದೆ. ಸಮುದ್ರದ ವಾತಾವರಣ ವ್ಯತ್ಯಯವಾದಾಗ ಸುನಾಮಿಗಳು ಏಳುವಂತೆ ನಮ್ಮ ಶರೀರದಲ್ಲಿ ಕಾಮ, ಕ್ರೋಧಗಳು ಅಧಿಕವಾದಾಗಲೂ ತ್ರಿಕರಣಾದಿಯಾಗಿ ಎಲ್ಲವೂ ಏರುಪೇರಾಗಬಹುದು. ಬದುಕಿನ ಅಥ್ ಅರಿವಾದಾಗ ನಾವು ಉತ್ತಮರಾಗುತ್ತೇವೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂದರ್ಭ ಭಗವದ್ಭಕ್ತರಿಗೆ ಶ್ರೀ ದತ್ತ ಮಾಲಾಧಾರಣೆಗೈದು ಆಶೀರ್ವಚನಗೈದರು.
ಬಳಿಕ ಶ್ರೀ ಗುರುಚರಿತಾಮೃತ ಪ್ರವಚನ ಕಾರ್ಯಕ್ರಮಕ್ಕೆ ದೀಪೋಜ್ವಲನಗೈದು ಚಾಲನೆ ನೀಡಿದರು. ನಿವೃತ್ತ ಪ್ರಾಂಶುಪಾಲರಾದ ಪ್ರೊ. ಚಂದ್ರಪ್ರಭಾ ಆರ್. ಹೆಗ್ಡೆ ಪ್ರವಚನ ಮಾಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಪೂಜ್ಯ ಶ್ರೀಗಳವರ ಮಾತೃಶ್ರೀ ಶ್ರೀಮತಿ ಅಂತಕ್ಕೆ, ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಅಶೋಕ್‍ಕುಮಾರ್ ಎ. ಬಿಜೈ, ಮುಂಬೈ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು, ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈ ಉಪಸ್ಥಿತರಿದ್ದರು.
ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತ ಮಹಾಯಾಗ ಆರಂಭಗೊಂಡಿತು. ಅಪರಾಹ್ಣ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶ್ರೀ ಡಿ. ಮನೋಹರಕುಮಾರ್ ಯಕ್ಷ ಬಳಗ ಮಂಗಳೂರು ಇವರಿಂದ ‘ಶ್ರೀ ರಾಮ ದರ್ಶನ-ಕೃಷ್ಣಾನುಗ್ರಹ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸಂಜೆ ಶ್ರೀ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ ಬಳಿಕ ರಂಗಪೂಜೆ, ಬೆಳ್ಳಿರಥೋತ್ಸವ ಜರಗಿತು.